ಕಾನೂನು ಬಾಹಿರವಾಗಿ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಜಾಗ; ಹೋರಾಟದ ಎಚ್ಚರಿಕೆ ನೀಡಿದ ಜಿ.ಎಸ್. ಬಸವರಾಜು
Tumkur News: ತುಮಕೂರು ನಗರದ ಮರಳೂರು ಗ್ರಾಮದ ಸರ್ವೆ ನಂಬರ್ 87/1 ಮತ್ತು 87/2ರಲ್ಲಿ ಒಟ್ಟು 4 ಎಕೆರೆ ಜಮೀನಿನಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಾಗಿದ್ದ ನಗರಪಾಲಿಕೆಯ ಎರಡು ಎಕರೆ ಜಮೀನನ್ನು ರಾಜ್ಯ ಸರ್ಕಾರ ಕಾನೂನು ಬಾಹೀರವಾಗಿ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡಿದೆ. ಪೋಡಿ, ಸ್ಕೆಚ್ ಆಗದ ಜಮೀನನ್ನು ನಿಯಮ ಉಲ್ಲಂಘಿಸಿ ಮಂಜೂರಾತಿ ಪತ್ರವನ್ನು ನೋಂದಣಿ ಮಾಡಲಾಗಿದೆ ಎಂದು ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆಯ ಅಧ್ಯಕ್ಷ ಜಿ.ಎಸ್.ಬಸವರಾಜು ಆರೋಪಿಸಿದ್ದಾರೆ.

-

ತುಮಕೂರು: ನಗರದ ಮರಳೂರು ಗ್ರಾಮದ (Tumkur News) ಸರ್ವೆ ನಂಬರ್ 87/1 ಮತ್ತು 87/2ರಲ್ಲಿ ಒಟ್ಟು 4 ಎಕೆರೆ ಜಮೀನಿನಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಾಗಿದ್ದ ನಗರಪಾಲಿಕೆಯ ಎರಡು ಎಕರೆ ಜಮೀನನ್ನು ರಾಜ್ಯ ಸರ್ಕಾರ ಕಾನೂನು ಬಾಹೀರವಾಗಿ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡಿದೆ. ಪೋಡಿ, ಸ್ಕೆಚ್ ಆಗದ ಜಮೀನನ್ನು ನಿಯಮ ಉಲ್ಲಂಘಿಸಿ ಮಂಜೂರಾತಿ ಪತ್ರವನ್ನು ನೋಂದಣಿ ಮಾಡಲಾಗಿದೆ ಎಂದು ಆರೋಪಿಸಿರುವ ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆಯ ಅಧ್ಯಕ್ಷ ಜಿ.ಎಸ್.ಬಸವರಾಜು ಅವರು, ಇದರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿ ತನಿಖೆಗೆ ಕೋರಿರುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಈ ಅಕ್ರಮ ಆದೇಶವನ್ನು ರದ್ದು ಮಾಡಿ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ನೋಂದಣಿಯಾಗಿರುವ ಜಮೀನನ್ನು ನಗರಪಾಲಿಕೆಗೆ ವಾಪಸ್ ನೀಡಿ, ಸಾರ್ವಜನಿಕ ಉದ್ದೇಶದ ಬಳಕೆಗೆ ಮಾಡಿಕೊಡಬೇಕು. ಅಲ್ಲಿಯವರೆಗೂ ಕಾನೂನು ಹೋರಾಟ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದರು.
ಮರಳೂರು ಗ್ರಾಮದ ಸರ್ವೆ ನಂಬರ್ 87/1 ಮತ್ತು 87/2ರಲ್ಲಿ ಒಟ್ಟು ನಾಲ್ಕು ಎಕರೆ ಜಮೀನನ್ನು 1942ರಲ್ಲಿ ಭೂಸ್ವಾಧೀನ ಮಾಡಿಕೊಂಡು ತುಮಕೂರು ಟೌನ್ ಮುನಿಸಿಪಾಲಿಟಿಗೆ ಕಸ ವಿಲೇವಾರಿ ಉದ್ದೇಶಕ್ಕೆ ನೀಡಲಾಗಿತ್ತು. ಇದರಲ್ಲಿ ಎರಡು ಎಕರೆ ಜಮೀನನ್ನು ರಾಜೀವ್ ಗಾಂಧಿ ಅರ್ಬನ್ ಅಂಡ್ ರೂರಲ್ ಡೆವಲಪ್ಮೆಂಟ್ ಸಂಸ್ಥೆಗೆ ಮಂಜೂರು ಮಾಡಬೇಕೆಂದು 25.9.2023ರಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುತ್ತಾರೆ. ಸದರಿ ಟ್ರಸ್ಟ್ 21.8.2023ಕ್ಕೆ ನೋಂದಾಯಿತವಾಗಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸದರಿ ಭೂ ಮಂಜೂರಾತಿಗೆ ಶಿಫಾರಸ್ಸನ್ನು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿರುತ್ತಾರೆ. ಸರ್ಕಾರದ ಆದೇಶ ಸಂಖ್ಯೆ:ನಅಇ 129 ಟಿಎಂಡಿ 2002 ಬೆಂಗಳೂರು ದಿ.2.6.2003ರ ಕರ್ನಾಟಕ ಸರ್ಕಾರದ ನಡವಳಿಯಂತೆ ಮಹಾನಗರ ಪಾಲಿಕೆಗಳಿಗೆ ಸೇರಿದ ಜಮೀನುಗಳನ್ನು ವಿಲೇವಾರಿ ಮಾಡಲು ಮಾರ್ಗಸೂಚಿಗಳನ್ನು ನೀಡಲಾಗಿದ್ದು ಸದರಿ ಮಾರ್ಗಸೂಚಿಗಳನ್ವಯ ಕ್ರಮ ಸಂಖ್ಯೆ: 05ರಲ್ಲಿ ನಂತೆ ಸಾರ್ವಜನಿಕ ಹರಾಜು ಮೂಲಕ ವಿಲೇಪಡಿಸಲು ಅವಕಾಶವಿರುತ್ತದೆ ಎಂದು ಅಧಿಕಾರಿಗಳು ಸರ್ಕಾರಕ್ಕೆ ತಿಳಿಸಿರುತ್ತಾರೆ. ಇದಕ್ಕೆ ಕಾರ್ಪೊರೇಷನ್ ಆದೇಶವಾಗಬೇಕಿರುತ್ತದೆ. ಪ್ರಸ್ತುತ ಪ್ರಕರಣದಲ್ಲಿ ಕಾರ್ಪೊರೇಷನ್ ಆಗಲಿ, ಆಡಳಿತಾಧಿಕಾರಿಯಾಗಲಿ ಸಕಾರಣ ನೀಡಿ ಆದೇಶ ಬರೆದಿರುವುದಿಲ್ಲ ಎಂದು ಅವರು ಹೇಳಿದರು.
ಸ್ಟಾಂಪ್ ಶುಲ್ಕ ವಿನಾಯಿತಿ ನೀಡಲು ಸರ್ಕಾರದ ಅಧಿಕೃತ ಆದೇಶವಿರಬೇಕು. ಅಂತಹ ಯಾವುದೇ ಆದೇಶವಿಲ್ಲದೆ ಕ್ರಯಪತ್ರದಲ್ಲಿ ಮಿಟರ್ ಲೆಕ್ಕದಲ್ಲಿ ವಿಸ್ತೀರ್ಣ ಬರೆದು 7587.85 ಸ್ಕ್ವಯರ್ ಮೀಟರ್ (ಸುಮಾರು 1 ಎಕರೆ 35 ಗುಂಟೆ) ಎಸ್.ಆರ್.ವ್ಯಾಲ್ಯೂ 30 ಸಾವಿರ ರೂ. ಚ.ಮೀ. 22,76,35,576 ರೂ. ಇರುವ ಆಸ್ತಿ ಕೇವಲ 17 ಲಕ್ಷ ರೂ.ಗಳ ಅಪಮೌಲ್ಯ ಮಾಡಿ ಸ್ಟಾಂಪ್ ಶುಲ್ಕ ಮತ್ತು ನೋಂದಣಿ ಶುಲ್ಕ ಕಟ್ಟಿಸಿರುವುದೂ ಕಾನೂನು ಬಾಹೀರವಾಗಿದೆ. ಇಲ್ಲಿ ಸುಮಾರು 25 ಕೋಟಿ ರೂ.ಗೂ ಅಧಿಕ ನಷ್ಟವನ್ನು ಮಾಡಿದೆ ಎಂದು ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆಯ ಅಧ್ಯಕ್ಷ ಜಿ.ಎಸ್.ಬಸವರಾಜು ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆಯ ಉಪಾಧ್ಯಕ್ಷ ಜಿ.ಕೆ. ಶ್ರೀನಿವಾಸ್, ಜಂಟಿ ಕಾರ್ಯದರ್ಶಿ ವಿಜಯಕುಮಾರ್, ಕೆ. ಶಂಕರ್ ಉಪ್ಪಾರಹಳ್ಳಿ ಹಾಜರಿದ್ದರು.
ಈ ಸುದ್ದಿಯನ್ನೂ ಓದಿ | Bengaluru Rains: ಸಿಲಿಕಾನ್ ಸಿಟಿಯ ಹಲವೆಡೆ ಅಬ್ಬರಿಸಿದ ವರುಣ; ನಾಳೆ ರಾಜ್ಯದ ಎಲ್ಲೆಲ್ಲಿ ಮಳೆಯಾಗಲಿದೆ?