ಯಲ್ಲಾಪುರದಲ್ಲಿ ಕೊಲೆಯಾದ ರಂಜಿತಾ ಕುಟುಂಬಕ್ಕೆ 50 ಲಕ್ಷ ಪರಿಹಾರ, 2 ಎಕರೆ ಜಮೀನು ಕೊಡಿ: ಸರ್ಕಾರಕ್ಕೆ ವಿಜಯೇಂದ್ರ ಆಗ್ರಹ
BY Vijayendra: ಯಲ್ಲಾಪುರದಲ್ಲಿ ಮುಸ್ಲಿಂ ಯುವಕನಿಂದ ಬರ್ಬರ ಹತ್ಯೆಗೊಳಗಾದ ಮಹಿಳೆ ರಂಜಿತಾ ಬನಸವಾಡೆ ನಿವಾಸಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಭಾನುವಾರ ಭೇಟಿ ನೀಡಿ, ಅಂತಿಮ ದರ್ಶನ ಪಡೆದರು. ಈ ವೇಳೆ ಮೃತ ಮಹಿಳೆಯ ತಾಯಿಗೆ ಸಾಂತ್ವನ ಹೇಳಿದರು.
ಯಲ್ಲಾಪುರದಲ್ಲಿ ಮಾಧ್ಯಮಗಳೊಂದಿಗೆ ಬಿ.ವೈ.ವಿಜಯೇಂದ್ರ ಮಾತನಾಡಿದರು. -
ಯಲ್ಲಾಪುರ: ಯಲ್ಲಾಪುರದ ಮಹಿಳೆ ರಂಜಿತಾ ಬನಸವಾಡೆ ಹತ್ಯೆಯಿಂದ ಅವರ ಹತ್ತು ವರ್ಷದ ಮಗ ಅನಾಥನಾಗಿದ್ದಾನೆ. ವಯೋವೃದ್ಧ ತಾಯಿ ದಿಕ್ಕುಗಾಣದಂತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಹತ್ಯೆಯಾದ ಹಿಂದೂ ಮಹಿಳೆಯ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕು, ಕುಟುಂಬಕ್ಕೆ 2 ಎಕರೆ ಜಮೀನು ನೀಡಬೇಕು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ಮುಸ್ಲಿಂ ಯುವಕನಿಂದ ಬರ್ಬರ ಹತ್ಯೆಗೊಳಗಾದ ಮಹಿಳೆ ರಂಜಿತಾ ಬನಸವಾಡೆ ಮನೆಗೆ ವಿಜಯೇಂದ್ರ ಅವರು ಇಂದು ಭೇಟಿ ನೀಡಿ, ಅಂತಿಮ ದರ್ಶನ ಪಡೆದರು. ಬಳಿಕ ನತದೃಷ್ಟ ಮಹಿಳೆಯ ತಾಯಿಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಂಜಿತಾ ಹತ್ಯಾ ಪ್ರಕರಣದ ಗಂಭೀರ ತನಿಖೆ ನಡೆಸುವಂತೆ ಆಗ್ರಹಿಸಿದರು.
ರಾಜ್ಯ ಸರಕಾರ, ಗೃಹ ಇಲಾಖೆ ನಿಷ್ಕ್ರಿಯವಾಗಿರುವ ಪರಿಣಾಮವೇ ಇಂಥ ಪ್ರಕರಣಗಳು ಮರುಕಳಿಸುತ್ತಿವೆ. ಇಂಥ ಅಹಿತಕರ ಘಟನೆಗಳು ನಡೆದಾಗ ಪೊಲೀಸ್ ಇಲಾಖೆ ತನಿಖೆ ಪ್ರಾರಂಭಿಸುವ ಮುನ್ನವೇ ಗೃಹ ಸಚಿವರು, ಮುಖ್ಯಮಂತ್ರಿಗಳು ಇದು ಲವ್ ಜಿಹಾದ್ ಅಲ್ಲವೆಂದು ಕ್ಲೀನ್ ಚಿಟ್ ಕೊಡುತ್ತಿದ್ದಾರೆ. ಇದೆಲ್ಲದರ ಪರಿಣಾಮವೇ ಇಂಥ ದುಷ್ಕೃತ್ಯಗಳು ಮರುಕಳಿಸುತ್ತಿವೆ ಎಂದು ವಿಶ್ಲೇಷಿಸಿದರು.

ಇಂಥ ಪ್ರಕರಣ ನಡೆದಾಗ ತಪ್ಪು ಮಾಹಿತಿ ಕೊಡುವುದು, ಪ್ರಕರಣಗಳನ್ನು ಮುಚ್ಚಿ ಹಾಕುವುದು ನಡೆಯುತ್ತಿದೆ. ಇದೆಲ್ಲದರ ಪರಿಣಾಮವಾಗಿ ಯಲ್ಲಾಪುರದಲ್ಲಿ ಇಂಥ ದುರ್ಘಟನೆ ನಡೆದಿದೆ ಎಂದ ತಿಳಿಸಿದರು. ಈ ಪ್ರಕರಣದ ಸಮರ್ಪಕ ತನಿಖೆ ನಡೆದು ಆ ಕುಟುಂಬಕ್ಕೂ ನ್ಯಾಯ ಲಭಿಸಬೇಕು. ಹಿಂದೂ ಸಮಾಜಕ್ಕೂ ನ್ಯಾಯ ಸಿಗಬೇಕು ಎಂದ ಅವರು, ಸರಿಯಾದ ರೀತಿ ತನಿಖೆ ನಡೆಸಿ ಎಂದು ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ಆಗ್ರಹಿಸಿದರು.
ಸಾವಿನ ಮನೆಯಲ್ಲಿ ರಾಜಕಾರಣ ನಮ್ಮದಲ್ಲ. ಮನುಷ್ಯತ್ವದ ರಾಜಕಾರಣ ಬಿಜೆಪಿಯದು ಎಂದ ಅವರು, ಪದೇಪದೇ ಇಂಥ ಘಟನೆಗಳು ಕರ್ನಾಟಕದಲ್ಲಿ ಮರುಕಳಿಸುತ್ತಿವೆ. ಇದು ಖಂಡನೀಯ ಎಂದು ತಿಳಿಸಿದರು. ಹುಬ್ಬಳ್ಳಿಯಲ್ಲಿ ಎರಡು ವರ್ಷಗಳ ಹಿಂದೆ ನೇಹಾ ಹಿರೇಮಠ್ ಘಟನೆಯನ್ನು ನಾವ್ಯಾರೂ ಮರೆತಿಲ್ಲ ಎಂದು ತಿಳಿಸಿದರು. ಬಿಜೆಪಿ ಏನಾದರೂ ಹೇಳಿಕೆ ಕೊಟ್ಟರೆ ನಮ್ಮನ್ನು ಕೋಮುವಾದಿಗಳೆಂದು ಬಣ್ಣ ಕೊಡುವ ಕೆಲಸ ಮಾಡುತ್ತಾರೆ ಎಂದು ಆಕ್ಷೇಪಿಸಿದರು.
ಬಿಜೆಪಿ ವತಿಯಿಂದ ಪರಿಹಾರ, ಶಿಕ್ಷಣದ ವ್ಯವಸ್ಥೆ
ಬಿಜೆಪಿ ವತಿಯಿಂದ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ವಿಜಯೇಂದ್ರ ನೀಡಿದರು. ಐದನೇ ತರಗತಿಯಲ್ಲಿ ಓದುತ್ತಿರುವ ಹತ್ತು ವರ್ಷದ ಬಾಲಕನ ಮುಂದಿನ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಪಕ್ಷದ ವತಿಯಿಂದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಹರಿಪ್ರಕಾಶ್ ಕೋಣೆಮನೆಯವರು ತೆಗೆದುಕೊಂಡಿದ್ದನ್ನು ಪ್ರಕಟಿಸಿ, ಸಂಸ್ಥೆಯ ಅಧ್ಯಕ್ಷರನ್ನು ಅಭಿನಂದಿಸಿದರು.
ಯಲ್ಲಾಪುರ ರಂಜಿತಾ ಹತ್ಯೆ ಪ್ರಕರಣ; ಆರೋಪಿ ರಫೀಕ್ ಶವ ಕಾಡಿನಲ್ಲಿ ಪತ್ತೆ!
ಈ ವೇಳೆ ವಿಧಾನ ಪರಿಷತ್ ಸದಸ್ಯ ಶಾಂತರಾಮ್ ಸಿದ್ದಿ, ರಾಜ್ಯ ವಕ್ತಾರರಾದ ಹರಿಪ್ರಕಾಶ್ ಕೋಣೆಮನೆ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ, ಯಲ್ಲಾಪುರ ಮಂಡಲ ಅಧ್ಯಕ್ಷ ಪ್ರಸಾದ್ ಹೆಗಡೆ, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಲ್, ಮುಖಂಡರಾದ ಕೆ.ಜಿ.ನಾಯಕ್, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಶೋಕ್ ಚಲವಾದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವಾಜಿ ನರಸಾಣಿ ಮತ್ತು ಗುರುಪ್ರಸಾದ್ ಹೆಗಡೆ, ವಿ.ಎಚ್.ಪಿ ಜಿಲ್ಲಾಧ್ಯಕ್ಷ ಎಸ್.ಎನ್.ಭಟ್, ಜಿಲ್ಲಾ ಉಪಾಧ್ಯಕ್ಷ ಎಲ್.ಟಿ.ಪಾಟೀಲ್, ಯಲ್ಲಾಪುರ ಮಂಡಳ ಪ್ರಭಾರಿಗಳಾದ ನಾಗರಾಜ್ ನಾಯಕ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಶಿವಾನಿ ಶಾಂತರಾಮ್, ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ, ತಾಲೂಕು ಉಪಾಧ್ಯಕ್ಷರಾದ ಬಿಂದೇಶ್ ನಾಯಕ್, ಜಿ.ಎನ್.ಗಾಂವಕರ, ಉಮೇಶ್ ಭಾಗ್ವತ, ಗಣಪತಿ ಮಾನಿಗದ್ದೆ, ವಿಹಿಂಪದ ಗಜಾನನ ನಾಯ್ಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.