ಮುಂಡಗೋಡು: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಟಿಬೆಟಿಯನ್ ಕಾಲನಿಯಲ್ಲಿ ಟಿಬೆಟ್ ಧರ್ಮಗುರು 14ನೇ ದಲೈಲಾಮಾ ಅವರ 90ನೇ ಜನ್ಮದಿನಾಚರಣೆ ಕಾರ್ಯಕ್ರಮ ಭಾನುವಾರ ನೆರವೇರಿತು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಶಿವರಾಮ ಹೆಬ್ಬಾರ್, ಖ್ಯಾತ ಹೋರಾಟಗಾರ ರಿಚರ್ಡ್ ಗೇರ್, ಟಿಬೆಟ್‌ನ ಗಡಿಪಾರು ಸರ್ಕಾರದ ಸಿಕಿಯೋಂಗ್ (ಅಧ್ಯಕ್ಷ) ಪೆನ್ಪಾ ತ್ಸೆರಿಂಗ್ (Penpa Tsering) ಮತ್ತಿತರ ಗಣ್ಯರು ಸಮಾರಂಭದಲ್ಲಿ ಭಾಗಿಯಾಗಿ, ದಲೈಲಾಮಾ ಅವರ ಆಶೀರ್ವಾದ ಪಡೆದರು.
ಕಾರ್ಯಕ್ರಮದಲ್ಲಿ ದಲೈಲಾಮಾ ಅವರ ಜೀವನ ಚರಿತ್ರೆ ಕುರಿತ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ವಿವಿಧ ಟಿಬೆಟಿಯನ್ ಪ್ರಾಂತಗಳ ಕಲಾವಿದರಿಂದ ಸಾಂಪ್ರದಾಯಿಕ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ವೇಳೆ ಲಡಾಕ್ ಮತ್ತು ಸಿಕ್ಕಿಂ ರಾಜ್ಯಗಳ ಪ್ರಮುಖ ನಾಯಕರು ಕೂಡ ದಲೈಲಾಮಾ ಅವರಿಗೆ ಗೌರವ ಸಲ್ಲಿಸಿದರು.
ನಂತರ ಮಾತನಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು ಅವರು, ದಲೈಲಾಮಾ ಅವರನ್ನು "ಪ್ರಾಚೀನ ಭಾರತೀಯ ಜ್ಞಾನ ಮತ್ತು ಆಧುನಿಕ ಪ್ರಪಂಚದ ನಡುವಿನ ಜೀವಂತ ಸೇತುವೆ" ಎಂದು ಬಣ್ಣಿಸಿದರು. ದಲೈಲಾಮಾ ಅವರು ಭಾರತವನ್ನು ತಮ್ಮ 'ಆರ್ಯಭೂಮಿ' ಎಂದು ಕರೆಯುತ್ತಾರೆ. ಅವರು ಭಾರತದಲ್ಲಿ ನೆಲೆಸಿರುವುದು ನಮಗೆ ಮತ್ತು ನಮ್ಮ ದೇಶಕ್ಕೆ ಸಿಕ್ಕಿರುವ ದೊಡ್ಡ ಸೌಭಾಗ್ಯ ಹಾಗೂ ಹೆಮ್ಮೆ ಎಂದು ಸಚಿವರು ಹೇಳಿದರು.
ಕೇಂದ್ರ ಸಚಿವ ಕಿರಣ್ ರಿಜಿಜು ಅವರ ಎಕ್ಸ್ ಪೋಸ್ಟ್
"ದಲೈಲಾಮಾ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಸಂಪೂರ್ಣ ಹಕ್ಕು ಕೇವಲ ದಲೈಲಾಮಾ ಅವರಿಗೆ ಮತ್ತು ಅವರ ಸಂಸ್ಥೆಗೆ ಮಾತ್ರ ಇದೆ. ಇದರಲ್ಲಿ ಬೇರೆ ಯಾವುದೇ ದೇಶ ಅಥವಾ ವ್ಯಕ್ತಿ ಹಸ್ತಕ್ಷೇಪ ಮಾಡುವಂತಿಲ್ಲ" ಎಂದು ಅವರು ಚೀನಾಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಮುಂಡಗೋಡಿನಲ್ಲಿ ಕಿರಣ್ ರಿಜಿಜು ಅವರ ಮಾತುಗಳ ವಿಡಿಯೊ
ಭಾರತದಲ್ಲಿ ಶಾಂತಿಯುತವಾಗಿ ನೆಲೆಸಿರುವ ಟಿಬೆಟಿಯನ್ ಸಮುದಾಯಕ್ಕೆ ಭಾರತ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳನ್ನು ತಲುಪಿಸಲು ತಾವು ಬದ್ಧರಾಗಿರುವುದಾಗಿ ಅವರು ತಿಳಿಸಿದರು. ಹಿಂಸೆ ಮತ್ತು ಸಂಘರ್ಷಗಳಿಂದ ಕೂಡಿರುವ ಇಂದಿನ ಜಗತ್ತಿಗೆ ದಲೈಲಾಮಾ ಅವರ ಅಹಿಂಸೆ ಮತ್ತು ಕರುಣೆಯ ಸಂದೇಶಗಳು ಅತ್ಯಂತ ಅವಶ್ಯಕವಾಗಿವೆ ಎಂದು ರ ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ದಲೈಲಾಮಾ ಅವರ ದೀರ್ಘಾಯುಷ್ಯಕ್ಕಾಗಿ ಅವರು ಪ್ರಾರ್ಥಿಸಿದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಜಾಗತಿಕ ಶಾಂತಿಯ ದೂತ ದಲೈಲಾಮಾ ಅವರು ಕೇವಲ ಟಿಬೆಟ್ ಸಮುದಾಯಕ್ಕೆ ಸೀಮಿತವಾದವರಲ್ಲ, ಅವರು ಇಡೀ ಜಗತ್ತಿಗೆ ಶಾಂತಿ ಮತ್ತು ಅಹಿಂಸೆಯ ಸಂದೇಶ ನೀಡುತ್ತಿರುವ ಮಹಾನ್ ಸಂತ ಎಂದು ಬಣ್ಣಿಸಿದರು.
ಸಂಸದ ಕಾಗೇರಿ ಅವರ ಭಾಷಣದ ವಿಡಿಯೊ
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಟಿಬೆಟಿಯನ್ ಸಮುದಾಯವು ದಶಕಗಳಿಂದ ಶಾಂತಿಯುತವಾಗಿ ನೆಲೆಸಿದೆ. ಈ ಭಾಗದಲ್ಲಿ ದಲೈಲಾಮಾ ಅವರ ಉಪಸ್ಥಿತಿ ಮತ್ತು ಅವರ ಜನ್ಮದಿನಾಚರಣೆ ನಡೆಯುತ್ತಿರುವುದು ನಮ್ಮ ಜಿಲ್ಲೆಗೆ ಸಂದ ಗೌರವ ಎಂದು ಅವರು ಹೇಳಿದರು.
ಭಾರತ ಮತ್ತು ಟಿಬೆಟ್ ನಡುವೆ ಸಾಂಸ್ಕೃತಿಕ ಮತ್ತು ಧಾರ್ಮಿಕವಾಗಿ ಅವಿನಾಭಾವ ಸಂಬಂಧವಿದೆ. ದಲೈಲಾಮಾ ಅವರು ಭಾರತದ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪಸರಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂಡಗೋಡಿನ ಸ್ಥಳೀಯರು ಮತ್ತು ಟಿಬೆಟಿಯನ್ ಸಮುದಾಯದವರು ಪರಸ್ಪರ ಸಹಬಾಳ್ವೆಯಿಂದ ಬದುಕುತ್ತಿರುವುದು ಮಾದರಿಯಾಗಿದೆ ಎಂದ ಅವರು, ದಲೈಲಾಮಾ ಅವರು ನೂರು ಕಾಲ ಆರೋಗ್ಯದಿಂದ ಬಾಳಲಿ ಮತ್ತು ಅವರ ಮಾರ್ಗದರ್ಶನ ಇಡೀ ಮಾನವಕುಲಕ್ಕೆ ಸಿಗಲಿ ಎಂದು ಅವರು ಹಾರೈಸಿದರು.
ಕಾರವಾರಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನ; ಐಎನ್ಎಸ್ ವಾಗ್ಶೀರ್ ಸಬ್ ಮೆರಿನ್‌ನಲ್ಲಿ ಸಂಚಾರ
ಟೆಬೆಟಿಯನ್ ಬೌದ್ಧಧರ್ಮದ ಗೆಲುಗ್ ಶಾಲೆಯ ಮುಖ್ಯಸ್ಥ ರಿಂಪೋಚೆ ಜೆಟ್ಸನ್ ಲೋಬ್ಸಾಂಗ್ ಡೊರ್ಜೀ ಪೆಲ್ಪ್‌ಸಾಂಗ್‌ಪೋ (Rinpoche Jetsun Lobsang Dorjee Pelsangpo) ಮಾತನಾಡಿ, ಬೌದ್ಧ ಧರ್ಮದ ಅನುಯಾಯಿಗಳು ಕೇವಲ ಪೂಜೆ ಪುನಸ್ಕಾರಗಳಿಗೆ ಸೀಮಿತವಾಗದೆ, ಬುದ್ಧನ ಬೋಧನೆಯಾದ ಕರುಣೆ ಮತ್ತು ಶಾಂತಿ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.