ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MP Kageri: ಶಿಕ್ಷಣ ಇಲಾಖೆಯ ಪ್ರಯೋಗ ವಿದ್ಯಾರ್ಥಿಗಳ ಭವಿಷ್ಯದ ಜೊತೆಗಿನ ಚೆಲ್ಲಾಟ: ಸಂಸದ ಕಾಗೇರಿ ಆಕ್ರೋಶ

​ದಶಕಗಳಿಂದ ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಯಲ್ಲಿದ್ದ ತ್ರಿಭಾಷಾ ಸೂತ್ರಕ್ಕೆ ಸಚಿವರು ಕೊಡಲಿ ಪೆಟ್ಟು ನೀಡಿದ್ದಾರೆ. ತೃತೀಯ ಭಾಷೆಯ ಅಂಕಗಳನ್ನು ಕೈಬಿಟ್ಟು, ಕೇವಲ ಗ್ರೇಡ್‌ ಪದ್ಧತಿಗೆ ಸೀಮಿತಗೊಳಿಸಿರುವುದು ಮತ್ತು ಒಟ್ಟು ಅಂಕಗಳನ್ನು 625 ರಿಂದ 525 ಕ್ಕೆ ಇಳಿಸಿ ರುವುದು ಶಿಕ್ಷಣ ಕ್ಷೇತ್ರದಲ್ಲಿ ಅರಾಜಕತೆ ಸೃಷ್ಟಿಸಲಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಆತಂಕ ವ್ಯಕ್ತಪಡಿಸಿದ್ದಾರೆ.

​ಶಿರಸಿ: ರಾಜ್ಯ ಶಾಲಾ ಶಿಕ್ಷಣ ಇಲಾಖೆಯು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಕೈಗೊಂಡಿರುವ ಬದಲಾವಣೆಗಳು ವಿದ್ಯಾರ್ಥಿ ವಿರೋಧಿಯಾಗಿದ್ದು, ಸಚಿವ ಮಧು ಬಂಗಾರಪ್ಪ(Minister Madhu Bangarappa) ನವರು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಉತ್ತರ ಕನ್ನಡ ಸಂಸದ ಹಾಗೂ ಮಾಜಿ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwara Hegde Kageri) ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

​ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ಶಿಕ್ಷಣ ಇಲಾಖೆಯ ಇತ್ತೀಚಿನ ನಿರ್ಧಾರಗಳನ್ನು ಕಟುವಾಗಿ ಟೀಕಿಸಿದ್ದಾರೆ. ವರದಿಯ ಮುಖ್ಯಾಂಶಗಳು ಇಲ್ಲಿವೆ:

​ತ್ರಿಭಾಷಾ ಸೂತ್ರಕ್ಕೆ ಕೊಡಲಿ ಪೆಟ್ಟು

​ದಶಕಗಳಿಂದ ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಯಲ್ಲಿದ್ದ ತ್ರಿಭಾಷಾ ಸೂತ್ರಕ್ಕೆ ಸಚಿವರು ಕೊಡಲಿ ಪೆಟ್ಟು ನೀಡಿದ್ದಾರೆ. ತೃತೀಯ ಭಾಷೆ(Third language)ಯ ಅಂಕಗಳನ್ನು ಕೈ ಬಿಟ್ಟು, ಕೇವಲ ಗ್ರೇಡ್‌ ಪದ್ಧತಿಗೆ ಸೀಮಿತಗೊಳಿಸಿರುವುದು ಮತ್ತು ಒಟ್ಟು ಅಂಕಗಳನ್ನು 625 ರಿಂದ 525 ಕ್ಕೆ ಇಳಿಸಿರುವುದು ಶಿಕ್ಷಣ ಕ್ಷೇತ್ರದಲ್ಲಿ ಅರಾಜಕತೆ ಸೃಷ್ಟಿಸಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

​ಭಾಷಾ ಸಾಮರ್ಥ್ಯ ಕುಂಠಿತದ ಭೀತಿ

​"ನಮ್ಮ ರಾಜ್ಯದ ಮಕ್ಕಳು ಕನ್ನಡವನ್ನು ಅಸ್ಮಿತೆಯಾಗಿ, ಇಂಗ್ಲಿಷ್ ಅನ್ನು ಸಂವಹನಕ್ಕಾಗಿ ಹಾಗೂ ಹಿಂದಿ ಅಥವಾ ಸಂಸ್ಕೃತವನ್ನು ರಾಷ್ಟ್ರೀಯ ದೃಷ್ಟಿಕೋನದಿಂದ ಕಲಿಯುತ್ತಿದ್ದರು. ಆದರೆ ಈಗ ತೃತೀಯ ಭಾಷೆ 'ಆಟಕ್ಕುಂಟು ಲೆಕ್ಕಕ್ಕಿಲ್ಲ' ಎಂಬಂತಾಗಿದೆ. ಇದು ಮಕ್ಕಳ ಭಾಷಾ ಸಾಮರ್ಥ್ಯವನ್ನು ಕುಂಠಿತಗೊಳಿಸಿ, ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಹಿನ್ನೆಡೆ ಅನುಭವಿಸುವಂತೆ ಮಾಡುತ್ತದೆ ಎಂದು ಕಾಗೇರಿ ಎಚ್ಚರಿಸಿದ್ದಾರೆ.

​ಸರ್ಕಾರದ ವಿರುದ್ಧ ವಾಗ್ದಾಳಿ

​ಅಪ್ರಬುದ್ಧ ನಿರ್ಧಾರ: ಶಿಕ್ಷಣ ತಜ್ಞರೊಂದಿಗೆ ಯಾವುದೇ ಚರ್ಚೆ ನಡೆಸದೆ ಏಕಾಏಕಿ ಇಂತಹ ಬದಲಾವಣೆ ತಂದಿರುವುದು ಸಚಿವರ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ.

​ಸಿಎಂ ಗಮನಹರಿಸಲಿ: ಮುಖ್ಯಮಂತ್ರಿಗಳು ಅಧಿಕಾರ ಹಸ್ತಾಂತರದ ಚಿಂತೆಯಲ್ಲಿ ಮುಳುಗುವ ಬದಲು, ಇಂತಹ ಗಂಭೀರ ಶೈಕ್ಷಣಿಕ ವಿಚಾರಗಳ ಕಡೆ ಗಮನ ಹರಿಸಬೇಕು.

​ಆದೇಶ ರದ್ದತಿಗೆ ಆಗ್ರಹ: ಕೂಡಲೇ ಈ ಆದೇಶವನ್ನು ರದ್ದುಗೊಳಿಸಿ, ಭಾಷಾ ತಜ್ಞರು ಹಾಗೂ ಸಾಹಿತಿಗಳ ಸಮ್ಮುಖದಲ್ಲಿ ಪಾರದರ್ಶಕ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳ ಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

image

​ಶಿಕ್ಷಣ ಕ್ಷೇತ್ರವು ರಾಜಕೀಯ ಪ್ರಯೋಗಶಾಲೆಯಲ್ಲ. ಇಲಾಖೆಯು ಕೇವಲ ಅಂಕಗಳ ಕಡಿತದ ಮೇಲೆ ಗಮನ ಹರಿಸುತ್ತಿದೆಯೇ ಹೊರತು, ಗುಣಮಟ್ಟದ ಕಲಿಕೆಯ ಮೇಲಲ್ಲ.

ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದರು.