ಹಂಪಿಯಲ್ಲಿ ಜಾನಪದ ಕಲಾ ಸೊಬಗಿನೊಂದಿಗೆ ತಾಯಿ ಭುವನೇಶ್ವರಿ ದೇವಿ ಭವ್ಯ ಮೆರವಣಿಗೆ
Hampi Utsav 2026: ಹಂಪಿ ಉತ್ಸದ ಕೊನೆಯ ದಿನ ಭಾನುವಾರ ನಡೆದ ಜಾನಪದ ವಾಹಿನಿ ಮೆರವಣಿಗೆಯಲ್ಲಿ ಶಾಸಕ ಎಚ್.ಆರ್.ಗವಿಯಪ್ಪ ಹಾಗೂ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೇರಿದಂತೆ ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡು, ನಾಡದೇವಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು.
ಹಂಪಿಯಲ್ಲಿ ಮೆರವಣಿಗೆ. -
ಹಂಪಿ: ಹಂಪಿ ಉತ್ಸವದ (Hampi Utsav 2026) ಅಂತಿಮ ದಿನವಾದ ಭಾನುವಾರ ಸಂಜೆ ಉದ್ದಾನ ವೀರಭದ್ರೇಶ್ವರ ದೇವಸ್ಥಾದಿಂದ ವಿರೂಪಾಕ್ಷೇಶ್ವರ ದೇವಸ್ಥಾನದವರೆಗೆ ಜಾನಪದ ವಾಹಿನಿ ಮೆರವಣಿಗೆ ನಡೆಯಿತು. ಶಾಸಕ ಎಚ್.ಆರ್.ಗವಿಯಪ್ಪ ಹಾಗೂ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೇರಿದಂತೆ ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡು, ವಿರೂಪಾಕ್ಷೇಶ್ವರ ದೇವಾಲಯದ ಬಳಿ ನಾಡದೇವಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು.
ಜಾನಪದ ವಾಹಿನಿ ಕಲಾ ತಂಡಗಳ ಮೆರವಣಿಗೆ ನಾಡಿನ ಗ್ರಾಮೀಣ ಭಾಗದ ಸಾಂಸ್ಕೃತಿಕ ವೈವಿಧ್ಯತೆಗೆ ಸಾಕ್ಷಿಯಾಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಜಾನಪದ ಕಲಾತಂಡಗಳು ಮೆರವಣಿಯಲ್ಲಿ ಪಾಲ್ಗೊಂಡಿದ್ದವು. ಜಾನಪದ ಕಲಾ ಸೊಬಗಿನೊಂದಿಗೆ ತಾಯಿ ಭುವನೇಶ್ವರಿ ದೇವಿಯನ್ನು ಮೆರವಣಿಗೆ ಮಾಡಲಾಯಿತು.
ಹಲಗೆವಾದನ, ವೀರಗಾಸೆ, ಹಗಲುವೇಷ, ಸಿಂಧೋಳ್ ಕುಣಿತ, ನಂದಿಧ್ವಜ, ಕಹಳೆ ವಾದನ, ಹಕ್ಕಿಪಿಕ್ಕಿ ನೃತ್ಯ, ಕರಡಿ ಮೇಳ, ಪುರವಂತಿಕೆ, ಪೂಜಾ ಕುಣಿತ, ನಗಾರಿ, ಲಂಭಾಣಿ ವೃತ್ತ, ಕಂಸಾಳೆ, ಚಂಡೆವಾದ್ಯ, ಸೋಮನ ಕುಣಿತ, ಗೊರವರ ಕುಣಿತ, ಕಲಾತಂಡಗಳು ಮೆರವಣಿಯಲ್ಲಿ ಪಾಲ್ಗೊಂಡಿದ್ದವು.
ಈ ವೇಳೆ ಉಪವಿಭಾಗಾಧಿಕಾರಿ ವಿವೇಕ್, ತಹಸೀಲ್ದಾರ್ ಶೃತಿ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಇನ್ನುಮುಂದೆ ಪ್ರತಿ ವರ್ಷದ ನವೆಂಬರ್ 3, 4, 5 ರಂದು ಹಂಪಿ ಉತ್ಸವ
ರಾಜ್ಯ ಸರ್ಕಾರ ಹಂಪಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದೆ. ಮಾಜಿ ಸಚಿವರಾದ ದಿವಂಗತ ಎಂ ಪಿ ಪ್ರಕಾಶ್ ಅವರು ಹಿಂದೆ ಕನ್ನಡ ಮತ್ತು ಸಂಸ್ಕೃತಿಯ ಸಚಿವರಾಗಿದ್ದ ಸಂದರ್ಭದಲ್ಲಿ, ಮೈಸೂರು ದಸರಾ ಉತ್ಸವದ ವಿಜೃಂಭಣೆಯನ್ನು ಕಂಡು, ಇದೇ ರೀತಿಯ ಉತ್ಸವವನ್ನು ಹಂಪಿಯಲ್ಲಿಯೂ ನೆರವೇರಿಸಬೇಕೆಂದು ಆಶಿಸಿದ್ದರು. ಈ ರೀತಿಯ ಅದ್ಧೂರಿ ಹಂಪಿ ಉತ್ಸವದ ಆಚರಣೆಗೆ ಮೂಲಕಾರಣ ಎಂ.ಪಿ. ಪ್ರಕಾಶ್ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಅವರು ಇನ್ನುಮುಂದೆ ಪ್ರತಿ ವರ್ಷದ ನವೆಂಬರ್ 3, 4, 5 ರಂದು ಹಂಪಿ ಉತ್ಸವ ಆಯೋಜಿಸಲಾಗುತ್ತದೆ ಎಂದು ಘೋಷಿಸಿದ್ದರು.
ಫೆ.13ರಂದು ಹಂಪಿ ಉತ್ಸವ ಉದ್ಘಾಟಿಸಿ ಮಾತನಾಡಿದ್ದ ಅವರು, ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ನಾಡು ಸಂಪತ್ಭರಿತವಾಗಿತ್ತು. ನಮ್ಮ ಸರ್ಕಾರ ಕೂಡ ಸಾಹಿತ್ಯ, ಸಂಸ್ಕೃತಿ, ಕಲೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ವಿಜಯನಗರ ಕಾಲದಲ್ಲಿ ಸಂಪ್ಭರಿತವಾದ ಹಂಪಿಯ ಹಿರಿಮೆಯನ್ನು ಹಂಪಿ ಉತ್ಸವದಿಂದ ತಿಳಿಯಬಹುದಾಗಿದೆ. ವಿದೇಶಿ ಪ್ರವಾಸಿಗ ಅಬ್ದುಲ್ ರಜಾಕ್‌ರು ವಿಜಯನಗರ ಶ್ರೀಮಂತವಾದ ಸ್ಥಳವಾಗಿತ್ತು ಎಂದು ಉಲ್ಲೇಖಿಸಿದ್ದರು.
Hampi Utsav 2026: ಹಂಪಿ ಉತ್ಸವದಲ್ಲಿ ಗಾಳಿಪಟ ಉತ್ಸವಕ್ಕೆ ಶಾಸಕ ಎಚ್.ಆರ್. ಗವಿಯಪ್ಪ ಚಾಲನೆ
ಸರ್ಕಾರ ಆಚರಿಸುವ ಚಾಲುಕ್ಯ ಉತ್ಸವ, ಹಂಪಿ ಉತ್ಸವ, ಕಿತ್ತೂರು ಉತ್ಸವ, ಆನೆಗುಂದಿ ಉತ್ಸವ, ಬನವಾಸಿ ಉತ್ಸವ, ಮೈಸೂರು ದಸರಾ, ಕರಾವಳಿ ಉತ್ಸವಗಳ ಮೂಲಕ ನಾಡಿನ ಸಾಹಿತ್ಯ, ಕಲೆ, ಸಂಗೀತ ಪರಂಪರೆಗಳನ್ನು ಸಂರಕ್ಷಿಸುವ ದಿಸೆಯಲ್ಲಿ ಮುಖ್ಯವಾಗಿದೆ. ಮುಂದಿನ ಪೀಳಿಗೆಗೆ ಕನ್ನಡದ ಶ್ರೀಮಂತ ಪರಂಪರೆ ಕೊಂಡೊಯ್ಯವ ದಿಸೆಯಲ್ಲಿ ಸರ್ಕಾರ ಎಲ್ಲ ರೀತಿಯ ನೆರವು ನೀಡಲು ಬದ್ಧವಾಗಿದೆ ಎಂದು ಭರವಸೆ ನೀಡಿದ್ದರು.