ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಬ್ಬರು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ ಪ್ರಕರಣ; ಅಂತ್ಯಕ್ರಿಯೆ ಮಾಡಿದವರಿಗೆ ಬೆದರಿಕೆ

Tumkur News: ತುಮಕೂರಿನಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ಸಾಮಾಜಿಕ ಕಾರ್ಯಕರ್ತರು ಮಾನವೀಯತೆ ಮೆರೆದು ಮೃತದೇಹಗಳ ಅಂತ್ಯಕ್ರಿಯೆ ನೆರವೇರಿಸಿದ್ದರು. ಆದರೆ, ಅವರಿಗೆ ಈಗ ಬೆದರಿಕೆ ಕರೆಗಳು ಬರುತ್ತಿವೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.

ಮೃತ ಮಹಿಳೆ ರಾಬಿಯಾ.

ತುಮಕೂರು, ಆ.31: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದ ದುರ್ಘಟನೆಗೆ ಸಂಬಂಧಿಸಿದಂತೆ ಇದೀಗ ಅಂತ್ಯಕ್ರಿಯೆಯ ವಿಚಾರವು ಹೊಸ ವಿವಾದಕ್ಕೆ ಕಾರಣವಾಗಿದೆ. ಮಾನವೀಯತೆ ಮೆರೆದು ಮೃತದೇಹಗಳ ಅಂತ್ಯಕ್ರಿಯೆ ನೆರವೇರಿಸಿದ್ದ ಸಾಮಾಜಿಕ ಕಾರ್ಯಕರ್ತರಿಗೆ ಬೆದರಿಕೆ ಕರೆಗಳು ಬರುತ್ತಿದ್ದು, ಅವರು ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ.

ಘಟನೆಯ ಹಿನ್ನೆಲೆ

ಜಿಲ್ಲೆಯ ಶಿರಾ ಮೂಲದ ಮುಸ್ಲಿಂ ಮಹಿಳೆ ರಾಬಿಯಾ, ಪತಿ ನಿಧನದ ಬಳಿಕ ಬಾಡಿಗೆ ಮನೆಯಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಿದ್ದರು. ಬಾಡಿಗೆ ಕಟ್ಟಲಾಗದೆ, ಸರ್ಕಾರದಿಂದ ಮನೆ ಕೋರಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರ ಗಮನ ಸೆಳೆದು ಸುದ್ದಿಯಾಗಿದ್ದರು. ನಂತರ ಜಿಲ್ಲಾಡಳಿತವು ಶಿರಾ ನಗರದ ಪೌರಕಾರ್ಮಿಕರ ಬಡಾವಣೆಯಲ್ಲಿ ನಿವೇಶನ ನೀಡಿ ಮನೆ ನಿರ್ಮಾಣಕ್ಕೂ ಸಹಾಯ ಮಾಡಿತ್ತು. ಆದರೆ, ಕಳೆದ ಬುಧವಾರ ರಾತ್ರಿ ರಾಬಿಯಾ ತನ್ನ ಇಬ್ಬರು ಮಕ್ಕಳೊಂದಿಗೆ ಹೊಸ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಮರಣೋತ್ತರ ಪರೀಕ್ಷೆಯ ಬಳಿಕ ರಾಬಿಯಾ ಅವರ ಹುಟ್ಟೂರು ಹಾಗೂ ಪತಿಯ ಊರಿನಲ್ಲಿ ಅಂತ್ಯಕ್ರಿಯೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಪೊಲೀಸರ ಮುತುವರ್ಜಿಯಿಂದ ನಗರದ ಕುಣಿಗಲ್ ರಸ್ತೆಯಲ್ಲಿರುವ ಜಾಮಿಯಾ ಖಬರಸ್ತಾನದಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿತ್ತು.

ವಿವಾದಕ್ಕೆ ಕಾರಣವೇನು?

ರಾಬಿಯಾ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರೂ, ಪತಿಯ ಮರಣದ ಬಳಿಕ ಶ್ರೀಕಾಂತ್ ಎಂಬುವವರೊಂದಿಗೆ ಸಹಜೀವನ ನಡೆಸುತ್ತಿದ್ದರು ಮತ್ತು ತಾಳಿ, ಹೂ, ಕುಂಕುಮ ಧರಿಸುತ್ತಿದ್ದರು ಎಂಬ ಕಾರಣ ನೀಡಿ ಅವರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿದ್ದಾರೆ. “ಅನ್ಯಧರ್ಮದ ಮಹಿಳೆಗೆ ಮುಸ್ಲಿಂ ಖಬರಸ್ತಾನದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ” ಎಂದು ಆಕ್ಷೇಪ ವ್ಯಕ್ತಪಡಿಸಿ ವಾಟ್ಸಾಪ್ ಸಂದೇಶಗಳನ್ನು ಹರಿಬಿಡಲಾಗುತ್ತಿದ್ದು, ತುಮಕೂರಿನ ಉಲಮಾಗಳು ಹಾಗೂ ಸಮಾಜದ ಮುಖಂಡರು ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಒತ್ತಾಯ ಕೇಳಿಬಂದಿದೆ.‌

ರೈಲು ಸೀಟ್‌ನ ಕೆಳಗೆ ಮಹಿಳೆಯ ಮೃತದೇಹ ಪತ್ತೆ; ನಿಗೂಢ ಸಾವಿನಿಂದ ಬೆಚ್ಚಿಬಿದ್ದ ಧಾರವಾಡ

ಸಾಮಾಜಿಕ ಕಾರ್ಯಕರ್ತರಿಗೆ ಬೆದರಿಕೆ

ಅಂತ್ಯಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಾಮಾಜಿಕ ಕಾರ್ಯಕರ್ತರಾದ ಜಹೀರ್ ಹಾಗೂ ನೂರ್ ಅವರ ಮೊಬೈಲ್ ಸಂಖ್ಯೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ. ಅಲ್ಲದೆ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ಇಬ್ಬರೂ ಆರೋಪಿಸಿದ್ದಾರೆ. ತಮ್ಮ ಜೀವಕ್ಕೆ ಹಾಗೂ ಕುಟುಂಬದ ಸುರಕ್ಷತೆಗೆ ಆತಂಕ ವ್ಯಕ್ತಪಡಿಸಿರುವ ಅವರು, ತುಮಕೂರು ಪೊಲೀಸರಿಗೆ ದೂರು ನೀಡಿ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಹೋರಾಟದ ಬದುಕನ್ನು ನಡೆಸಿದ್ದ ರಾಬಿಯಾ ಅವರ ಸಾವು ಹಾಗೂ ಅಂತ್ಯಕ್ರಿಯೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದ್ದು, ಬೆದರಿಕೆ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಮುಂದಿನ ದಿನಗಳಲ್ಲಿ ಯಾವ ಕ್ರಮಕೈಗೊಳ್ಳಲಿದ್ದಾರೆ ಎಂಬುದು ಕಾದು ನೋಡಬೇಕಿದೆ.