ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Hospet News: ಬೆಳೆ ನಷ್ಟ, ಕುಡಿಯುವ ನೀರು ಹಾಗೂ ವಿಬಿಜಿ ರಾಮ್ ಜಿ ಕಾಮಗಾರಿ ಕುರಿತು ರೈತರು, ಕಾರ್ಮಿಕರಿಂದ ಮಾಹಿತಿ ಸಂಗ್ರಹ

ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳಾದ ಅಜಿತ್ ಕುಮಾರ್ ಸಾವು ನೇತೃತ್ವದ ತಂಡದ ಸದಸ್ಯರಾದ ಕರ್ನಲ್ ಅಮರೇಂದ್ರ ಸಿಂಗ್, ಚೇತ್ ರಾಮ್ ಮೀನಾ ಅವರ ತಂಡವು ಜಿಲ್ಲೆಯ ವಿವಿಧೆಡೆ ಬರ ಪರಿಸ್ಥಿತಿ ಯನ್ನು ಪರಿಶೀಲಿಸಿತು. ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಜಿಲ್ಲೆಯಲ್ಲಿ ಉಂಟಾಗಿರುವ ಮಳೆ ಕೊರತೆ, ಬೆಳೆ ಹಾನಿ, ಕುಡಿಯುವ ನೀರಿನ ಲಭ್ಯತೆ ಹಾಗೂ ಗ್ರಾಮೀಣ ಉದ್ಯೋಗದ ಪರಿಸ್ಥಿತಿಗೆ ಸಂಬಂಧಿಸಿದಂತೆ ತಂಡಕ್ಕೆ ಮಾಹಿತಿ ನೀಡಿದರು.

ಹೊಸಪೇಟೆ: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯನ್ನು ಪರಿಶೀಲಿಸಲು ಆಗಮಿಸಿರುವ ಕೇಂದ್ರ ಬರ ಅಧ್ಯಯನ ತಂಡವು ಸೋಮವಾರ ಹರಪನಹಳ್ಳಿ ಮತ್ತು ಹೂವಿನಹಡಗಲಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ರೈತರು, ಕೂಲಿಕಾರ್ಮಿಕರು ಹಾಗೂ ಗ್ರಾಮಸ್ಥರಿಂದ ನೇರವಾಗಿ ಮಾಹಿತಿ ಸಂಗ್ರಹಿಸಿತು.

ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳಾದ ಅಜಿತ್ ಕುಮಾರ್ ಸಾವು ನೇತೃತ್ವದ ತಂಡದ ಸದಸ್ಯ ರಾದ ಕರ್ನಲ್ ಅಮರೇಂದ್ರ ಸಿಂಗ್, ಚೇತ್ ರಾಮ್ ಮೀನಾ ಅವರ ತಂಡವು ಜಿಲ್ಲೆಯ ವಿವಿಧೆಡೆ ಬರ ಪರಿಸ್ಥಿತಿಯನ್ನು ಪರಿಶೀಲಿಸಿತು. ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಜಿಲ್ಲೆಯಲ್ಲಿ ಉಂಟಾಗಿರುವ ಮಳೆ ಕೊರತೆ, ಬೆಳೆ ಹಾನಿ, ಕುಡಿಯುವ ನೀರಿನ ಲಭ್ಯತೆ ಹಾಗೂ ಗ್ರಾಮೀಣ ಉದ್ಯೋಗದ ಪರಿಸ್ಥಿತಿಗೆ ಸಂಬಂಧಿಸಿದಂತೆ ತಂಡಕ್ಕೆ ಮಾಹಿತಿ ನೀಡಿದರು.

ನೀಲಗುಂದ ಕೆರೆಯಲ್ಲಿ ವಿಬಿ ಜಿ ರಾಮ್ ಜಿ(VB G Ram Ji) ಯಡಿ ಕೖಗೊಂಡಿರುವ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲನೆ ನಡೆಸಿ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು.

ಕಾಮಗಾರಿಯಲ್ಲಿ ಸುಮಾರು 416 ಕಾರ್ಮಿಕರು ತೊಡಗಿಸಿಕೊಂಡಿದ್ದು, ಪ್ರತಿ ದಿನ ರೂ.382ರಂತೆ ಕೂಲಿ ಪಾವತಿಸಲಾಗುತ್ತಿದೆ ಎಂದು ಕಾರ್ಮಿಕರು ತಂಡಕ್ಕೆ ಮಾಹಿತಿ ನೀಡಿದರು.

ಇದನ್ನೂ ಓದಿ: Hospet News: ಯುವ ಸಮೂಹ ದುಶ್ಚಟಗಳಿಗೆ ಬಲಿಯಾಗದೇ ಆರೋಗ್ಯದ ಬಗ್ಗೆ ಜಾಗೃತಿ ವಹಿಸಿ: ಗಂಟೆ ಸೋಮಶೇಖರ್

ಬಹುತೇಕ ಕಾರ್ಮಿಕರು ಭೂಹೀನರಾಗಿದ್ದು, ಕೂಲಿ ಕೆಲಸವನ್ನೇ ಅವಲಂಬಿಸಿರುವುದಾಗಿ ತಿಳಿಸಿದರು. ಉದ್ಯೋಗ ಖಾತ್ರಿ ಯೋಜನೆಯಡಿ ನಿರಂತರವಾಗಿ ಕೆಲಸ ದೊರೆಯದ ಸಂದರ್ಭದಲ್ಲಿ ಕಾಫಿ ಎಸ್ಟೇಟ್‌ಗಳಿಗೆ ಗುಳೆ ಹೋಗಬೇಕಾಗುತ್ತದೆ ಎಂದು ಕಾರ್ಮಿಕರು ತಿಳಿಸಿದರು. ಕೆಲವು ಕಾರ್ಮಿಕರು ಕೂಲಿ ಹಣ ಪಾವತಿಯಲ್ಲಿ ವಿಳಂಬವಾಗುತ್ತಿರುವ ಕುರಿತು ಅಹವಾಲು ಸಲ್ಲಿಸಿದರು.

ತಂಡದಲ್ಲಿದ್ದ ಡಾ. ಜೆ. ಹರ್ಷ ಅವರು ಕಾರ್ಮಿಕರೊಂದಿಗೆ ನೇರವಾಗಿ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು.

ಮೈದೂರು ಗ್ರಾಮದಲ್ಲಿ ಕುಡಿಯುವ ನೀರಿನ ಸ್ಥಿತಿ ಪರಿಶೀಲನೆ: ಬರ ಅಧ್ಯಯನ ತಂಡವು ಮೈದೂರು ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಲಭ್ಯತೆ ಹಾಗೂ ನೀರು ಪೂರೈಕೆಗೆ ಸಂಬಂಧಿ ಸಿದ ಸಮಸ್ಯೆಗಳ ಕುರಿತು ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು. ತಂಡವು ಖುದ್ದು ಕೊಳವೆ ಬಾವಿಯ ಸ್ಥಿತಿಯನ್ನೂ ಪರಿಶೀಲಿಸಿದ ತಂಡವು ಬರ ಪರಿಸ್ಥಿತಿಯಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಮೇಲೆ ಉಂಟಾಗಿರುವ ಪರಿಣಾಮದ ಕುರಿತು ಮಾಹಿತಿ ಸಂಗ್ರಹಿಸಿತು.

ಇಟ್ಟಿಗಿ ಗ್ರಾಮದಲ್ಲಿ ಮೆಕ್ಕೆಜೋಳ ಬೆಳೆ ಹಾನಿ ಪರಿಶೀಲನೆ: ಹೂವಿನಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮಕ್ಕೆ ಭೇಟಿ ನೀಡಿದ ತಂಡವು ರೈತ ರುದ್ರಪ್ಪ ಬಳಿಗಾರ ಅವರ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ ಬೆಳೆಯನ್ನು ಪರಿಶೀಲಿಸಿತು. ಮಳೆ ಕೊರತೆಯಿಂದ ಬೆಳೆ ಹಾನಿಗೊಳಗಾಗಿರುವುದನ್ನು ಸ್ಥಳದಲ್ಲಿಯೇ ವೀಕ್ಷಿಸಿ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ರೈತ ರುದ್ರಪ್ಪ ಅವರು 3 ಎಕರೆ 82 ಸೆಂಟ್ಸ್ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆಯಲು ಸುಮಾರು ರೂ.60 ಸಾವಿರ ವೆಚ್ಚ ಮಾಡಿದ್ದು, ಮಳೆ ಕೊರತೆಯಿಂದ ಬೆಳೆ ಸಂಪೂರ್ಣ ಹಾನಿಯಾಗಿದೆ ಎಂದು ತಿಳಿಸಿದರು.

ಮಳೆ ಸಮರ್ಪಕವಾಗಿ ಬಂದಿದ್ದರೆ ಸುಮಾರು ರೂ.3 ರಿಂದ ರೂ.4 ಲಕ್ಷದವರೆಗೆ ಆದಾಯ ನಿರೀಕ್ಷಿಸಬಹುದಾಗಿತ್ತು. ಆದರೆ ಮಳೆ ಕೈಕೊಟ್ಟ ಕಾರಣ ಈಗ ಹಾಕಿರುವ ಬಂಡವಾಳವು ಮರಳಿ ಬಾರದ ಸ್ಥಿತಿ ಇದೆ.

ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಘೋಷಿಸಿರುವ ಎಕರೆಗೆ ರೂ.2,500 ಪರಿಹಾರವು ಸಾಲದು. ಬೆಳೆ ಹಾನಿಯನ್ನು ವೈಜ್ಞಾನಿಕವಾಗಿ ಅಂದಾಜಿಸಿ ನಷ್ಟದ ಪ್ರಮಾಣಕ್ಕೆ ಅನುಗುಣವಾಗಿ ಪ್ರತಿ ಎಕರೆಗೆ ರೂ.60 ಸಾವಿರ ಪರಿಹಾರ ನೀಡಬೇಕು ಎಂದು ರೈತರು ತಂಡದ ಮೂಲಕ ಮನವಿ ಮಾಡಿದರು.

ಬೆಳೆ ವಿಮೆ ಪಾವತಿಸಿದ್ದರೂ ಬೆಳೆ ಹಾನಿಯ ನಂತರ ವಿಮಾ ಪರಿಹಾರ ದೊರೆಯದಿರುವ ಕುರಿತು ರೈತರು ಅಹವಾಲು ಸಲ್ಲಿಸಿದರು. ಈ ಸಂದರ್ಭದಲ್ಲಿ ತಂಡವು ಬೆಳೆ ವಿಮೆ, ಬೆಳೆ ಹಾನಿ ಹಾಗೂ ಪರಿಹಾರ ಪಾವತಿಗೆ ಸಂಬಂಧಿಸಿದಂತೆ ರೈತರಿಂದ ಮಾಹಿತಿ ಪಡೆದುಕೊಂಡಿತು.

ಈರುಳ್ಳಿ ಬೆಳೆ ಹಾನಿ ಪರಿಶೀಲನೆ: ಇಟ್ಟಿಗೆ ಗ್ರಾಮದಲ್ಲಿ ಸಾಕಮ್ಮ ಅವರಿಗೆ ಸೇರಿದ 5 ಎಕರೆ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಯನ್ನು ತಂಡ ಪರಿಶೀಲಿಸಿತು. ಜಮೀನಿನಿಂದ ಕಿತ್ತ ಈರುಳ್ಳಿ ಮಾದರಿಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸಿದ ಅಧಿಕಾರಿಗಳು ಬೆಳೆ ಹಾನಿಯ ಪ್ರಮಾಣ, ಕೃಷಿ ವೆಚ್ಚ, ನೀರಾವರಿ ಸೌಲಭ್ಯ, ಬೆಳೆ ಸ್ಥಿತಿ ಹಾಗೂ ನಿರೀಕ್ಷಿತ ಇಳುವರಿ ಕುರಿತು ರೈತರಿಂದ ಮಾಹಿತಿ ಪಡೆದರು.

ಮಳೆ ಕೊರತೆಯ ಹಿನ್ನೆಲೆಯಲ್ಲಿ ಮಳೆ ಆಶ್ರಿತ ಪ್ರದೇಶಗಳಲ್ಲಿ ಬೆಳೆ ಆಯ್ಕೆ ಹಾಗೂ ಕೃಷಿ ಪದ್ಧತಿಗಳಲ್ಲಿ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿದರು.

ಕೆಸಿಸಿ ಸಾಲ ಸೌಲಭ್ಯ ಬಳಸಿಕೊಳ್ಳಲು ಸಲಹೆ: ರೈತರ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಲಭ್ಯವಿರುವ ಕಿಸಾನ್ ಕ್ರೆಡಿಟ್ ಕಾರ್ಡ್(Kisan Credit Card) ಸೇರಿದಂತೆ ಸಾಲ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಅಧಿಕಾರಿಗಳು ಸಲಹೆ ನೀಡಿದರು.

ರೈತರು ಸಂಬಂಧಿಸಿದ ಬ್ಯಾಂಕ್‌ಗಳನ್ನು ಸಂಪರ್ಕಿಸಿ ಕೆಸಿಸಿ ಹಾಗೂ ಬಡ್ಡಿ ಸಬ್ಸಿಡಿ ಸೇರಿದಂತೆ ತಮಗೆ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಬಳಿಕ ತಂಡವು ಮೈದೂರು ಗ್ರಾಮದ ರೈತ ಕೊಟ್ರೇಶ್ ಅವರ ಜಮೀನಿಗೆ ಭೇಟಿ ನೀಡಿ 2.5 ಎಕರೆ ಈರುಳ್ಳಿ ಹಾಗೂ 2 ಎಕರೆ ಸೂರ್ಯಕಾಂತಿ ಬೆಳೆಯನ್ನು ಪರಿಶೀಲಿಸಿತು. ಮಳೆ ಕೊರತೆಯಿಂದ ಬೆಳೆಗಳ ಮೇಲೆ ಉಂಟಾಗಿರುವ ಪರಿಣಾಮ, ಕೃಷಿ ವೆಚ್ಚ, ನಿರೀಕ್ಷಿತ ಇಳುವರಿ ಹಾಗೂ ಸಂಭವಿಸಿರುವ ನಷ್ಟದ ಕುರಿತು ರೈತರಿಂದ ಮಾಹಿತಿ ಪಡೆದುಕೊಳ್ಳಲಾಯಿತು.

ಮಾರ್ಗ ಮಧ್ಯೆ ಕಂಡುಬಂದ ಕೃಷಿ ಜಮೀನುಗಳಲ್ಲಿನ ಬೆಳೆಗಳ ಸ್ಥಿತಿಯನ್ನೂ ತಂಡ ಪರಿಶೀಲಿಸಿತು. ಶೃಂಗಾರ ತೋಟ ಗ್ರಾಮದಲ್ಲಿ ಮೆಕ್ಕೆಜೋಳ ಹಾಗೂ ಕಣವಿಹಳ್ಳಿ ಗ್ರಾಮದಲ್ಲಿ ರಾಗಿ ಬೆಳೆಯನ್ನು ವೀಕ್ಷಿಸಿ ರೈತರೊಂದಿಗೆ ಸಂವಾದ ನಡೆಸಿತು.

ಬಿತ್ತನೆ, ಮಳೆ ಪ್ರಮಾಣ, ಬೆಳೆ ಸ್ಥಿತಿ, ಕೃಷಿ ವೆಚ್ಚ ಹಾಗೂ ಬೆಳೆ ನಷ್ಟದ ಕುರಿತು ರೈತರಿಂದ ಮಾಹಿತಿ ಪಡೆದುಕೊಂಡಿತು. ರಸ್ತೆ ಬದಿಯಲ್ಲಿ ಒಕ್ಕಣೆ ಹಾಕುತ್ತಿದ್ದ ವೃದ್ಧೆಯೊಬ್ಬರೊಂದಿಗೂ ತಂಡ ಸಂವಾದ ನಡೆಸಿ ಕೃಷಿ ಹಾಗೂ ಬರ ಪರಿಸ್ಥಿತಿಗೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡಿದ್ದು ಗಮನ ಸೆಳೆಯಿತು.

ಈ ವೇಳೆ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಜಿಲ್ಲಾ ಪಂಚಾಯತ್ ಸಿಇಓ ಗರಿಮಾ ಪನ್ವಾರ್, ಅಪರ ಜಿಲ್ಲಾಧಿಕಾರಿ ಪಿ. ಎನ್. ಲೋಕೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಪ್ರಭುರಾಜ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ರೈತರು, ಕೂಲಿಕಾರ್ಮಿಕರು ಹಾಗೂ ಗ್ರಾಮಸ್ಥರಿಂದ ನೇರವಾಗಿ ಮಾಹಿತಿ ಸಂಗ್ರಹಿಸುವ ಮೂಲಕ ಕೇಂದ್ರ ಬರ ಅಧ್ಯಯನ ತಂಡವು ಮಳೆ ಕೊರತೆ ಯಿಂದ ಕೃಷಿ, ಕುಡಿಯುವ ನೀರು ಹಾಗೂ ಗ್ರಾಮೀಣ ಉದ್ಯೋಗದ ಮೇಲೆ ಉಂಟಾಗಿರುವ ಪರಿಣಾಮವನ್ನು ಸ್ಥಳದಲ್ಲಿಯೇ ಪರಿಶೀಲಿಸಿತು.

ಕೇಂದ್ರ ಬರ ಅಧ್ಯಯನ ತಂಡ ಸೋಮವಾರ ಹರಪನಹಳ್ಳಿ ತಾಲ್ಲೂಕಿನ ಮೈದೂರಿನಲ್ಲಿ ಹೊಲಗಳಿಗೆ ಭೇಟಿ ನೀಡಿ ನಷ್ಟದ ಅಂದಾಜು ಮಾಡುತ್ತ, ರೈತರಿಂದ ಮಾಹಿತಿ ಪಡೆಯು ತ್ತಿದ್ದಂತೆಯೇ ತುಂತುರು ಮಳೆ ಆರಂಭವಾಯಿತು.

ಬಳಿಕ ತಂಡ ಕಾರು ಹತ್ತಿ ಕೂಡ್ಲಿಗಿಯತ್ತ ಸಾಗುತ್ತಿದ್ದಂತೆ ಮಳೆ ಬಿರುಸುಗೊಂಡಿತು. ಆದರೆ ಸ್ವಲ್ಪ ಹೊತ್ತಲ್ಲೇ ಮಳೆ ಇಲ್ಲವಾಯಿತು.

ಮಳೆ ಸುರಿಯಬೇಕಾದ ಸಮಯದಲ್ಲಿ ಸುರಿಯದಿದ್ದರೆ ರೈತರಿಗೆ ಯಾವ ಪ್ರಯೋಜನವೂ ಇಲ್ಲ, ಜಿಲ್ಲೆಯಲ್ಲಿ ಮುಂಗಾರು ಆರಂಭದಲ್ಲಿ ಒಂದೆರಡು ಮಳೆ ಸುರಿದ ಕಾರಣ ರೈತರು ಬಿತ್ತನೆ ಮಾಡಿ ದ್ದರು, ಬಳಿಕ ಮಳೆ ಕೈಕೊಟ್ಟಿದ್ದರಿಂದಲೇ ಜಿಲ್ಲೆಯಲ್ಲಿ 2.71 ಲಕ್ಷ ಹೆಕ್ಟೇರ್ ನಷ್ಟು ಕೃಷಿ ಭೂಮಿ ಯಲ್ಲಿ ಈ ಬಾರಿ ಬೆಳೆ ನಾಶವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಂಡಕ್ಕೆ ಮಾಹಿತಿ ನೀಡಿದರು.