ಉಡುಪಿ: ವಿಹಾರಕ್ಕೆಂದು ಪ್ರವಾಸಿಗರನ್ನು ಕರೆದೊಯ್ಯತ್ತಿದ್ದ ದೋಣಿ ಸಮುದ್ರದಲ್ಲಿ ಮಗುಚಿ ಇಬ್ಬರು ಮೃತಪಟ್ಟು, ಹಲವರು ಅಸ್ವಸ್ಥಗೊಂಡ ಘಟನೆ (Udupi Boat Tragedy) ಸೋಮವಾರ ಬೆಳಗ್ಗೆ ಕೋಡಿಬೆಂಗ್ರೆ ಬೀಚ್ (Kodi Bengre Beach) ಸಮೀಪ ನಡೆದಿದೆ. ಶಂಕರಪ್ಪ (22), ಸಿಂಧು (23) ಮೃತರು. ದೀಶಾ (26) ಎಂಬವರ ಸ್ಥಿತಿ ಗಂಭೀರವಾಗಿದೆ. ಧರ್ಮರಾಜ (26) ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪ್ರವಾಸಿಗರನ್ನು ವಿಹಾರಕ್ಕೆಂದು ಮಲ್ಪೆ ಡೆಲ್ಟಾ ಬೀಚ್ ಪಾಯಿಂಟ್‌ನಿಂದ ಕರೆದೊಯ್ಯುತ್ತಿದ್ದ ದೋಣಿ ಹಂಗಾರಕಟ್ಟೆ ಹಡಗು ನಿರ್ಮಾಣ ಪ್ರದೇಶದ ಬಳಿ ನದಿ ಮತ್ತು ಸಮುದ್ರ ಸೇರುವ ಅಳಿವೆ ಬಾಗಿಲಿನಲ್ಲಿ ಮಗುಚಿ ಬಿದ್ದಿದೆ. ಇದರಲ್ಲಿ ಸುಮಾರು 14 ಮಂದಿ ಪ್ರವಾಸಿಗರಿದ್ದು, ಇವರು ಯಾರು ಕೂಡ ಲೈಫ್ ಜಾಕೆಟ್ ಧರಿಸಿಲ್ಲ ಎಂದು ತಿಳಿದುಬಂದಿದೆ.
ದೋಣಿಯಲ್ಲಿದ್ದವರು ಮೈಸೂರಿನ ಸರಸ್ವತಿಪುರಂನಲ್ಲಿರುವ ಕಾಲ್ ಸೆಂಟರ್ ವೊಂದರ ಉದ್ಯೋಗಿಗಳು ಎನ್ನಲಾಗಿದೆ. 'ವೇವ್‌ರೈಡರ್ಸ್' ಕಂಪನಿಗೆ ಸೇರಿದ ಈ ದೋಣಿಯಲ್ಲಿ ಒಟ್ಟು 14 ಮಂದಿ ಪ್ರವಾಸಿಗರಿದ್ದರು. ದುರಂತ ಸಂಭವಿಸಿದ ತಕ್ಷಣ ಸ್ಥಳೀಯರು ಮತ್ತು ಇತರ ದೋಣಿಯಲ್ಲಿದ್ದವರು ಎಲ್ಲರನ್ನೂ ರಕ್ಷಿಸಿ ದಡಕ್ಕೆ ತಂದಿದ್ದಾರೆ. ಘಟನೆಯ ವೇಳೆ ನಾಲ್ವರು ಗಂಭೀರ ಸ್ಥಿತಿಯಲ್ಲಿದವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಟಾಟಾ ಏಸ್-ಸ್ಕೂಟರ್ ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ಸ್ಥಳದಲ್ಲೇ ಸಾವು
ಮಲ್ಪೆ ಮತ್ತು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಗಡಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಪ್ರವಾಸಿ ವಾಹನ ಡಿಕ್ಕಿಯಾಗಿ ಯುವತಿ ಸಾವು
ಚಿಕ್ಕಮಗಳೂರು: ಆಲ್ದೂರು ಬಳಿ ಪ್ರವಾಸಿ ವಾಹನ ಡಿಕ್ಕಿಯಾಗಿ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ವಾಹನ ನಿಲ್ಲಿಸದೇ ಚಾಲಕ ಪರಾರಿಯಾಗಿದ್ದಾನೆ. ಮೃತರನ್ನು ನವಮಿ (26) ಎಂದು ಗುರುತಿಸಲಾಗಿದೆ. ಇವರು ಆಲ್ದೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೆಲಸ ಮಾಡುತ್ತಿದ್ದರು.
ಅಪಘಾತ ಎಸಗಿದ ವಾಹನ ತುಮಕೂರು ಜಿಲ್ಲೆಯ ತಿಪಟೂರು ಮೂಲದ್ದು ಎಂದು ತಿಳಿದು ಬಂದಿದೆ. ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಿಂದ ಮಹಿಳೆ ಸಾವನ್ನಪ್ಪಿದ ಹಿನ್ನೆಲೆ, ಆಲ್ದೂರು ಹೋಬಳಿಯಲ್ಲಿನ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಮುಂದೂಡಿಕೆಯಾಗಿದೆ.