ಶಿರಸಿ/ಜೋಯಿಡಾ: ಕ್ಷೇತ್ರ ಉಳವಿ ಚೆನ್ನಬಸವೇಶ್ವರನ ಮಹಾ ರಥೋತ್ಸವವು ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತರ ಸಮ್ಮುಖದಲ್ಲಿ ಸಂಭ್ರಮ, ಸಡಗರದಿಂದ ಮಂಗಳವಾರ ಸಂಜೆ ನಡೆಯಿತು. ಉಳವಿ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಸಂಜಯ ಕಿತ್ತೂರು ಅವರು ಚನ್ನಬಸವೇಶ್ವರ ರಥಕ್ಕೆ ಪೂಜೆ ಸಲ್ಲಿಸಿ ಭಕ್ತಾರೊಂದಿಗೆ ರಥ ಎಳೆಯುವುದರ ಮೂಲಕ ಮಹಾ ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ನೆರೆದ ಸಾವಿರಾರು ಭಕ್ತರು ತಾ ಮುಂದು ನಾ ಮುಂದು ಎಂಬಂತೆ ಮಹಾರಥವನ್ನು ವೀರಭದ್ರ ದೇವಸ್ಥಾನದವರೆಗೆ ಎಳೆದರು.
ಶಿವ ಭಕ್ತರು ಜಯಘೋಷ, ಬಾಳೆಹಣ್ಣು, ಉತ್ತತ್ತಿಯನ್ನು ರಥಕ್ಕೆ ಎಸೆಯುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು. ಮಹಾ ರಥೋತ್ಸವಕ್ಕೂ ಮುನ್ನ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಜಾತ್ರೆಗೆ ಭೇಟಿ ನೀಡಿ ರಥಬೀದಿಯಲ್ಲಿ ಸಂಚರಿಸಿ ಆಡಳಿತ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಸಂಜಯ ಕಿತ್ತೂರ, ಉಪಾಧ್ಯಕ್ಷ ಪ್ರಕಾಶ್ ಕಿತ್ತೂರ, ಸದಸ್ಯರಾದ ಗಂಗಾಧರ ಕಿತ್ತೂರ, ವಿರೇಶ ಕಂಬಳಿ, ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಮುಕಾಶಿ, ತಹಶೀಲ್ದಾರ್ ಮಂಜುನಾಥ ಮುನ್ನಳ್ಳಿ, ತಾ.ಪಂ ಕಾರ್ಯನಿರ್ವಣಾಧಿಕಾರಿ ಭಾರತಿ.ಎನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎನ್.ಎಂ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ ಹಾಗೂ ಜೋಯಿಡಾ ಸಿಪಿಐ ಎನ್.ಚಂದ್ರಶೇಖರ ಅವರ ನೇತೃತ್ವದಲ್ಲಿ ಜೋಯಿಡಾ ಪಿಎಸ್ಐಗಳಾದ ಮಹೇಶ ಮಾಳಿ ಮತ್ತುಮಹಾದೇವಿ ನಾಯ್ಕವಾಡಿ ಸೇರಿದಂತೆ ದಾಂಡೇಲಿ ಪೊಲೀಸ್ ವಿಭಾಗದ ಪಿಎಸ್ಐಗಳು ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೂಕ್ತ ಭದ್ರತೆಯನ್ನು ಒದಗಿಸಿದ್ದರು.