ಉಡುಪಿ: ಕೊಲ್ಲೂರಿನ ವಸತಿಗೃಹವೊಂದರ ಬಳಿ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದ ಬೆಂಗಳೂರಿನ ವಸುಧಾ ಚಕ್ರವರ್ತಿ (45) ಮೃತದೇಹ ಸೌಪರ್ಣಿಕಾ ನದಿಯಲ್ಲಿ ಪತ್ತೆಯಾಗಿದೆ. ಬೆಂಗಳೂರಿನ ತ್ಯಾಗರಾಜ ನಗರದ ನಿವಾಸಿ ವಸುಧಾ ಚಕ್ರವರ್ತಿ ಆ. 27ರಂದು ಕಾರಿನಲ್ಲಿ ಕೊಲ್ಲೂರಿಗೆ ಬಂದಿದ್ದರು. ಆದರೆ, ತಾಯಿಯು ಕರೆ ಮಾಡಿದಾಗ ಸ್ವೀಕರಿಸದ ಹಿನ್ನೆಲೆಯಲ್ಲಿ ಮಹಿಳೆ ನಾಪತ್ತೆ ಸಂಬಂಧ ಕೊಲ್ಲೂರು ಠಾಣೆಯಲ್ಲಿ ಕುರಿತು ಪ್ರಕರಣ ದಾಖಲಾಗಿತ್ತು.
ಮಗಳು ನಾಪತ್ತೆಯಾದ ಹಿನ್ನೆಲೆಯಲ್ಲಿ ತಾಯಿ ಕೊಲ್ಲೂರಿಗೆ ತೆರಳಿ ದೇವಸ್ಥಾನದ ಸಿಬ್ಬಂದಿಗೆ ವಿಚಾರ ತಿಳಿಸಿದ್ದರು. ವಸತಿ ಗೃಹದ ಬಳಿ ಅವರ ಕಾರು ಪತ್ತೆಯಾಗಿತ್ತು. ಹೀಗಾಗಿ ಕೊಲ್ಲೂರು ಠಾಣೆಯಲ್ಲಿ ಮಹಿಳೆ ನಾಪತ್ತೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸೌಪರ್ಣಿಕಾ ನದಿ ಪರಿಸರದಲ್ಲಿ ಹುಡುಕಾಟ ನಡೆಸಲಾಗಿತ್ತು.
ಈ ಸುದ್ದಿಯನ್ನೂ ಓದಿ | POCSO Case: ಅಪ್ರಾಪ್ತ ಬಾಲಕಿಯನ್ನು ವರಿಸಿದ ಗ್ರಾ.ಪಂ ಅಧ್ಯಕ್ಷ; ಪೋಕ್ಸೋ ಪ್ರಕರಣ ದಾಖಲು
ಇದೀಗ ಎರಡು ದಿನಗಳ ಬಳಿಕ ಮಾವಿನಕಾರು ಎಂಬಲ್ಲಿ ನದಿಯಲ್ಲಿ ಶವ ಪತ್ತೆಯಾಗಿದೆ. ವಸುಧಾ ಅವರು ಈಜು ಪಟುವಾಗಿದ್ದು ವೇಗವಾಗಿ ಹರಿಯುತ್ತಿದ್ದ ಸೌಪರ್ಣಿಕಾ ನದಿಯಲ್ಲಿ ಸ್ನಾನಕ್ಕಿಳಿದ ಸಂದರ್ಭ ನೀರಿನಲ್ಲಿ ಕೊಚ್ಚಿ ಹೋಗಿದ್ದರೇ, ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬುದು ತಿಳಿದುಬಂದಿಲ್ಲ. ಸ್ಥಳೀಯರು ನದಿಗೆ ಕಾಲು ಜಾರಿ ಬಿದ್ದಿರುವ ಶಂಕೆ ವ್ಯಕ್ತಪಡಿಸಿದ್ದಾರೆ.