ಉಡುಪಿ: ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವುದೇನೋ ಸುಲಭ. ಆದರೆ ಅವುಗಳನ್ನು ನಿರಂತರವಾಗಿ ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ನಿರ್ವಹಿಸುವುದು ಬಹುದೊಡ್ಡ ಸವಾಲು. ನಿರ್ವಹಣೆಯ ಕೊರತೆಯಿಂದಲೇ ಎಷ್ಟೋ ಶೌಚಾಲಯಗಳು ಬಳಕೆಗೆ ಯೋಗ್ಯವಿಲ್ಲದಂತಾಗಿ, ವಿದ್ಯಾರ್ಥಿಗಳ ಆರೋಗ್ಯ ಮತ್ತು ಹಾಜರಾತಿಯ ಮೇಲೆ ದುಷ್ಪರಿಣಾಮ ಬೀರುತ್ತವೆ. ಈ ಸಮಸ್ಯೆಗೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ಒಂದು ವಿನೂತನ ಹಾಗೂ ಮಾದರಿ ಪರಿಹಾರ ರೂಪುಗೊಂಡಿದೆ. ಅದೇ 'ಸ್ವಚ್ಛ ರಥ' (Swachh Rath). ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ 27 ಸರ್ಕಾರಿ ಶಾಲೆಗಳಲ್ಲಿ ಇದರ ಕಾರ್ಯವ್ಯಾಪ್ತಿ ಇದೆ.

‘ಗೋಪಾಡಿ ಶ್ರೀನಿವಾಸ್ ರುಕ್ಮಿಣಿ ಫೌಂಡೇಶನ್’ ವತಿಯಿಂದ ಗೋಪಾಡಿ ಶ್ರೀನಿವಾಸ್ ರಾವ್ ಅವರ ನೇತೃತ್ವ ಮತ್ತು ದೂರದೃಷ್ಟಿಯಲ್ಲಿ ಈ ಸಂಚಾರಿ ಶಾಲಾ ನೈರ್ಮಲ್ಯ ಸೇವೆ (Mobile School-Sanitation Service) ಆರಂಭವಾಗಿದೆ. ಸ್ವಚ್ಛ ಭಾರತ ಅಭಿಯಾನದ ಪ್ರೇರಣೆ ಈ ಯೋಜನೆಗೆ ಮತ್ತಷ್ಟು ಬಲ ತುಂಬಿದೆ. ಈ ಬಗ್ಗೆ ಶಾಲೆಗಳಲ್ಲಿ ಜಾಗೃತಿ ಮೂಡಿಸಿ, ವಿದ್ಯಾರ್ಥಿಗಳ ಮೂಲಕ ಅವರ ಕುಟುಂಬಗಳು ಮತ್ತು ಇಡೀ ಸಮಾಜಕ್ಕೆ ನೈರ್ಮಲ್ಯದ ಸಂದೇಶವನ್ನು ತಲುಪಿಸುವ ಕೆಲಸವನ್ನು ಫೌಂಡೇಶನ್ ಮಾಡುತ್ತಿದೆ. ಯುನಿಸೆಫ್ ಹೈದರಾಬಾದ್ ಕ್ಷೇತ್ರ ಕಚೇರಿಯು (UNICEF Hyderabad Field Office) ಈ ಯೋಜನೆಯ ಕಾರ್ಯವೈಖರಿ ಮತ್ತು ಭವಿಷ್ಯದ ಸಾಧ್ಯತೆಗಳ ಕುರಿತು ವಿಶೇಷ ಅಧ್ಯಯನ ವರದಿಯನ್ನು ಸಿದ್ಧಪಡಿಸಿದ್ದು, ಈ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಖ್ಯಾತ ಹೋಟೆಲ್ ಉದ್ಯಮಿಯಾಗಿರುವ ಶ್ರೀನಿವಾಸ್ ರಾವ್ ಅವರ ವ್ಯಾಪಾರ ಬದುಕು ಮೂರು ಪ್ರಾಯೋಗಿಕ ತತ್ವಗಳ ಮೇಲೆ ನಿಂತಿದೆ. ಅವುಗಳೆಂದರೆ- ಮಿತವ್ಯಯ ಮತ್ತು ಆರ್ಥಿಕ ದಕ್ಷತೆ. ಬ್ರೆಡ್ ಮತ್ತು ಸ್ಯಾಂಡ್‌ವಿಚ್‌ನಂತಹ ಸಾಮಾನ್ಯ ತಿನಿಸುಗಳಿಂದ ಹಿಡಿದು ಪ್ರತಿಯೊಂದು ಆಹಾರ ಪದಾರ್ಥದಲ್ಲೂ ಸಾಂಪ್ರದಾಯಿಕ ರುಚಿ ಮತ್ತು ಸ್ಥಿರವಾದ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಮತ್ತು ಅತ್ಯುನ್ನತ ಮಟ್ಟದ ಶುಚಿತ್ವ, ನೈರ್ಮಲ್ಯ ಮತ್ತು ಕನಿಷ್ಠ ತ್ಯಾಜ್ಯ. ನಮ್ಮೂರ ಹೋಟೆಲ್, ತಾಜಾ ತಿಂಡಿ, ಕೂಲ್ ಜಾಯಿಂಟ್, ಕೇನ್ ಓಲಾ, ಈಶಾನ್ಯ ರೆಸ್ಟೊರೆಂಟ್ ಮೊದಲಾದ ಪ್ರಸಿದ್ಧ ಬ್ರ್ಯಾಂಡ್‌ಗಳ ರೂವಾರಿಯಾಗಿರುವ ಶ್ರೀನಿವಾಸ್ ರಾವ್ ಅವರು ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛತೆಗೆ ಇದೀಗ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಅತ್ಯಂತ ಸಣ್ಣ ವಿಷಯಗಳಿಗೂ ಹೆಚ್ಚಿನ ಗಮನ ನೀಡಿ, ಬದ್ಧತೆ ಮತ್ತು ಪರಿಪೂರ್ಣತೆಯಿಂದ ಕೆಲಸ ಮಾಡುವುದು ರಾವ್ ಅವರ ಗುಣ ವಿಶೇಷವಾಗಿದೆ. ಅವರಿಗೆ ನೈರ್ಮಲ್ಯ ಎಂಬುದು ಕೇವಲ ವ್ಯವಹಾರದ ನಿಯಮವಲ್ಲ, ಅದೊಂದು ಜೀವನಧರ್ಮ. ಜೀವವೈವಿಧ್ಯತೆಯ ಬಗ್ಗೆ ಅವರಿಗಿರುವ ಆಸಕ್ತಿ ಪರಿಸರದ ಮೇಲಿನ ಅವರ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಇದೇ ದೃಷ್ಟಿಕೋನದಿಂದ ಸರ್ಕಾರಿ ಶಾಲೆಗಳ ನೈರ್ಮಲ್ಯದ ಕೊರತೆಯನ್ನು ಗಮನಿಸಿದ ಅವರು, ಕೇವಲ ಒಂದು ವಾಹನವನ್ನು ಕೊಡುಗೆಯಾಗಿ ನೀಡಿ ಸುಮ್ಮನಾಗಲಿಲ್ಲ. ಬದಲಾಗಿ, ಶಾಲೆಗಳ ಸಮೂಹಕ್ಕೆ ನಿಗದಿತ ವೇಳಾಪಟ್ಟಿಯಂತೆ ಸ್ವಚ್ಛತಾ ಸೇವೆ ಒದಗಿಸುವ ಸಮಗ್ರ ವ್ಯವಸ್ಥೆಯನ್ನೇ ರೂಪಿಸಿದರು.
ಹೇಗೆ ಕಾರ್ಯನಿರ್ವಹಿಸುತ್ತದೆ ಈ 'ಸ್ವಚ್ಛ ರಥ'?
ವಿಶೇಷವಾಗಿ ವಿನ್ಯಾಸಗೊಳಿಸಲಾದ ವಾಹನದಲ್ಲಿ ಅತ್ಯಾಧುನಿಕ ಸ್ವಚ್ಛತಾ ಉಪಕರಣಗಳು, ನೈರ್ಮಲ್ಯ ಸಾಮಗ್ರಿಗಳು ಮತ್ತು ತರಬೇತಿ ಪಡೆದ ಸಿಬ್ಬಂದಿ ಶಾಲೆಗಳಿಗೆ ಭೇಟಿ ನೀಡುತ್ತಾರೆ. ಕೋಟೇಶ್ವರ ಮತ್ತು ಸುತ್ತಮುತ್ತಲಿನ 27 ಸರ್ಕಾರಿ ಶಾಲೆಗಳ ಸುಮಾರು 6,000 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಪ್ರತಿ ಶಾಲೆಗೆ ವಾರಕ್ಕೆ ಎರಡು ಬಾರಿ ಭೇಟಿ ನೀಡಿ ಶೌಚಾಲಯಗಳನ್ನು ವೈಜ್ಞಾನಿಕವಾಗಿ ಸ್ವಚ್ಛಗೊಳಿಸಲಾಗುತ್ತದೆ. ಸುಮಾರು 18 ಲಕ್ಷ ರುಪಾಯಿ ಆರಂಭಿಕ ಬಂಡವಾಳದಲ್ಲಿ ಸ್ವಚ್ಛ ರಥ ವ್ಯವಸ್ಥೆ (Swachh Rath Mobile sanitation Service Vehicle) ಕಲ್ಪಿಸಲಾಗಿದೆ. ತಿಂಗಳಿಗೆ ಸುಮಾರು 1.5 ಲಕ್ಷ ರುಪಾಯಿ ತನಕ ಮಾಸಿಕ ನಿರ್ವಹಣೆ ವೆಚ್ಚವಿರುತ್ತದೆ. ಯುನಿಸೆಫ್ ಸಂಸ್ಥಾಪನಾ ದಿನವಾದ 2025ರ ಡಿಸೆಂಬರ್ 11ರಂದು ಜಿಲ್ಲಾಡಳಿತದ ಸಹಯೋಗದೊಂದಿಗೆ ಯೋಜನೆಯನ್ನು ಉದ್ಘಾಟಿಸಲಾಗಿದೆ.

ಮಕ್ಕಳ ಘನತೆ ಮತ್ತು ಶಿಕ್ಷಕರ ಜವಾಬ್ದಾರಿಗೆ ಗೌರವ
ಈ ಯೋಜನೆಯ ಅತ್ಯಂತ ವಿಶೇಷ ಅಂಶವೆಂದರೆ ಅದರ ಸಮಗ್ರ ದೃಷ್ಟಿಕೋನ. ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳೇ ಶಾಲೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಪದ್ಧತಿ ಇತ್ತು. ಆದರೆ ಇಂದಿನ ಕಾಲಘಟ್ಟದಲ್ಲಿ ಮಕ್ಕಳ ಘನತೆ, ಸುರಕ್ಷತೆ ಮತ್ತು ಸಾಮಾಜಿಕ ಸಂದೇಶದ ದೃಷ್ಟಿಯಿಂದ ಮಕ್ಕಳನ್ನು ಸ್ವಚ್ಛತಾ ಕೆಲಸಗಾರರನ್ನಾಗಿ ಬಳಸಿಕೊಳ್ಳುವುದು ಸರಿಯಲ್ಲ. ಹಾಗೆಯೇ, ಬೋಧನೆಯ ಜವಾಬ್ದಾರಿ ಹೊಂದಿರುವ ಶಿಕ್ಷಕರಿಂದಲೂ ಸ್ವಚ್ಛತಾ ಕೆಲಸವನ್ನು ನಿರೀಕ್ಷಿಸುವುದು ಸಮಂಜಸವಲ್ಲ. ಶಾಲೆಗಳಿಗೆ ಬರುವ ನಿರ್ವಹಣಾ ಅನುದಾನ ಕಡಿಮೆಯಿರುವುದರಿಂದ ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಿಬ್ಬಂದಿಯ ನಿರಂತರ ಲಭ್ಯತೆ ಇಲ್ಲದಿರುವುದರಿಂದ ಈ ವಿಶೇಷ ವ್ಯವಸ್ಥೆ ಅನಿವಾರ್ಯವಾಗಿದೆ.

ಈ ಯೋಜನೆಯನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿಸ್ತರಿಸಲು ಒಂದು ಉತ್ತಮ ಸಹಭಾಗಿತ್ವದ ಮಾದರಿಯನ್ನು ರೂಪಿಸಬಹುದು ಎಂದು ಯುನಿಸೆಫ್ ವರದಿ ಸಲಹೆ ನೀಡಿದೆ. ಕೇವಲ ಶೌಚಾಲಯ ನಿರ್ಮಾಣಕ್ಕೆ ಸೀಮಿತವಾಗದೆ, ವಾಹನ ಖರೀದಿ, ಮಾರ್ಪಾಡು, ವಿಶೇಷ ಉಪಕರಣಗಳು, ತರಬೇತಿ, ಕಾರ್ಯವಿಧಾನಗಳ ರಚನೆ ಮತ್ತು ಆರಂಭಿಕ ಹಂತದ ನಿರ್ವಹಣೆಗೆ ಸಿಎಸ್‌ಆರ್ ನಿಧಿಯನ್ನು ಬಳಸಬಹುದು. ನಿರಂತರ ನಿರ್ವಹಣೆ ಮತ್ತು ಸ್ವಚ್ಛತಾ ಸಿಬ್ಬಂದಿಯ ವೇತನಕ್ಕಾಗಿ ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರದ ವಿಬಿ-ಜಿ ರಾಮ್ ಜಿ ಮುಂತಾದ ಯೋಜನೆಗಳನ್ನು ನಿಯಮಾವಳಿಗಳು, ಅರ್ಹತೆ ಮತ್ತು ಅನುಮೋದನೆಗಳಿಗೆ ಒಳಪಟ್ಟು ಸಂಬಂಧಪಟ್ಟ ಪ್ರಾಧಿಕಾರಗಳ ಪರಿಶೀಲನೆಯೊಂದಿಗೆ ಬಳಸಿಕೊಳ್ಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಹಳೆಯ ಮತ್ತು ಹೊಸ ತಲೆಮಾರುಗಳ ನಡುವಿನ ಬದಲಾವಣೆಯ ಕುರಿತು ಶ್ರೀನಿವಾಸ್ ರಾವ್ ಅವರು ತಮ್ಮ ಚಿಂತನೆಯನ್ನು ಹಂಚಿಕೊಂಡಿದ್ದಾರೆ. " ಹಿಂದಿನ ತಲೆಮಾರಿನವರಿಗೆ ಶಾಲೆಗಳಲ್ಲಿ ವಿದ್ಯಾರ್ಥಿಗಳೇ ಸ್ವಚ್ಛತಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಹಾಗೂ ಆ ಮೂಲಕ ಶುಚಿತ್ವದ ಮೌಲ್ಯವನ್ನು ಕಲಿಯುತ್ತಿದ್ದ ಪದ್ಧತಿಗಳು ನೆನಪಿರಬಹುದು. ಆದರೆ, ಇಂದಿನ ಕಾಲಘಟ್ಟದಲ್ಲಿ ಪಾಳಿಯ ಆಧಾರದ ಮೇಲೆ ಮಕ್ಕಳಿಂದ ಶಾಲೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸುವುದರಿಂದ ವಿರೋಧ ವ್ಯಕ್ತವಾಗಬಹುದು; ಅಷ್ಟೇ ಅಲ್ಲದೆ, ಮಕ್ಕಳ ಜವಾಬ್ದಾರಿಗಳು ಮತ್ತು ನೈರ್ಮಲ್ಯ ಕೆಲಸದ ಘನತೆಯ ಕುರಿತು ಕುಟುಂಬಗಳಿಗೆ ಹಾಗೂ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆಯಿರುತ್ತದೆ. ಹೀಗಿದ್ದರೂ, ಮಕ್ಕಳು ನೈರ್ಮಲ್ಯದ ಸಕ್ರಿಯ ರಾಯಭಾರಿಗಳಾಗಬೇಕು; ಸೌಲಭ್ಯಗಳ ಜವಾಬ್ದಾರಿಯುತ ಬಳಕೆ, ತ್ಯಾಜ್ಯ ವಿಂಗಡಣೆ ಮತ್ತು ಸ್ವಚ್ಛತೆಯ ಅರಿವು ಮೂಡಿಸುವಲ್ಲಿ ಮುಂಚೂಣಿಯಲ್ಲಿರಬೇಕು. ಆದರೆ, ತರಬೇತಿ ಪಡೆದ ಮತ್ತು ಸೂಕ್ತ ಬೆಂಬಲ ಹೊಂದಿರುವ ನೈರ್ಮಲ್ಯ ಕಾರ್ಮಿಕರಿಗೆ ಬದಲಿಯಾಗಿ ಮಕ್ಕಳನ್ನು ಬಳಸಿಕೊಳ್ಳಬಾರದು. ಈ ಸ್ಪಷ್ಟ ವ್ಯತ್ಯಾಸವು ಮಕ್ಕಳ ಘನತೆಯನ್ನು ಕಾಪಾಡುವುದರ ಜೊತೆಗೆ, ನೈರ್ಮಲ್ಯ ಕೆಲಸಕ್ಕೆ ಸೂಕ್ತ ಮನ್ನಣೆ, ಸಂಪನ್ಮೂಲ ಮತ್ತು ಸುರಕ್ಷತೆ ದೊರೆಯುವುದನ್ನು ಖಾತರಿಪಡಿಸುತ್ತದೆ ʼʼ ಎನ್ನುತ್ತಾರೆ ಗೋಪಾಡಿ ಶ್ರೀನಿವಾಸ್ ರಾವ್ ಅವರು.