ತುಮಕೂರು: ಎಸ್‌ಐಆರ್ ಪ್ರಕ್ರಿಯೆಗೆ ತೆರಳುತ್ತಿದ್ದ ವೇಳೆ ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಗ್ರಾಮ ಆಡಳಿತ ಅಧಿಕಾರಿ ಮೃತಪಟ್ಟಿರುವ ಘಟನೆ ತುಮಕೂರಿನ ಗೂಳೂರಿನಲ್ಲಿ ನಡೆದಿದೆ. ಭುವನಾ (26) ಮೃತ ವಿಎಒ. ಅಪಘಾತದಲ್ಲಿ ಗಾಯಗೊಂಡು, ಸಿದ್ದಗಂಗಾ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತಿದ್ದ ಭುವನಾ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಎಸ್‌ಐಆರ್‌ನ ಬಿಎಲ್‌ಒಗಳಿಗೆ ಸೂಪರ್‌ವೈಸರ್ ಆಗಿದ್ದ ಭುವನಾ ಗೂಳೂರು ಹೋಬಳಿಯಲ್ಲಿ ಮನೆ ಮನೆಗೆ ತೆರಳುವ ವೇಳೆ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಅವರನ್ನು ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಸಂಬಂಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಧಿಕಾರಿಗಳ ವಿರುದ್ಧ ವಿಎಒಗಳ ಆಕ್ರೋಶ:
ಸಿದ್ದಗಂಗಾ ಆಸ್ಪತ್ರೆ ಬಳಿ ಜಮಾಯಿಸಿರುವ ಗ್ರಾಮ ಲೆಕ್ಕಾಧಿಕಾರಿಗಳು ಬೇಗ ಬೇಗ ಎಸ್‌ಐಆರ್ ಮುಗಿಸುವಂತೆ ಒತ್ತಡ ಹಾಕುವ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ರು. ಸ್ಥಳಕ್ಕೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಭೇಟಿ ನೀಡಿದ್ದು, ಗ್ರಾಮ ಲೆಕ್ಕಾಧಿಕಾರಿಗಳ ಅಹವಾಲು ಆಲಿಸುತ್ತಿದ್ರು.
ಕೊಪ್ಪಳದಲ್ಲಿ ಸಾಲಬಾಧೆಯಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ
ಕೊಪ್ಪಳ: ಜಿಲ್ಲೆಯ ಗಂಗಾವತಿ ನಗರದ ಪ್ರಶಾಂತನಗರದಲ್ಲಿ ದಾರುಣ ಘಟನೆ ಬೆಳಕಿಗೆ ಬಂದಿದೆ. ಒಂದೇ ಕುಟುಂಬದ ಮೂವರು ಸದಸ್ಯರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಪ್ರಕಾಶ್ (54), ಅವರ ಪತ್ನಿ ಪ್ರಭಾ (46) ಹಾಗೂ ಮಗ ಶಶಾಂಕ್ (21) ಎಂದು ಗುರುತಿಸಲಾಗಿದೆ.
ಮೃತ ಪ್ರಕಾಶ್ ಅವರು ವೃತ್ತಿಯಲ್ಲಿ ಚಿನ್ನದ ಒಡವೆ ವ್ಯಾಪಾರಿಯಾಗಿದ್ದು, ರಾಯ್ಕರ್ ಜ್ಯುವೆಲರಿ ಶಾಪ್ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ವ್ಯವಹಾರದಲ್ಲಿ ಉಂಟಾಗಿದ್ದ ವಿಪರೀತ ಸಾಲಬಾಧೆಯೇ ಕುಟುಂಬದ ಈ ತೀವ್ರ ನಿರ್ಧಾರಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಆರ್ಥಿಕ ಸಂಕಷ್ಟದಿಂದ ಬೇಸತ್ತು ಮೂವರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಗಂಗಾವತಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಾವಿಗೆ ನಿಖರವಾದ ಕಾರಣವನ್ನು ಪತ್ತೆಹಚ್ಚಲು ತನಿಖೆಯನ್ನು ಚುರುಕುಗೊಳಿಸಿದ್ದಾರೆ.