POCSO Case: ಅಪ್ರಾಪ್ತ ಬಾಲಕಿಯನ್ನು ವರಿಸಿದ ಗ್ರಾ.ಪಂ ಅಧ್ಯಕ್ಷ; ಪೋಕ್ಸೋ ಪ್ರಕರಣ ದಾಖಲು
ಗ್ರಾಮ ಪಂಚಾಯತಿ ಅಧ್ಯಕ್ಷನೋರ್ವ 15 ವರ್ಷದ ಬಾಲಕಿಯನ್ನು ವಿವಾಹವಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ಸಾಪೂರ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಗಳ ವಿರುದ್ದ ಪೋಕ್ಸ್ (POCSO Case) ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

-

ಹುಕ್ಕೇರಿ: ಗ್ರಾಮ ಪಂಚಾಯತಿ ಅಧ್ಯಕ್ಷನೋರ್ವ 15 ವರ್ಷದ ಬಾಲಕಿಯನ್ನು ವಿವಾಹವಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ಸಾಪೂರ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಗಳ ವಿರುದ್ದ ಪೋಕ್ಸ್ (POCSO Case) ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಘಟನೆಯು ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ತವರು ಜಿಲ್ಲೆ ಬೆಳಗಾವಿಯಲ್ಲಿ ಹಾಗೂ ಸಚಿವ ಸತೀಶ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಸ್ಸಾಪುರ ಗ್ರಾಮ ನಡೆದಿದೆ ಎಂದು ತಿಳಿದು ಬಂದಿದೆ.
2023 ನವೆಂಬರ್ 5 ರಂದು ಅಪ್ರಾಪ್ತ ಜೊತೆಗೆ ಬಸ್ಸಾಪುರ ಗ್ರಾಪಂ ಅಧ್ಯಕ್ಷ ಭೀಮಶಿ ಕಾಲಿಮಣಿ ವಿವಾಹವಾಗಿದ್ದ. ಗ್ರಾಪಂ ಅಧ್ಯಕ್ಷ ಭೀಮಶಿ ಇದೀಗ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹುಕ್ಕೇರಿ ತಾಲೂಕಿನ ಯಮಕನಮರಡಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳಲು ಗ್ರಾಪಂ ಅಧ್ಯಕ್ಷ ಭೀಮಶಿ ಕಳ್ಳಾಟ ನಡೆಸುತ್ತಿರುವ ಆರೋಪವೂ ಸಹ ಕೇಳಿಬಂದಿದೆ. ದೂರು ದಾಖಲಾದ ತಕ್ಷಣವೇ ಬಸ್ಸಾಪುರ ಗ್ರಾಮಕ್ಕೆ ನಾಲ್ಕು ಸಲ ಮಕ್ಕಳ ರಕ್ಷಣಾ ತಂಡ ಹೋಗಿತ್ತು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ. ಪ್ರವೀಣ -ನೇತೃತ್ವದ ತಂಡ ನಾಲ್ಕು ಸಲ ಬಸ್ಸಾಪುರಕ್ಕೆ ಭೇಟಿ ನೀಡಿತ್ತು. ಆದರೂ ಬಾಲಕಿಯನ್ನು ಪತ್ತೆ ಹಚ್ಚಲು ಮಕ್ಕಳ ರಕ್ಷಣಾ ತಂಡ ವಿಫಲವಾಗಿತ್ತು. ಈ ಮಧ್ಯೆಯೇ ಆಕೆ ಪ್ರಾಪ್ತ ವಯಸ್ಸಿನವಳು ಎಂದು ಸಾಬೀತುಪಡಿಸುವ ನಕಲಿ ದಾಖಲೆಗಳನ್ನು ಭೀಮಶಿ ಬಿಡುಗಡೆ ಮಾಡಿದ್ದ.
ಅಧ್ಯಕ್ಷ ಭಿಮಶಿ ಬಂಧನದ ಭೀತಿಯಿಂದ ಪತ್ನಿಯ ನಕಲಿ ಜನನ ಪ್ರಮಾಣ ಪತ್ರ ವೈರಲ್ ಮಾಡಿದ್ದು, ಶಾಲಾ ಟ್ರಾನ್ಸಫರ್ ಸರ್ಟಿಫಿಕೇಟ್ ಜೊತೆಗೆ ಹೊಸ ಜನನ ಪ್ರಮಾಣದ ದಾಖಲೆಯನ್ನೂ ಸೃಷ್ಟಿಸಿದ್ದ. ಮೂಲ ದಾಖಲೆಗಳೊಂದಿಗೆ ನಕಲಿ ದಾಖಲೆಗಳನ್ನು ಹೋಲಿಕೆ ಮಾಡಿದ ಅಧಿಕಾರಿಗಳು ಗ್ರಾಪಂ ಅಧ್ಯಕ್ಷನ ಅಕ್ರಮವನ್ನು ಬಯಲಿಗೆಳೆದಿದ್ದಾರೆ. ಸದ್ಯ ಅಧಿಕಾರಿಗಳು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Raichur News: ಪತಿಯನ್ನು ಪತ್ನಿ ನದಿಗೆ ತಳ್ಳಿದ ಕೇಸ್; ಬಾಲ್ಯವಿವಾಹವಾಗಿದ್ದ ತಾತಪ್ಪ ಅರೆಸ್ಟ್
ಹೆಚ್ಚುತ್ತಿದೆ ಬಾಲ್ಯ ವಿವಾಹ
ರಾಜ್ಯದಲ್ಲಿ ಬಾಲ್ಯ ವಿವಾಹ ನಿಷೇಧಗೊಂಡರೂ 2 ವರ್ಷಗಳಲ್ಲಿ 1419 ಪ್ರಕರಣ ದಾಖಲಾಗಿದೆ. ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ತೊಟ್ಟಿಲು ನಿಶ್ಚಿತಾರ್ಥ ಸೇರಿದಂತೆ ಅಪ್ರಾಪ್ತ ವಯಸ್ಸಿನ ಬಾಲಕಿಯರ ನಿಶ್ವಿತಾರ್ಥಕ್ಕೂ ಸರ್ಕಾರ ನಿಷೇಧ ಹೇರಿದೆ. ಪ್ರಕರಣಗಳನ್ನು ತಡೆಗಟ್ಟಲು ಎಲ್ಲಾ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಮತ್ತು ತಾಲ್ಲೂಕು ಹಂತಗಳಲ್ಲಿ ಸಾಮರ್ಥ್ಯಾಭಿವೃದ್ಧಿ ತರಬೇತಿ ನೀಡಲು ಯೋಜಿಸಲಾಗಿದೆ. ಅದರಂತೆ ಅಗತ್ಯ ಕ್ರಮಕೈಗೊಳ್ಳಲು ಎಲ್ಲಾ ಜಿಲ್ಲಾಮಕ್ಕಳ ರಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಬಾಲ್ಯವಿವಾಹಗಳನ್ನು ತಡೆಯುವ ಕಾರ್ಯಕ್ರಮಗಳ ನಿರ್ವಹಣೆ ಸಹಕಾರಿಯಾಗುವಂತೆ ಮತ್ತು ಸಮನ್ವಯಗೊಳಿಸಲು "ವರ್ದಿತಸುರಕ್ಷಿಣಿ" ಪೋರ್ಟಲ್ ಮತ್ತು ಮೊಬೈಲ್ ಆಪ್ ಅನ್ನು ಮಕ್ಕಳ ಸಹಾಯವಾಣಿ 1098 ನೊಂದಿಗೆ ಸಮನ್ವಯಗೊಳಿಸಿ C-DAC ಸಂಸ್ಥೆಯ ಮೂಲಕ ಅಭಿವೃದ್ಧಿಗೊಳಿಸಲಾಗುತ್ತಿದೆ.