ಶಿರಸಿ: ಜಿಲ್ಲೆಯ ಪ್ರಪ್ರಥಮ ದೈನಿಕ ಲೋಕಧ್ವನಿಯು ನಮ್ಮ ಹೆಮ್ಮೆಯ ಸಾಧಕರು ಆವೃತ್ತಿ-2 ಕಾರ್ಯಕ್ರಮವನ್ನು ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಲ್ಲಿ ಆಯೋಜಿಸಿದೆ. ನಮ್ಮ ಹೆಮ್ಮೆಯ ಸಾಧಕರು ಆವೃತ್ತಿ-1 ಅನ್ನು 2026ರ ಜನವರಿ 22ರಂದು ಬೆಂಗಳೂರಿನಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಈ ಬಾರಿ ಲೋಕಧ್ವನಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಅಲ್ಲದೆ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ ಶಿಲ್ಲಾಂಗ್‌ನ ಲೋಕಭವನ ದಲ್ಲಿ ಪ್ರಶಸಿ ಪ್ರದಾನ ಮಾಡಲಾಗುತ್ತಿದೆ.
‘ನಮ್ಮ ಹೆಮ್ಮೆಯ ಸಾಧಕರು’ ಪ್ರಶಸ್ತಿ ಪ್ರದಾನ ಸಮಾರಂಭವು ಜು.11ರಂದು ಶನಿವಾರ ಸಾಯಂಕಾಲ 5 ಗಂಟೆಗೆ ನಡೆಯಲಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭದ ಉಪಸ್ಥಿತಿಯನ್ನು ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಅವರು ವಹಿಸಿ, ಸಾಧಕರಿಗೆ ಪ್ರಶಸ್ತಿ ವಿತರಿಸಲಿದ್ದಾರೆ.
‘ವಿಶ್ವವಾಣಿ’ ದಿನಪತ್ರಿಕೆಯ ಪ್ರಧಾನ ಸಂಪಾದಕ ಹಾಗೂ ಜನಶಕ್ತಿ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ವಿಶ್ವೇಶ್ವರ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿ ದುಬೈನ ಪರ್ವ ಗ್ರೂಪ್ ಸಂಸ್ಥಾಪಕ ನೀಲೇಶ್ ಎಚ್.ಪಿ. ಭಾಗವಹಿಸಲಿದ್ದು, ಮಂಡಳಿಯ ಧರ್ಮದರ್ಶಿ ಸವಿತಾ ಭ ಟ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದಾರೆ.
ಪ್ರಶಸ್ತಿ ಪುರಸ್ಕೃತರ ವಿವರ: ಶಿಕ್ಷಣ ಮತ್ತು ಸಾಮಾಜಿಕ ರಂಗದಲ್ಲಿ ಕ್ರಾಂತಿ ಮಾಡಿರುವ ಉತ್ತರ ಕನ್ನಡದ ಡಾ. ಇಬ್ರಾಹಿಂ ಕಲ್ಲೂರು, ಡಾ. ವೆಂಕಟೇಶ ನಾಯ್ಕ (ಸ್ಕೋಡ್ವೆಸ್) ಹಾಗೂ ಕೃಷಿ ಉದ್ಯಮಿ ರೊಟೇರಿಯನ್ ಹರೀಶ್ ಹೆಗಡೆ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ವೈದ್ಯಕೀಯ ಮತ್ತು ಸಾರ್ವಜನಿಕ ಸೇವೆಗಾಗಿ ಮೂಳೆ ತಜ್ಞ ಡಾ. ಹೇಮಂತ್ ಭಾಸ್ಮೆ, ಬೆಳಗಾವಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ. ನಯನಾ ಭಾಸ್ಮೆ ಹಾಗೂ ಆಯುರ್ವೇದ ತಜ್ಞ ಡಾ. ವಿನಾಯಕ ಹೆಬ್ಬಾರ್ ಆಯ್ಕೆಯಾಗಿದ್ದಾರೆ. ಸಹಕಾರಿ, ಉದ್ಯಮ ಹಾಗೂ ಹಣಕಾಸು ವಲಯದಲ್ಲಿ ಸಾಧನೆ ಮಾಡಿದ ನಾಗರಾಜ ಶಿರಸಿಕರ್ ಮುಧೋಳ್, ಅರವಿಂದ ತೆಲಗುಂದ, ಹೊಟೇಲ್ ಉದ್ಯಮಿ ಆನಂದು ನಾಯ್ಕ, ವೇದಾಲ್ ಎನರ್ಜಿ ಟೆಕ್ನಾಲಜಿಸ್‌ನ ಆರ್. ಸಾವಿತ್ರಿ ಹಾಗೂ ಶುಕ್ರೋಚ್ಛಾ ಇಂಡಸ್ಟ್ರೀಸ್‌ನ ಪ್ರಶಾಂತ್ ಭಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಾರ್ವಜನಿಕ ಸೇವೆಯಲ್ಲಿ ಗುರುತಿಸಿಕೊಂಡಿರುವ ನಿವೃತ್ತ ಡಿಸಿಎಫ್ ನಾಗರಾಜ ಗಣಪತಿ ನಾಯಕ ತೊರ್ಕೆ, ಮಾಜಿ ಜಿ.ಪಂ. ಸದಸ್ಯ ಜಗದೀಶ ನಾಯಕ ಮೊಗಟಾ, ಪ್ರಮುಖ ಮುಖಂಡ ಪ್ರದೀಪ ನಾಯಕ ದೇವರಬಾವಿ ಹಾಗೂ ಗೋ ಸಂರಕ್ಷಕ ಬಾಸೂರು ತಿಪ್ಪೆಸ್ವಾಮಿ ಅವರಿಗೆ ಪ್ರಶಸ್ತಿ ಸಂದಿದೆ. ಇವರೊಂದಿಗೆ ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಎಸ್. ಜಗದೀಶ ವಡ್ನಾಳ, ರಾಯಚೂರು ವಾಲ್ಮೀಕಿ ವಿವಿ ಕುಲಪತಿ ಡಾ. ಶಿವಾನಂದ ಕೆಳಗಿನಮನಿ, ಜ್ಞಾನ್ ಪ್ರೊ ಸಿಇಒ ಸುಪ್ರೀತ್ ಕಿತ್ತನಕೆರೆ, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಕರುಣಾಕರ ಹಾಗೂ ಹೆಗಡೆ ಗ್ರೂಪ್ ಮುಖ್ಯಸ್ಥೆ ಪದ್ಮಜಾ ಹೆಗಡೆ ಅವರನ್ನು ಈ ಸಮಾರಂಭದಲ್ಲಿ ಗೌರವಿಸಲಾಗುವುದು.