ತುಮಕೂರು, ಸೆ.29: ಮನೆ ಇಲ್ಲದೆ ನಿರಾಶ್ರಿತರಾಗಿದ್ದ ತುಮಕೂರು ತಾಲೂಕಿನ (Tumkur News) ಹೊನ್ನಡಿಕೆ ಹ್ಯಾಂಡ್ ಪೋಸ್ಟ್ ಸಮೀಪದ ವಡ್ಡರಹಳ್ಳಿಯ ಬಡ ಕುಟುಂಬಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಯೋಜನೆಯಡಿ ಮನೆ ನಿರ್ಮಿಸಿ ಫಲಾನುಭವಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ನಿರಾಶ್ರಿತರಿಗೆ ಮನೆ ನೀಡಬೇಕೆಂಬ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಮಹತ್ವಾಕಾಂಕ್ಷೆಯ ವಾತ್ಸಲ್ಯ ಯೋಜನೆಯಡಿ ಮನೆ ಕಟ್ಟಿಸಿ ವಡ್ಡರಹಳ್ಳಿಯ ಗಂಗಮ್ಮ, ಸೂಲಯ್ಯ ದಂಪತಿಗೆ ನೂತನ ಮನೆ ಹಸ್ತಾಂತರಿಸಿ ಮಾತನಾಡಿದ ಧರ್ಮಸ್ಥಳ ಸಂಸ್ಥೆ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಅವರು, ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಬರುವ ವಾತ್ಸಲ್ಯ ಕಾರ್ಯಕ್ರಮದಲ್ಲಿ ನಿರ್ಗತಿಕರಿಗೆ ಪ್ರತಿ ತಿಂಗಳು ಮಾಸಾಶನ ಮತ್ತು ಸೂರು ಇಲ್ಲದವರಿಗೆ ಮನೆ ನಿರ್ಮಾಣ ಮಾಡಿ ಹಸ್ತಾಂತರಿಸುವ ಕಾರ್ಯವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ ಎಂದು ಹೇಳಿದರು.
ಧರ್ಮಸ್ಥಳ ಸಂಸ್ಥೆ ಯೋಜನೆಯ ಅನ್ನದಾನ, ವಿದ್ಯಾದಾನ, ಔಷಧ ದಾನ ಮತ್ತು ಅಭಯದಾನ ಎಂಬ ಚತುರ್ದಾನಗಳ ಬಗ್ಗೆ ಮಾಹಿತಿ ನೀಡಿದ ಅವರು, ನಿರ್ಗತಿಕರು ನಿರಾಶರಾಗುವುದು ಬೇಡ, ನಿಮ್ಮ ನೆರವಿಗೆ ಧರ್ಮಸ್ಥಳ ಸಂಸ್ಥೆ ಇದೆ ಎಂಬ ಅಭಯ ನೀಡಿದರು.
ಜನಜಾಗೃತಿ ವೇದಿಕೆ ಅಧ್ಯಕ್ಷ ಆರ್. ಕಾಮರಾಜ್ ಮಾತನಾಡಿ, ಸರ್ಕಾರ ಮಾಡಲು ಸಾಧ್ಯವಾಗದ ಎಷ್ಟೋ ಕೆಲಸಗಳನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಾ ಬರುತ್ತಿದೆ. ಇಂತಹ ಸಮಾಜಮುಖಿ, ಸೇವಾ ಕಾರ್ಯಕ್ರಮಗಳು ಬಡವರಿಗೆ ನಿರ್ಗತಿಕರಿಗೆ ಆಸರೆ ಆಗಿವೆ. ಧರ್ಮಸ್ಥಳ ಸಂಸ್ಥೆಯ ಸೇವಾಕಾರ್ಯಗಳು ಮುಂದುವರೆದು ಹೆಚ್ಚು ಜನ ಬಡವರಿಗೆ ಸಹಾಯವಾಗಲಿ ಎಂದು ಆಶಿಸಿದರು.
ಹಿರಿಯ ನಾಗರಿಕರನ್ನು ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿ: ನ್ಯಾಯಾಧೀಶ ಲೋಕೇಶ್ ಧನಪಾಲ್ ಹವಳೆ
ಸಂಸ್ಥೆಯ ಯೋಜನಾಧಿಕಾರಿ ಪ್ರಭಾಕರ್, ಹೊಳಕಲ್ಲು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎ.ಎಚ್. ಆಂಜಿನಪ್ಪ, ಮಾಜಿ ಸದಸ್ಯರಾದ ಶ್ರೀನಿವಾಸ್, ನಾರಾಯಣ, ಜ್ಞಾನವಿಕಾಸ ಸಮನ್ವಯಧಿಕಾರಿ ರೇಖಾ, ವಲಯದ ಮೇಲ್ವಿಚಾರಕಿ ತನುಜಾ, ಸೇವಾಪ್ರತಿನಿಧಿ ಹೇಮಾ ಸೇರಿದಂತೆ ಗ್ರಾಮದ ಮುಖಂಡರು, ಸಂಘದ ಸದಸ್ಯರು ಭಾಗವಹಿಸಿದ್ದರು.