ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara Chapter 1: ʼಕಾಂತಾರ ಚಾಪ್ಟರ್‌ 1ʼ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ; ನದಿಯಲ್ಲಿ ಮುಳುಗಿ ಜೂನಿಯರ್‌ ಆರ್ಟಿಸ್ಟ್‌ ಸಾವು?

ಆರಂಭದಲ್ಲೇ ಒಂದಲ್ಲ ಒಂದು ವಿಘ್ನಗಳನ್ನು ಎದುರಿಸುತ್ತಲೇ ಬಂದ ʼಕಾಂತಾರ ಚಾಪ್ಟರ್‌ 1ʼ ಚಿತ್ರತಂಡಕ್ಕೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ʼಕಾಂತಾರ ಚಾಪ್ಟರ್‌ 1ʼ ಸಿನಿಮಾದಲ್ಲಿ ನಟಿಸುತ್ತಿದ್ದ ಜೂನಿಯರ್‌ ಕಲಾವಿದರೊಬ್ಬರು ನದಿಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ʼಕಾಂತಾರ ಚಾಪ್ಟರ್‌ 1ʼ ಚಿತ್ರದ ಜೂನಿಯರ್‌ ಆರ್ಟಿಸ್ಟ್‌ ಸಾವು?

ʼಕಾಂತಾರ ಚಾಪ್ಟರ್‌ 1ʼ ಚಿತ್ರದ ಪೋಸ್ಟರ್‌.

Profile Ramesh B May 6, 2025 11:25 PM

ಉಡುಪಿ: ಸ್ಯಾಂಡಲ್‌ವುಡ್‌ ಮಾತ್ರವಲ್ಲ ದೇಶದ ಗಮನವನ್ನು ಸೆಳೆದ ಚಿತ್ರ ʼಕಾಂತಾರ ಚಾಪ್ಟರ್‌ 1ʼ (Kantara Chapter 1). 2022ರಲ್ಲಿ ತೆರೆಕಂಡ ರಿಷಬ್‌ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿ, ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ʼಕಾಂತಾರʼ ಸಿನಿಮಾದ ಪ್ರೀಕ್ವೆಲ್‌ ಇದಾಗಿದ್ದು, ಚಿತ್ರೀಕರಣ ಪೂರ್ಣಗೊಳ್ಳುವ ಹಂತಕ್ಕ ಬಂದಿದೆ. ಶೂಟಿಂಗ್‌ ಆರಂಭದಿಂದಲೇ ಒಂದಲ್ಲ ಒಂದು ವಿಘ್ನ ಎದುರಿಸುತ್ತಲೇ ಬಂದಿರುವ ಚಿತ್ರತಂಡಕ್ಕೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ʼಕಾಂತಾರ ಚಾಪ್ಟರ್‌ 1ʼ ಸಿನಿಮಾದಲ್ಲಿ ನಟಿಸುತ್ತಿದ್ದ ಜೂನಿಯರ್‌ ಕಲಾವಿದರೊಬ್ಬರು ನದಿಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಉಡುಪಿ ಜಿಲ್ಲೆಯ ಬೈಂದೂರಿನ ಕೊಲ್ಲೂರಿನಲ್ಲಿ ಈ ದುರಂತ ಸಂಭವಿಸಿದೆ ಎಂದು ವರದಿಯೊಂದು ತಿಳಿಸಿದೆ.

ಕುಂದಾಪುರ, ಕೊಲ್ಲೂರು ಆಸುಪಾಸಿನಲ್ಲಿ ಬೃಹತ್‌ ಸೆಟ್‌ ಹಾಕಿ ʼಕಾಂತಾರ ಚಾಪ್ಟರ್‌ 1ʼ ಸಿನಿಮಾದ ಚಿತ್ರೀಕರಣ ನಡೆಸಲಾಗುತ್ತಿದೆ. ಇಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಜೂನಿಯರ್‌ ಕಲಾವಿದರೊಬ್ಬರು ಸೌಪರ್ಣಿಕ ನದಿಗೆ ಈಜಲು ತೆರಳಿ ಮುಳುಗು ಮೃತಪಟ್ಟಿದ್ದಾರೆ. ಮೃತರನ್ನು ಕೇರಳದ ಜೂನಿಯರ್‌ ಆರ್ಟಿಸ್ಟ್‌ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಹೊರ ಬರಬೇಕಿದೆ.

ಚಿತ್ರೀಕರಣದ ಬಿಡುವಿನ ವೇಳೆ ಚಿತ್ರತಂಡದ ಹಲವರು ಕೊಲ್ಲೂರಿನ ಸೌಪರ್ಣಿಕಾ ನದಿಗೆ ಈಜಲು ತೆರಳಿದ್ದರು. ಈ ತಂಡದಲ್ಲಿ ಮೃತ ಜೂನಿಯರ್‌ ಆರ್ಟಿಸ್ಟ್‌ ಕೂಡ ಇದ್ದರು. ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ: Kantara Chapter 1: ರಿಷಬ್‌ ಶೆಟ್ಟಿಯ 'ಕಾಂತಾರ: ಚಾಪ್ಟರ್‌ 1' ರಿಲೀಸ್‌ ಡೇಟ್‌ ಮುಂದೂಡಿಕೆ ಆಯ್ತಾ? ಇಲ್ಲಿದೆ ಚಿತ್ರತಂಡದ ಸ್ಪಷ್ಟನೆ

ಸಾಲು ಸಾಲು ವಿಘ್ನ

ʼಕಾಂತಾರ ಚಾಪ್ಟರ್‌ 1ʼ ಚಿತ್ರತಂಡಕ್ಕೆ ಎದುರಾಗುತ್ತಿರುವ ಸಂಕಷ್ಟ ಇದು ಮೊದಲ ಸಲವೇನಲ್ಲ. ಈ ಹಿಂದೆ ಚಿತ್ರತಂಡದ ಕಲಾವಿದರು ಇದ್ದ ಮಿನಿ ಬಸ್‌ ಅಪಘಾತಕ್ಕೀಡಾಗಿತ್ತು. ಕಲಾವಿದರಿದ್ದ ಬಸ್ ಕೊಲ್ಲೂರು ವ್ಯಾಪ್ತಿಯಲ್ಲಿ ನ. 24ರಂದು ಪಲ್ಟಿಯಾಗಿ ಹಲವರು ಗಾಯಗೊಂಡಿದ್ದರು. ಅದಕ್ಕೂ ಮೊದಲು ದೈವ ನರ್ತಕರು ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಇನ್ನು ಸಿನಿಮಾತಂಡ ಈ ವರ್ಷಾರಂಭದಲ್ಲಿ ಹಾಸನದಲ್ಲಿ ಶೂಟಿಂಗ್‌ ಶುರು ಮಾಡಿತ್ತು. ಆ ವೇಳೆ ಶೂಟಿಂಗ್‌ ಸಮಯದಲ್ಲಿ ಪರಿಸರಕ್ಕೆ ಹಾನಿ ಮಾಡಿರುವ ಆರೋಪ ಕೇಳಿ ಬಂದಿತ್ತು. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೇರೂರು ಗ್ರಾಮದ ಸಮೀಪ‌ ಇರುವ ಗವಿಗುಡ್ಡ ಪ್ರದೇಶದ ಡೀಮ್ಡ್ ಅರಣ್ಯ ಹಾಗೂ ಗೋಮಾಳ ಜಮೀನಿನಲ್ಲಿ ಚಿತ್ರೀಕರಣ ನಡೆಸಲು ʼಕಾಂತಾರ: ಚಾಪ್ಟರ್‌ 1ʼ ತಂಡ ಅನುಮತಿ ಪಡೆದುಕೊಂಡಿತ್ತು. ಅದರಂತೆ ಇಲ್ಲಿ ಬೀಡು ಬಿಟ್ಟ ತಂಡದವರು ಅಕ್ರಮವಾಗಿ ಮರ‌ ಕಡಿದು, ಸ್ಫೋಟಕ ಬಳಸಿ, ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಕೆಲ ಸ್ಥಳೀಯರ ಆರೋಪಿಸಿದ್ದರು. ಇದರಿಂದ ಚಿತ್ರೀಕರಣ ಸ್ಥಗಿತಗೊಳ್ಳುವ ಭೀತಿ ಎದುರಾಗಿತ್ತು. ಆದರೆ ತನಿಖೆ ಕೈಗೊಂಡ ಅಧಿಕಾರಿಗಳು ಬಳಿಕ ಕ್ಲೀನ್‌ಚಿಟ್‌ ನೀಡಿದ್ದರು. ಸಿನಿಮಾ ಚಿತ್ರೀಕರಣ ವೇಳೆ ನಿಯಮ ಉಲ್ಲಂಘನೆ ಆಗಿಲ್ಲ ಎಂದು ಅರಣ್ಯಾಧಿಕಾರಿಗಳು ವರದಿ ನೀಡಿದ್ದರು.

ಹೀಗೆ ಒಂದಲ್ಲ ಒಂದು ವಿಘ್ನ ಎದುರಿಸುತ್ತಲೇ ಬಂದ ಚಿತ್ರತಂಡ ಇದೀಗ ಕೊನೆಯ ಹಂತದ ತಯಾರಿಯಲ್ಲಿ ತೊಡಗಿಸಿಕೊಂಡಿದ್ದು, ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಬಗ್ಗೆ ಚಿತ್ರತಂಡ ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ. ಸಿನಿಮಾ ಈ ವರ್ಷದ ಅ. 2ರಂದು ಸಿನಿಮಾ ತೆರೆಗೆ ಬರಲಿದೆ.