ಹೊನ್ನಾವರ: 2 ವರ್ಷ 10 ತಿಂಗಳ ಪುಟ್ಟ ಬಾಲಕಿ ತಬಲಾ ವಾದನದಲ್ಲಿ ದಾಖಲೆ ಬರೆದಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್(Guinness Book of Record)ನಲ್ಲಿ ಹೆಸರು ಸೇರ್ಪಡೆ ಮಾಡಿದೆ. ಸಾಮಾನ್ಯವಾಗಿ ಈ ವಯಸ್ಸಿನ ಮಕ್ಕಳು ಆಟವಾಡುತ್ತಾ, ಅಂಬೆಗಾಲಿಡುತ್ತಾ ಬಾಲ್ಯ ಕಳೆಯುತ್ತಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಪುಟ್ಟ ಬಾಲಕಿಯೊಬ್ಬಳು ತಬಲಾ ವಾದನದಲ್ಲಿ ಅಪರೂಪದ ಸಾಧನೆ ಮಾಡಿ ಗಮನ ಸೆಳೆದಿದ್ದಾಳೆ.
ಇದನ್ನೂ ಓದಿ: Voice of Uttara Kannada, 'Lokadhvani': ಉತ್ತರ ಕನ್ನಡದ ಧ್ವನಿ ʼಲೋಕಧ್ವನಿʼ
ಕೇವಲ 2 ವರ್ಷ 10 ತಿಂಗಳ ವಯಸ್ಸಿನ ಸ್ವರಶ್ರೀ ಹೆಗಡೆ, 12 ತಾಳಗಳನ್ನು ಅವುಗಳ ಬೋಲ್ಗಳ ಸಹಿತ ತಪ್ಪಿಲ್ಲದೆ ಹೇಳಿ ತಬಲಾದಲ್ಲಿ ನುಡಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದಾಳೆ.
ಅಡುಕಳದ ಖ್ಯಾತ ತಬಲಾ ವಾದಕ ಗುರುರಾಜ ಹೆಗಡೆ ಹಾಗೂ ಇಂಗ್ಲಿಷ್ ಪ್ರಾಧ್ಯಾಪಕಿ ಮತ್ತು ಹಿಂದೂಸ್ತಾನಿ ಗಾಯಕಿ ಶ್ರೀಲತಾ ದಂಪತಿಯ ಪುತ್ರಿ ಸ್ವರಶ್ರೀ, ತನ್ನ ಸಂಗೀತ ಪ್ರತಿಭೆಯಿಂದ ಸಂಗೀತಾಸಕ್ತರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಗುರುರಾಜ ಹೆಗಡೆ ಅವರು ವಿದ್ವಾನ್ ಶೇಷಾದ್ರಿ ಅಯ್ಯಂಗಾರ್ ಅವರ ಶಿಷ್ಯರಾಗಿದ್ದಾರೆ.