Bomb Threat: ಮುಂಬೈ, ಬೆಂಗಳೂರು ಬಳಿಕ ಇದೀಗ ಉಡುಪಿಯ ಶಾಲೆಗೆ ಬಾಂಬ್ ಬೆದರಿಕೆ
ಉಡುಪಿಯ ಪ್ರತಿಷ್ಠಿತ ಶಾರದಾ ಇಂಟರ್‌ನ್ಯಾಷನಲ್ ವಸತಿ ಶಾಲೆಗೆ ಸೋಮವಾರ ಬಾಂಬ್ ಬೆದರಿಕೆಯ ಸಂದೇಶ ಬಂದಿದೆ. ಇಮೇಲ್ ಮೂಲಕ ಬೆದರಿಕೆ ಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದುವರೆಗೆ ಯಾವುದೇ ಸಂಶಯಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಉಡುಪಿ: ಸೋಮವಾರ (ಜ. 27) ಬೆಳ್ಳಂಬೆಳಗ್ಗೆ ಉಡುಪಿಯ ಪ್ರತಿಷ್ಠಿತ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆಯ ಇಮೇಲ್ ಬಂದಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ (Bomb Threat). ಕೂಡಲೇ ಸ್ಥಳಕ್ಕೆ ಪೊಲೀಸರಿಗೆ ಆಗಮಿಸಿದ್ದು, ತನಿಖೆ ನಡೆಸಲಾಗುತ್ತಿದೆ. ಇದುವರೆಗೆ ಯಾವುದೇ ಸಂಶಯಾಸ್ಪದ ವಸ್ತು ಪತ್ತೆಯಾಗಿಲ್ಲ.
ಉಡುಪಿಯ ಶಾರದಾ ಇಂಟರ್‌ನ್ಯಾಷನಲ್ ವಸತಿ ಶಾಲೆಗೆ ಇಮೇಲೆ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದ್ದು, ಇಲ್ಲಿ ರಾಜ್ಯದ ವಿವಿಧ ಭಾಗಗಳ, ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಬಾಂಬ್ ಬೆದರಿಕೆಯ ಸಂದೇಶ ಬರುತ್ತಿದ್ದಂತೆ ಶಾಲಾ ಆಡಳಿತ ಮಂಡಳಿ ಪೊಲೀಸ್ ಠಾಣೆಗೆ ದೂರು ನೀಡಿದೆ. ಕೂಡಲೇ ಪೊಲೀಸ್, ಶ್ವಾನ ಪತ್ತೆ ದಳದ ಸಿಬ್ಬಂದಿ, ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ʼʼಪರಿಶೀಲನೆ ವೇಳೆ ಯಾವುದೇ ಸಂಶಯಾಸ್ಪದ ವಸ್ತು ಕಂಡು ಬಂದಿಲ್ಲ. ಶಾಲೆಯ ಮೂಲೆ ಮೂಲೆಯಲ್ಲಿಯೂ ಪರಿಶೀಲನೆ ನಡೆಸಿದ್ದೇವೆ. ಇಮೇಲ್ ಎಲ್ಲಿಂದ ಬಂದಿದೆ ಎನ್ನುವ ಕುರಿತು ತನಿಖೆ ನಡೆಸುತ್ತೇವೆ. ಆತಂಕ ಪಡುವ ಅಗತ್ಯವಿಲ್ಲʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಬೆಂಗಳೂರು, ದಿಲ್ಲಿ ಮುಂತಾದೆಡೆಗಳ ಪ್ರತಿಷ್ಠಿತ ಶಾಲೆಗಳಿಗೆ ಬಾಂಬ್ ಬೆದರಿಕೆಯ ಹುಸಿ ಸಂದೇಶ ಬಂದಿದ್ದವು. ಇದೀಗ ಉಡುಪಿ ಶಾಲೆಗೂ ಬೆದರಿಕೆ ಸಂದೇಶ ಕಂಡು ಬಂದಿದ್ದು, ವಿದ್ಯಾರ್ಥಿಗಳ ಪಾಲಕರು ಆತಂಕಗೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Bomb Threat: ಮುಂಬೈ ಶಾಲೆಗೆ ಬಾಂಬ್ ಬೆದರಿಕೆಯ ಇಮೇಲ್; ಅಫ್ಜಲ್ ಗ್ಯಾಂಗ್‌ನಿಂದ ಬೆದರಿಕೆ!
ಮುಂಬೈ ಶಾಲೆಗೆ ಬಾಂಬ್ ಬೆದರಿಕೆಯ ಇಮೇಲ್
ಮುಂಬೈ: ಕೆಲ ತಿಂಗಳುಗಳಿಂದ ರಾಷ್ಟ್ರ ರಾಜಧಾನಿ ದಿಲ್ಲಿಯ ಹತ್ತು ಹಲವು ಶಾಲೆಗಳಿಗೆ ನಿರಂತರವಾಗಿ ಹುಸಿ ಬಾಂಬ್ ಕರೆಗಳು ಬಂದಿದ್ದವು. ಇದರ ಜತೆಗೆ ಜ. 23ರಂದು ಮುಂಬೈಯ ಜೋಗೇಶ್ವರಿ-ಓಶಿವಾರ ಪ್ರದೇಶದ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆಯ ಇಮೇಲ್ ಸಂದೇಶವೊಂದು ಬಂದಿತ್ತು. ಬಾಂಬ್ ಬೆದರಿಕಯನ್ನು ಕಳುಹಿಸಿರುವ ವ್ಯಕ್ತಿ ತನ್ನನ್ನು ಅಫ್ಜಲ್ ಗ್ಯಾಂಗ್‌ನವನು ಎಂದು ಹೇಳಿಕೊಂಡಿದ್ದ. ಇಮೇಲ್ ಸ್ವೀಕರಿಸಿದ ನಂತರ ಶಾಲೆಯ ಆಡಳಿತ ಮಂಡಳಿ ಪೋಲಿಸರಿಗೆ ದೂರು ನೀಡಿದ್ದರು. ಬಳಿಕ ಸ್ಥಳೀಯ ಪೊಲೀಸರು ಮತ್ತು ಬಾಂಬ್ ಸ್ಕ್ವಾಡ್ ತಂಡ ಶಾಲೆಗೆ ಆಗಮಿಸಿ ಸ್ಥಳ ಮಹಜರು ಮಾಡಿದ್ದರು.
ಜೋಗೇಶ್ವರಿ-ಓಶಿವಾರದ ಶಾಲೆಯ ಸುತ್ತಮುತ್ತು ಪೊಲೀಸರು ಮತ್ತು ಬಾಂಬ್ ಪತ್ತೆ ತಂಡ ಪರಿಶೀಲನೆ ನಡೆಸಿದ್ದು, ಯಾವುದೇ ಅನುಮಾನಸ್ಪದ ವಸ್ತುಗಳು ಕಂಡು ಬಂದಿರಲಿಲ್ಲ. ಅಫ್ಜಲ್ ಗ್ಯಾಂಗ್ ಎಂದು ಹೇಳಿಕೊಂಡಿರುವ ವ್ಯಕ್ತಿಯನ್ನು ಪತ್ತೆ ಹಚ್ಚಲು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.