ಪರ್ಯಾಯದ ಉದ್ದಕ್ಕೂ ವೇದ ಪಾರಾಯಣ
ಹೊಸಪೇಟೆ: ಉಡುಪಿ ಶ್ರೀಕೃಷ್ಣ ಮಠದಲ್ಲಿ 2026ರ ಜನವರಿ 18ರಿಂದ ಶಿರೂರು ಮಠದ ಪರ್ಯಾಯ ಅವಧಿ ಆರಂಭವಾಗಲಿದ್ದು, ಎರಡು ವರ್ಷವೂ ಪ್ರತಿದಿನ ನಾಲ್ಕೂ ವೇದಗಳ ಪಠಣ ಪರ್ಯಾಯದ ವಿಶೇಷವಾಗಿರುತ್ತದೆ ಎಂದು ಸರ್ವಜ್ಞಪೀಠ ಏರಲಿರುವ ಶ್ರೀ ವೇದ ವರ್ಧನತೀರ್ಥ ಶ್ರೀಪಾದರು ಹೇಳಿದರು.
ನಗರದ ಶ್ರೀಕೃಷ್ಣ ಮಠದ ಸಹಯೋಗದಲ್ಲಿ ಹೊಸಪೇಟೆ ಬ್ರಾಹ್ಮಣ ಸಂಘದ ವತಿಯಿಂದ ಬುಧವಾರ ನಡೆದ ಶ್ರೀಗಳ ಶೋಭಾಯಾತ್ರೆಯ ಬಳಿಕ ನಡೆದ ಆಶೀರ್ವಚನದಲ್ಲಿ ಅವರು ಈ ವಿಷಯ ತಿಳಿಸಿದರು.
‘ಚತುರ್ವೇದಗಳು ಸನಾತನ ಧರ್ಮದ ದಿಕ್ಸೂಚಿಗಳಾಗಿದ್ದು, ಅವುಗಳ ಶ್ರವಣದಿಂದಲೂ ಪುಣ್ಯ ಪ್ರಾಪ್ತಿ ನಿಶ್ಚಿತ. ಹೀಗಾಗಿ ಕೃಷ್ಣ ಮಠದಲ್ಲಿ ನಾಲ್ಕೂ ವೇದಗಳ ಪಠಣ ಪ್ರತಿದಿನ 20 ಮಂದಿ ವೇದ ವಿದ್ವಾಂಸರಿಂದ ಬೆಳಿಗ್ಗೆಯಿಂದ ಸಂಜೆಯ ತನಕ ನಡೆಯಲಿದೆ. ಇದರ ಜತೆಗೆ ಎಲ್ಲಾ ಭಕ್ತರನ್ನೂ ಒಂದೇ ಭಾವದಲ್ಲಿ, ಒಂದೇ ರೀತಿಯಲ್ಲಿ ಕಾಣುವ ವ್ಯವಸ್ಥೆಯೂ ಬರಲಿದೆ. ಎಲ್ಲರಿಗೂ ಭಗವಂತನ ಸೇವೆ ಮಾಡುವುದಕ್ಕೆ ಸಹ ಅವಕಾಶ ಸಿಗಲಿದೆ’ ಎಂದು ಅವರು ಹೇಳಿದರು.
ಇದನ್ನೂ ಓದಿ: Hospet News: ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಸ್ವಂತ ಕಟ್ಟಡ ನ.1ಕ್ಕೆ ಉದ್ಘಾಟನೆ: ವಿಶ್ವನಾಥ್ ಚ.ಹಿರೇಮಠ
‘ಪರ್ಯಾಯ ಎಂದರೆ ಅದು ಸ್ವಾಮಿಗಳ ಪ್ರತಿಷ್ಠೆಯಲ್ಲ, ಅದು ಎಲ್ಲ ಭಕ್ತರೂ ಒಳಗೊ ಳ್ಳುವ ಪುಣ್ಯ ಕೆಲಸ. ತಮ್ಮೆಲ್ಲರ ಪರವಾಗಿ ದೇವರಿಗೆ ಪೂಜೆ ಮಾಡುವುದಕ್ಕ ಮಾತ್ರ ನಾವು ಅಲ್ಲಿರುತ್ತೇವೆ. ಹೀಗಾಗಿ ಭಕ್ತರು ಉಡುಪಿಗೆ ದೊಡ್ಡ ಸಂಖ್ಯೆಯಲ್ಲಿ ಬಂದು ಶ್ರೀಕೃಷ್ಣ ಮುಖ್ಯ ಪ್ರಾಣನ ಕೃಪೆಗೆ ಪಾತ್ರರಾಗಬೇಕು. ದಾನ, ಧರ್ಮಗಳನ್ನು ಹೆಚ್ಚು ಹೆಚ್ಚು ಮಾಡುವ ಮೂಲಕ ಸ್ಥಿತಿವಂತರು ತಮ್ಮ ಕೈಲಾದ ಕೊಡುಗೆಯನ್ನು ಸಮಾಜಕ್ಕೆ ಸಲ್ಲಿಸುತ್ತ ಇರಬೇಕು’ ಎಂದರು.
ಇದಕ್ಕೆ ಮೊದಲು ಬೆಳಿಗ್ಗೆ ಪಾದಗಟ್ಟೆ ಆಂಜನೇಯ ದೇವಸ್ಥಾನದಿಂದ ವಡಕರಾಯ ದೇವಸ್ಥಾನದವರೆಗೆ ಶ್ರೀಗಳ ಶೋಭಾಯಾತ್ರೆ ನಡೆಯಿತು. ಸಂಜೆ ನಗರದ ಹಲವು ಭಕ್ತರ ಮನೆಗಳಲ್ಲಿ ಶ್ರೀಗಳಿಗೆ ಪಾದಪೂಜೆ ಸೇವೆ ನಡೆಯಿತು.
ಶ್ರೀಕೃಷ್ಣ ಮಠದ ವ್ಯವಸ್ಥಾಪಕರಾದ ವಿದ್ವಾನ್ ವೆಂಕಟೇಶ್ ಆಚಾರ್ಯ, ಹೊಸಪೇಟೆ ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ.ದಿವಾಕರ್, ಮುಖಂಡರಾದ ನರಸಿಂಹಮೂರ್ತಿ (ಅಪ್ಪಣ್ಣ), ವಿಷ್ಣು ಸೇವಾ ಸಮಿತಿಯ ಶ್ರೀಪತಿ ಶ್ರೀಪ್ರೆಸ್, ನರಸಿಂಹಾಚಾರ್, ವಾದಿರಾಜ ಭಟ್ ಇತರರಿದ್ದರು.