ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಾಂಡೇಲಿಯ ರೆಸಾರ್ಟ್‌ನಲ್ಲಿ ಜಿಪ್‌ಲೈನ್ ಲಾಕ್‌ ತುಂಡಾಗಿ 40 ಅಡಿ ಮೇಲಿಂದ ಬಿದ್ದ ಯುವಕ; ಗಂಭೀರ ಗಾಯ! Video

Dandeli Zipline Accident: ದಾಂಡೇಲಿಯ 'ಸ್ಟರ್ಲಿಂಗ್​​ ರಿವರ್​ ರೆಸಾರ್ಟ್'ನಲ್ಲಿ ಜಿಪ್‌ಲೈನ್​ ಲಾಕ್‌ ತುಂಡಾಗಿ ಕೆಳಗೆ ಬಿದ್ದ ಹಿನ್ನೆಲೆಯಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಸುಮಾರು 30 ರಿಂದ 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದರಿಂದ ಎರಡೂ ಕೈ ಹಾಗೂ ಎರಡೂ ಕಾಲುಗಳ ಎಲುಬುಗಳು ಮುರಿದಿದ್ದು, ನರಗಳಿಗೂ ತೀವ್ರ ಹಾನಿಯಾಗಿದೆ ಎನ್ನಲಾಗಿದೆ. ಗಾಯಾಳುವನ್ನು ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರವಾರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದಾಂಡೇಲಿಯ 'ಸ್ಟರ್ಲಿಂಗ್​​ ರಿವರ್​ ರೆಸಾರ್ಟ್'ನಲ್ಲಿ (Dandeli resort) ಜಿಪ್‌ಲೈನ್​ ಲಾಕ್‌ ತುಂಡಾಗಿ ಯುವಕನೊಬ್ಬ 30-40 ಅಡಿ ಎತ್ತರದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ (Zipline Accident) ನಡೆದಿದೆ. ವಿಜಯಪುರ ನಗರದ ನಿವಾಸಿ ಕುಬೇರ ಸುರಪುರ ಗಾಯಗೊಂಡ ಯುವಕ.

ಕಳೆದ ಜುಲೈ 3 ರಂದು ಕುಬೇರ ಅವರು ತಮ್ಮ ಸಹೋದರ ಪ್ರಶಾಂತ ಅವರೊಂದಿಗೆ ದಾಂಡೇಲಿಯ ಸ್ಟರ್ಲಿಂಗ್ ರಿವರ್ ರೆಸಾರ್ಟ್‌ಗೆ ಪ್ರವಾಸಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ. ಕುಬೇರ ಅವರು ಜಿಪ್‌ಲೈನ್‌ನಲ್ಲಿ ಸಾಗುತ್ತಿದ್ದಾಗ ಹಠಾತ್ತನೆ ಅದರ ಲಾಕ್ ಕಟ್ ಆಗಿದೆ. ಪರಿಣಾಮ ಅವರು ಸುಮಾರು 30 ರಿಂದ 40 ಅಡಿ ಎತ್ತರದಿಂದ ನೇರವಾಗಿ ಕೆಳಗೆ ಬಿದ್ದಿದ್ದಾರೆ. ಈ ಭೀಕರ ಅಪಘಾತದ ದೃಶ್ಯವು ಕೆಳಗೆ ನಿಂತು ವಿಡಿಯೋ ಮಾಡುತ್ತಿದ್ದ ಅವರ ಸಹೋದರ ಪ್ರಶಾಂತ ಅವರ ಮೊಬೈಲ್ ಫೋನ್‌ನಲ್ಲಿ ಲೈವ್ ಆಗಿ ಸೆರೆಯಾಗಿದೆ.



ಬಿದ್ದ ರಭಸಕ್ಕೆ ಕುಬೇರ ಅವರ ಎರಡೂ ಕೈ ಹಾಗೂ ಎರಡೂ ಕಾಲುಗಳ ಎಲುಬುಗಳು ಮುರಿದಿದ್ದು, ನರಗಳಿಗೂ ತೀವ್ರ ಹಾನಿಯಾಗಿದೆ ಎನ್ನಲಾಗಿದೆ. ಅಪಘಾತ ನಡೆದ ತಕ್ಷಣ ಗಾಯಾಳುವನ್ನು ದಾಂಡೇಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸದ್ಯ ಪರಿಸ್ಥಿತಿ ಗಂಭೀರ ಆಗಿರುವುದರಿಂದ ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಈಗಾಗಲೇ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇನ್ನುಳಿದ ಕೈಕಾಲುಗಳ ಶಸ್ತ್ರಚಿಕಿತ್ಸೆಗೆ ವೈದ್ಯರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಸ್ಟರ್ಲಿಂಗ್​ ರಿವರ್​ ರೆಸಾರ್ಟ್ ಸಿಬ್ಬಂದಿಯ ಬೇಜವಾಬ್ದಾರಿತನ ಹಾಗೂ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಇರುವುದೇ ಈ ಘಟನೆಗೆ ನೇರ ಕಾರಣ ಎಂದು ಗಾಯಾಳುವಿನ ಕುಟುಂಬಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಅಪಘಾತ ನಡೆದ ಆರಂಭದಲ್ಲಿ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವುದಾಗಿ ರೆಸಾರ್ಟ್ ಆಡಳಿತ ಮಂಡಳಿ ಭರವಸೆ ನೀಡಿತ್ತು. ಆದರೆ, ಇದೀಗ ಚಿಕಿತ್ಸಾ ವೆಚ್ಚ ನೀಡಲು ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ.

ನೋಡ ನೋಡುತ್ತಿದ್ದಂತೆ ನದಿ ತಟದಲ್ಲಿದ್ದ 12 ವರ್ಷದ ಬಾಲಕನನ್ನೇ ಎಳೆದೊಯ್ದ ಮೊಸಳೆ; ಬೆಚ್ಚಿಬಿದ್ದ ಗ್ರಾಮಸ್ಥರು

ಈ ಕುರಿತು ಪ್ರತಿಕ್ರಿಯಿಸಿರುವ ರೆಸಾರ್ಟ್ ಮ್ಯಾನೇಜರ್, ಇದು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಆಗಿದ್ದಲ್ಲ. ತಾಂತ್ರಿಕ ಕಾರಣದಿಂದ ಸಂಭವಿಸಿದ ಆಕಸ್ಮಿಕ ಘಟನೆಯಾಗಿದೆ. ನಾವು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿಲ್ಲ, ಶೀಘ್ರದಲ್ಲೇ ವಿಜಯಪುರಕ್ಕೆ ತೆರಳಿ ಯುವಕನ ಕುಟುಂಬದವರೊಂದಿಗೆ ಖುದ್ದಾಗಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು" ಎಂದು ಮಾಹಿತಿ ನೀಡಿದ್ದಾರೆ.