ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sirsi News: ಮುಂಗಾರು ಮಳೆ ಆರಂಭವಾಗುವ ಮುನ್ನ ನಾಗರಿಕ ಸಮಸ್ಯೆಗಳನ್ನು ಬಗೆಹರಿಸಿ: ನಗರಸಭೆ ಪೌರಾಯುಕ್ತರಿಗೆ ಮನವಿ

​ನಗರದಲ್ಲಿ ಸದ್ಯ ತಲೆದೋರಿರುವ ಹಲವು ಗಂಭೀರ ಸಮಸ್ಯೆಗಳನ್ನು ಪಟ್ಟಿ ಮಾಡಿದ ಆನಂದ ಸಾಲೇರ ನೇತೃತ್ವದ ನಿಯೋಗ, ಮಳೆಗಾಲದಲ್ಲಿ ಎದುರಾಗಬಹುದಾದ ಅನಾಹುತಗಳನ್ನು ತಪ್ಪಿಸಲು ತಕ್ಷಣ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಎಚ್ಚರಿಸಿದೆ. ನಗರದ ವಿವಿಧ ವಾರ್ಡ್‌ಗಳಲ್ಲಿ ಅಳವಡಿಸಲಾಗಿರುವ ರಸ್ತೆ ಮತ್ತು ಮಾರ್ಗಗಳ ನಾಮಫಲಕಗಳು ಅತ್ಯಂತ ಹದಗೆಟ್ಟ ಸ್ಥಿತಿಯಲ್ಲಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಇವುಗಳನ್ನು ಆದಷ್ಟು ಬೇಗ ದುರಸ್ತಿ ಗೊಳಿಸಬೇಕು ಅಥವಾ ಹೊಸದಾಗಿ ಅಳವಡಿಸಬೇಕು.

ಶಿರಸಿ: ಮುಂಗಾರು ಮಳೆ ಆರಂಭವಾಗುವ ಮುನ್ನವೇ ನಗರದ ಪ್ರಮುಖ ನಾಗರಿಕ ಸಮಸ್ಯೆಗಳನ್ನು ಬಗೆಹರಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ಬಿಜೆಪಿ ಶಿರಸಿ ನಗರ ಮಂಡಲದ ಅಧ್ಯಕ್ಷ ಆನಂದ ಸಾಲೇರ ನೇತೃತ್ವದಲ್ಲಿ ನಗರಸಭೆ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ನಗರದ ನಾಗರಿಕರ ಸುರಕ್ಷತೆ, ಸುಗಮ ಸಂಚಾರ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಸ್ಥಳೀಯ ಆಡಳಿತವು ಕೂಡಲೇ ಎಚ್ಚೆತ್ತುಕೊಂಡು ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು.

​ನಗರದಲ್ಲಿ ಸದ್ಯ ತಲೆದೋರಿರುವ ಹಲವು ಗಂಭೀರ ಸಮಸ್ಯೆಗಳನ್ನು ಪಟ್ಟಿ ಮಾಡಿದ ಆನಂದ ಸಾಲೇರ ನೇತೃತ್ವದ ನಿಯೋಗ, ಮಳೆಗಾಲದಲ್ಲಿ ಎದುರಾಗಬಹುದಾದ ಅನಾಹುತಗಳನ್ನು ತಪ್ಪಿಸಲು ತಕ್ಷಣ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಎಚ್ಚರಿಸಿದೆ. ನಗರದ ವಿವಿಧ ವಾರ್ಡ್‌ಗಳಲ್ಲಿ ಅಳವಡಿಸಲಾಗಿರುವ ರಸ್ತೆ ಮತ್ತು ಮಾರ್ಗಗಳ ನಾಮಫಲಕಗಳು ಹದಗೆಟ್ಟ ಸ್ಥಿತಿಯಲ್ಲಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಇವುಗಳನ್ನು ಆದಷ್ಟು ಬೇಗ ದುರಸ್ತಿಗೊಳಿಸ ಬೇಕು ಅಥವಾ ಹೊಸದಾಗಿ ಅಳವಡಿಸಬೇಕು. ವೈ ಜಂಕ್ಷನ್‌ನಿಂದ ಯಲ್ಲಾಪುರ ನಾಕಾ ರಸ್ತೆಯವರೆಗೆ ಚತುಷ್ಪಥ ರಸ್ತೆ ಅಗಲೀಕರಣ ಕಾಮಗಾರಿ ಇಲಾಖೆಗಳ ಸಮನ್ವಯದ ಕೊರತೆಯಿಂದಾಗಿ ಕುಂಟುತ್ತಾ ಸಾಗುತ್ತಿದ್ದು, ಧೂಳಿನ ಸಮಸ್ಯೆಯಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ರಸ್ತೆ ಯನ್ನು ಶೀಘ್ರವಾಗಿ ಸಂಚಾರ ಯೋಗ್ಯವನ್ನಾಗಿ ಮಾಡಬೇಕು ಎಂದು ಆಗ್ರಹಿಸಲಾಗಿದೆ.

ಇದನ್ನೂ ಓದಿ: Sirsi-Haveri Road: ರಸ್ತೆ ದುರಸ್ತಿಗಾಗಿ ಬೀದಿಗಿಳಿದ ಸಾವಿರಾರು ಸಾರ್ವಜನಿಕರು; ಶಿರಸಿ-ಹಾವೇರಿ ಹೈವೆ ಬಂದ್‌: ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್‌ ಜಾಮ್‌

​ಮಳೆಗಾಲದ ಮುನ್ನವೇ ನಗರದ ಪ್ರಮುಖ ರಾಜಕಾಲುವೆಗಳು ಮತ್ತು ಚರಂಡಿಗಳಲ್ಲಿ ತುಂಬಿರುವ ಹೂಳನ್ನು ಸ್ವಚ್ಛಗೊಳಿಸದಿದ್ದರೆ ನೀರು ರಸ್ತೆಗೆ ನುಗ್ಗುವ ಭೀತಿ ಇದ್ದು, ತಕ್ಷಣ ಹೂಳೆತ್ತುವ ಕಾರ್ಯ ಆರಂಭಿಸಬೇಕಿದೆ. ಇದರೊಂದಿಗೆ ನಿಯಮಾವಳಿಗಳಿಗೆ ವಿರುದ್ಧವಾಗಿ ಮತ್ತು ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ರಸ್ತೆ ಹಂಪ್‌ಗಳನ್ನು ತೆರವುಗೊಳಿಸಬೇಕು. ಪ್ರಸ್ತುತ ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಸ್ತೆ ದುರಸ್ತಿ ಹಾಗೂ ಅಗಲೀಕರಣ ಕಾಮಗಾರಿಗಳು ಅತ್ಯಂತ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

​ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಮುಖ್ಯ ಟ್ಯಾಂಕ್‌ಗಳನ್ನು ದೀರ್ಘಕಾಲದಿಂದ ಸ್ವಚ್ಛಗೊಳಿಸದಿರುವುದರಿಂದ, ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಹೀಗಾಗಿ ತಕ್ಷಣವೇ ನೀರಿನ ಟ್ಯಾಂಕ್‌ಗಳ ಶುದ್ಧೀಕರಣವಾಗಬೇಕು. ಮಳೆಗಾಲದಲ್ಲಿ ಸಾರ್ವಜನಿಕ ರಸ್ತೆಗಳು ಕೆಸರಾಗದಂತೆ ತಡೆಯಲು, ನೀರು ಸರಬರಾಜು ಮಂಡಳಿಯಿಂದ ರಸ್ತೆ ಅಗೆದು ನಡೆಸಲಾಗುತ್ತಿರುವ ಕಾಮಗಾರಿಗಳನ್ನು ಮಳೆಗಾಲ ಮುಗಿಯುವವರೆಗೆ ಕಡ್ಡಾಯವಾಗಿ ಸ್ಥಗಿತಗೊಳಿಸಬೇಕು. ಅಲ್ಲದೆ, ನಗರದಲ್ಲಿ ನಡೆಯುವ ಕಾಮಗಾರಿಗಳ ಪಾರದರ್ಶಕತೆಗಾಗಿ ಅವುಗಳ ನಕ್ಷೆ ಹಾಗೂ ಅಂದಾಜು ಪತ್ರಿಕೆಯನ್ನು ಸಾರ್ವಜನಿಕರ ಮಾಹಿತಿಗಾಗಿ ನಗರಸಭೆಯಲ್ಲಿ ಕಾಯಂ ಆಗಿ ಪ್ರದರ್ಶನಕ್ಕೆ ಇಡಬೇಕು ಎಂದು ಒತ್ತಾಯಿಸಲಾಗಿದೆ.

​ನಗರದ ಹಲವು ವಾರ್ಡ್‌ಗಳ ಮುಖ್ಯ ರಸ್ತೆಗಳಲ್ಲಿ ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲ. ಮಳೆಗಾಲದ ಕತ್ತಲೆಯಲ್ಲಿ ಅಪರಾಧ ಕೃತ್ಯಗಳು ಮತ್ತು ಅಪಘಾತಗಳು ಹೆಚ್ಚಾಗುವ ಸಂಭವ ವಿರುವುದರಿಂದ ಬೀದಿ ದೀಪಗಳ ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಹಿಂದಿನ ಸರ್ಕಾ ರದ ಅವಧಿಯಲ್ಲಿ ಮಂಜೂರಾಗಿ ಬಾಕಿ ಉಳಿದಿರುವ ನಗರೋತ್ಥಾನ ಯೋಜನೆಯ ಕಾಮಗಾರಿ ಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು. ಇನ್ನು ಶಿರಸಿ ನಗರದಾದ್ಯಂತ ಬೀದಿನಾಯಿ ಮತ್ತು ಹಂದಿಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಸಾರ್ವಜನಿಕರ ನೆಮ್ಮದಿ ಕೆಡಿಸುತ್ತಿದೆ. ಈ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.

​ನಗರಸಭೆ ಪೌರಾಯುಕ್ತರು ಈ ಎಲ್ಲಾ ವಿಷಯಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ವೈಯಕ್ತಿಕವಾಗಿ ಗಮನಹರಿಸುವ ಮೂಲಕ ಸಂಬಂಧಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಬಿಜೆಪಿ ನಗರ ಮಂಡಲದ ಅಧ್ಯಕ್ಷ ಆನಂದ ಸಾಲೇರ ಪೌರಾಯುಕ್ತರಿಗೆ ಸಲ್ಲಿಸಿದ ಮನವಿಯಲ್ಲಿ ವಿನಂತಿಸಿದ್ದಾರೆ.

image

ಆದಷ್ಟು ಬೇಗ ನಗರಸಭೆ ಮಳೆಗಾಲದ ಕಾಮಗಾರಿ ಮಾಡಬೇಕು. ಗುತ್ತಿಗೆದಾರು ಯಾಕೆ ಮಾಡುತ್ತಿಲ್ಲ ಎನ್ನುವುದನ್ನೂ ನೋಡಬೇಕು. ನಮ್ಮ ಅವಧಿಯಲ್ಲಿ ಅಪ್ರುವ್ ಆದ ಕಾಮಗಾರಿ ಪೂರ್ಣಗೊಳಿಸಬೇಕು. ಜನರಿಗೆ ತೊಂದರೆಯಾಗದಂತೆ ಕಾರ್ಯ ಮಾಡಬೇಕು.

ಶರ್ಮಿಳಾ, ಮಾದನಗೇರಿ, ನಗರಸಭೆ ಮಾಜಿ ಅಧ್ಯಕ್ಷೆ.
image

ಕಾಂಗ್ರೇಸ್ ಕಚೇರಿಯಿಂದ ದೂರವಾಣಿ ಕರೆ ಬಂದರೆ ಮಾತ್ರ ಕಾರ್ಯ ಮಾಡುವ ಕಾರ್ಯ ನಡೆಯುತ್ತಿದೆ. ನಗರದಲ್ಲಿ ಉತ್ತಮವಾಗಿ ಜನಪರವಾಗಿ ಕಾರ್ಯ ಮಾಡಬೇಕಾದ ಕರ್ತವ್ಯ ಪೌರಾಯುಕ್ತರದ್ದು ಅದನ್ನು ಸರಿಯಾಗಿ‌ನಿರ್ವಹಿಸಿ.

-ನಂದನ‌ ಸಾಗರ