ತುಮಕೂರು: ಲಭ್ಯವಿರುವ ಇಂಧನ ಸಂಪನ್ಮೂಲಗಳನ್ನು ಹಿತ-ಮಿತವಾಗಿ ಬಳಸುವ ಮೂಲಕ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸಂಕಷ್ಟಕ್ಕೆ ಸಿದ್ಧರಾಗಬೇಕು ಎಂದು ಸಾರ್ವಜನಿಕರಿಗೆ ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಹತ್ವದ ಕಿವಿಮಾತು ಹೇಳಿದರು.
ಶ್ರೀ ಮಠದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೀರು, ವಿದ್ಯುತ್ ಮತ್ತು ಗ್ಯಾಸ್ ಅತ್ಯಂತ ಅಮೂಲ್ಯವಾದವು. ಪ್ರತಿಯೊಂದು ವಸ್ತುವನ್ನು ಖರ್ಚು ಮಾಡುವಾಗ ಕನಿಷ್ಠ ಐದು ಬಾರಿ ಯೋಚಿಸಬೇಕು ಎಂದರು.
ನಮ್ಮ ಬಳಿ ಸಂಪನ್ಮೂಲಗಳು ಅಧಿಕವಾಗಿದ್ದರೂ, ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಮಿತವಾಗಿ ಬಳಸಬೇಕು. ನಮಗೆ ಲಭ್ಯವಿರುವ ಸೌಲಭ್ಯಗಳು ಇನ್ನೊಬ್ಬರಿಗೂ ಸಿಗಲಿ ಎಂಬ ಉದಾತ್ತ ಉದ್ದೇಶ ಮತ್ತು ಉದಾರತೆ ಪ್ರತಿಯೊಬ್ಬರಲ್ಲೂ ಇರಲಿ ಎಂದು ಆಶಯ ವ್ಯಕ್ತಪಡಿಸಿದರು.
ಇಸ್ರೇಲ್-ಇರಾನ್ ಯುದ್ಧದ ಪರಿಣಾಮವಾಗಿ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ಪಿಜಿ ಗ್ಯಾಸ್ ಬೆಲೆ ಏರಿಕೆಯಾಗುವ ಅಥವಾ ಅಭಾವ ಉಂಟಾಗುವ ಭೀತಿ ಇದೆ. ಇಂತಹ ಸಮಯದಲ್ಲಿ ಸಾಮಾನ್ಯ ಜನರು ಮಿತವ್ಯಯದ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ. ಸಿದ್ದಗಂಗಾ ಶ್ರೀಗಳ ಈ ಕರೆ ಕೇವಲ ಧಾರ್ಮಿಕ ಚೌಕಟ್ಟಿಗೆ ಸೀಮಿತವಾಗಿಲ್ಲ, ಬದಲಾಗಿ ಇದು ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಸಾಮಾನ್ಯ ಜನರಿಗೆ ನೀಡಿದ ದೂರದೃಷ್ಟಿಯ ಸಂದೇಶವಾಗಿದೆ. ನಮಗೆ ಸಿಕ್ಕ ಸೌಲಭ್ಯಗಳು ಮುಂದಿನ ಪೀಳಿಗೆಗೂ ಸಿಗಬೇಕೆಂದರೆ ಇಂದೇ ಉಳಿತಾಯ ಮಾಡುವುದು ಅವಶ್ಯಕ ಎಂದರು.
ಅಡುಗೆಗಾಗಿ ಸೌದೆ ಬಳಕೆ
ಸಾವಿರಾರು ವಿದ್ಯಾರ್ಥಿಗಳಿಗೆ ದಾಸೋಹ ನೀಡುವ ಸಿದ್ಧಗಂಗಾ ಮಠದಲ್ಲಿ ಈಗಾಗಲೇ ಗ್ಯಾಸ್ ಬಳಕೆಯನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು. 'ಮಠದಲ್ಲಿ ಈಗ ಅಡುಗೆಗಾಗಿ ಸೌದೆ ಮತ್ತು ಅಡಿಕೆ ಸಿಪ್ಪೆಯನ್ನು ಇಂಧನವಾಗಿ ಬಳಸಲಾಗುತ್ತಿದೆ. ಚಪಾತಿ ಮಾಡುವಂತಹ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಗ್ಯಾಸ್ ಬಳಸಲಾಗುತ್ತಿದೆ. ನಮಗೆ ಲಭ್ಯವಿರುವ ಪರ್ಯಾಯ ಇಂಧನಗಳನ್ನು ಬಳಸುವ ಮೂಲಕ ಅನಿಲ ಉಳಿತಾಯಕ್ಕೆ ನಾವು ಮುಂದಾಗಿದ್ದೇವೆ ಎಂದರು.
ಗೋಬರ್ ಗ್ಯಾಸ್ ಬಳಕೆ
ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ಮಠದಲ್ಲಿ ಗೋಬರ್ ಗ್ಯಾಸ್ ಪ್ಲಾಂಟ್ ಅಳವಡಿಸುವ ಆಲೋಚನೆಯೂ ಇದೆ. ನೈಸರ್ಗಿಕ ಮೂಲಗಳಿಂದ ಇಂಧನ ಪಡೆಯುವ ಮೂಲಕ ಗ್ಯಾಸ್ ಮೇಲಿನ ಅವಲಂಬನೆಯನ್ನು ತಗ್ಗಿಸುವುದು ಇದರ ಉದ್ದೇಶವಾಗಿದೆ. ಯುದ್ಧದಂತಹ ಅನಿಶ್ಚಿತ ಪರಿಸ್ಥಿತಿಯಲ್ಲಿ ನಾವು ಲಭ್ಯವಿರುವ ಸಂಪನ್ಮೂಲಗಳನ್ನು ಗೌರವಿಸಬೇಕು. ದುಂದುವೆಚ್ಚ ಮಾಡುವುದು ಸಮಾಜಕ್ಕೆ ಮಾಡುವ ದ್ರೋಹ ಎಂದು ನುಡಿದರು.