ಹೊಸಪೇಟೆ: ಪೂಜ್ಯ ಮೊರಾರಿ ಬಾಪು ಅವರು ದೇಶಾದ್ಯಂತ ಕೈಗೊಂಡಿರುವ ಆಧ್ಯಾತ್ಮಿಕ ಮಹತ್ವದ ಭಾರತ ಸ್ವಸ್ತಿಕ ಯಾತ್ರೆ ಕರ್ನಾಟಕದ ಹಂಪಿಯನ್ನು ತಲುಪಿದೆ.
ರಾಮಾಯಣದ ಜೊತೆಗೆ ಅವಿನಾಭಾವ ಸಂಬಂಧ ಹೊಂದಿರುವ ಪುರಾತನ ಕಿಷ್ಕಿಂದೆಯ ಪರಿಸರಕ್ಕೆ ಈ ಯಾತ್ರೆಯು ಆಗಮಿಸಿರುವುದು ವಿಶೇಷ ಅನುಭೂತಿ ನೀಡಿದೆ. ಕನ್ಯಾಕುಮಾರಿ ಯಿಂದ ಕೇದಾರನಾಥಕ್ಕೆ ಸಾಗುತ್ತಿರುವ ಯಾತ್ರೆಯ ಮೊದಲ ಹಂತದಲ್ಲಿ ಹಂಪಿಯಲ್ಲಿ ತಂಗಿ ರಾಮಕಥೆಯನ್ನು ಸಾರಿದ್ದು ಅತ್ಯಂತ ಮಹತ್ವದ ಸಂಗತಿಯಾಗಿದೆ.
ತುಂಗಭದ್ರಾ ತಟದಲ್ಲಿ ಹರಡಿರುವ ಹಂಪಿ, ವಿಜಯನಗರ ಸಾಮ್ರಾಜ್ಯದ ಅವಶೇಷಗಳಿಂದ ಜಗತ್ಪ್ರಸಿದ್ಧವಾದ ಪಾರಂಪರಿಕ ತಾಣವೂ ಆಗಿದೆ, ಜೊತೆಗೆ ಈ ಸ್ಥಳವು ಸನಾತನ ಸಂಸ್ಕೃತಿ ಯನ್ನು ಎತ್ತಿ ಹಿಡಿದ ಅಪೂರ್ವ ನೆಲೆಯಾಗಿದೆ.
ಕಿಷ್ಕಿಂದೆ ಎಂದು ಪಾರಂಪರಿಕವಾಗಿ ಗುರುತಿಸಿಕೊಂಡಿರುವ ಈ ವಿಶಾಲ ಪ್ರದೇಶವು, ಶ್ರೀರಾಮನ ಅನುಯಾಯಿಗಳಾಗಿ ಸೀತಾನ್ವೇಷಣೆಯಲ್ಲಿ, ಸೇತು ಬಂಧದಲ್ಲಿ ಮತ್ತು ಲಂಕೆಯ ಯುದ್ಧದಲ್ಲಿ ಕೈಂಕರ್ಯ ಮಾಡಿದ ವಾನರ ಸಾಮ್ರಾಜ್ಯದ ಹೃದಯವಾಗಿದೆ. ಶ್ರೀರಾಮ, ಲಕ್ಷ್ಮಣ, ಹನೂಮಂತ, ಸುಗ್ರೀವ ಮತ್ತು ವಾಲಿ ಮುಂತಾದವರ ಬಾಂಧವ್ಯದ ಪ್ರತೀಕವಾಗಿದೆ.
ಇದನ್ನೂ ಓದಿ: Hospet News: ಭೂಮಿಯ ಮೇಲೆ ಬದುಕುವ ಹಕ್ಕು ಪ್ರತಿಯೊಂದು ಜೀವಿಗೂ ಸಮಾನವಾಗಿದೆ
ರಾಮಾಯಣದ ನಂಟು: ಭಕ್ತಜನರಿಗೆ, ರಾಮಾಯಣದ ಜೊತೆಗೆ ಹಲವು ವಿಧಗಳಲ್ಲಿ ಸಂಬಂಧವನ್ನು ಹೊಂದಿರುವ ಹಂಪಿ ಮತ್ತು ಸುತ್ತಲಿನ ಸ್ಥಳಗಳು ಅತ್ಯಂತ ಪವಿತ್ರವಾಗಿವೆ. ಅಂಜನಾದ್ರಿ ಪರ್ವತವು ಹನೂಮಂತನ ಜನ್ಮಸ್ಥಳವಾಗಿದ್ದರೆ, ಪಂಪಾ ಸರೋವರವು ಶಬರಿಯ ಅನನ್ಯ ಭಕ್ತಿಗೆ, ಮತ್ತು ಶ್ರೀರಾಮನು ದರ್ಶನ ನೀಡಿ, ಆಕೆಯನ್ನು ಪಾವನ ಗೊಳಿಸಿರುವುದಕ್ಕೆ ಸಾಕ್ಷಿಯಾಗಿದೆ.
ಋಷಿಮುಖ ಪರ್ವತವು ಸುಗ್ರೀವನ ನೆಲೆಯಾಗಿದ್ದು, ರಾಮನು ಹನೂಮಂತನ ಮೂಲಕ ಅವರನ್ನು ಸಂಧಿಸಿದ್ದು ಇಲ್ಲಿಯೇ. ರಾಮ – ಲಕ್ಷ್ಮಣರು ಸೀತಾನ್ವೇಷಣೆಯಲ್ಲಿ ತೊಡಗಿದ್ದಾಗ ಮಾಲ್ಯವಂತದಲ್ಲಿ ಮುಂಗಾರು ಅವಧಿಯನ್ನು ಕಳೆದರೆಂದು ಪ್ರತೀತಿ, ಇದು ಕೂಡ ರಾಮಾಯಣದ ವಿವರಣೆಯಲ್ಲಿ ಕಿಷ್ಕಿಂದೆಯನ್ನು ಸಂಪರ್ಕಿಸುವ ಮತ್ತೊಂದು ಕೊಂಡಿಯಾಗಿದೆ.
ಶ್ರೀರಾಮನ ಕಥೆಗಳನ್ನು ಪವಿತ್ರ ಸಂಪ್ರದಾಯಗಳು, ದೇವಾಲಯಗಳು ಮತ್ತು ಯಾತ್ರಾ ಸ್ಥಳಗಳ ಮೂಲಕ ಸಂರಕ್ಷಿಸಿರುವ, ಐತಿಹಾಸಿಕ ಮತ್ತು ಪೌರಾಣಿಕ ಸಂಗತಿಗಳು ಆಳವಾಗಿ ಬೇರೂರಿರುವ ಹಂಪಿಯಲ್ಲಿ ಮೊರಾರಿ ಬಾಪು ಅವರ ರಾಮಕಥೆಯ ಆಯೋಜನೆ ಯಾಗಿದ್ದು ರಾಮಚರಿತಮಾನಸದ ಸಾರ್ವಕಾಲಿಕ ನಿರೂಪಣೆಯನ್ನು ಜನರಿಗೆ ಪ್ರಸ್ತುತ ಪಡಿಸುತ್ತಿದೆ.
ದರ್ಶನ ದ್ವಾದಶಿ: “ಕರ್ನಾಟಕದ ಹಂಪಿಯಲ್ಲಿಂದು ಮೊರಾರಿ ಬಾಪು ಅವರು ಮಂಗಲ ದರ್ಶನದ ಹನ್ನೆರಡು ಪವಿತ್ರ ದರ್ಶನಗಳನ್ನು ವಿವರಿಸಿದರು. ಇವುಗಳನ್ನು ದರ್ಶನ ದ್ವಾದಶಿ ಎಂದೂ ಕರೆಯುತ್ತಾರೆ. ಇವುಗಳಲ್ಲಿ ಮೊದಲನೆಯದು ಮಾನಸ ದರ್ಶನ, ಮನಸ್ಸನ್ನು ಸ್ವಸ್ತಿಕಕ್ಕೆ ಹೋಲಿಸುತ್ತಾರೆಯ ಬಳಿಕ ಗೋ, ಯತಿ ದರ್ಶನ. ಯತಿಯ ಸ್ವಭಾವವೂ ಗೋವಿನಂತೆ ಸಾಧುವಾಗಿರುತ್ತದೆ, ಅವರು ಕೊಡುವ ಗುಣವನ್ನೇ ಹೊಂದಿರು ತ್ತಾರೆ, ಇದಾದ ಮೇಲೆ ನಮ್ಮ ದೇಶದ ದರ್ಶನ. ಬಾರತದ ಕಣ್ಣಿನಿಂದ ನಾವು ಜಗತ್ತನ್ನು ನೋಡಿದಾಗ, ಆ ನೋಟಕ್ಕೊಂದು ವಿಶೇಷ ಅರ್ಥ ಪ್ರಾಪ್ತವಾಗುತ್ತದೆ. ಈ ಪಯಣವು ಆಮೇಲೆ ಅಂತರಂಗದತ್ತ ಸಾಗುತ್ತದೆ, ಇದೇ ನಿಜದರ್ಶನವಾಗುತ್ತದೆ, ಇದನ್ನೇ ಆತ್ಮ ಸಾಕ್ಷಾತ್ಕಾರ ಎನ್ನುತ್ತಾರೆ. ಮುಂದೆ ದೇವ ದರ್ಶನ, ಬ್ರಹ್ಮ ದರ್ಶನ, ಪ್ರಕೃತಿ ದರ್ಶನ, ಪರಸ್ಪರ ಶುಭ ದರ್ಶನ, ತತ್ವ ದರ್ಶನ ಮತ್ತು, ಅಂತಿಮವಾಗಿ ಸಮಾಧಿ ದರ್ಶನ ಪ್ರಾಪ್ತವಾಗುತ್ತದೆ.
ಅರಿ ಷಡ್ವರ್ಗಗಳಿಂದ ಮುಕ್ತರಾದವರೇ ಪವಿತ್ರ ಸೇವಕರಾಗುತ್ತಾರೆ. ಈ ಎಲ್ಲ ಕಶ್ಮಲಗಳು ನಿವಾರಣೆಯಾದಾಗ, ಉಳಿದಿರುವ ಅವಕಾಶವು ಪವಿತ್ರವಾಗಿರುತ್ತದೆ— ಶುದ್ಧವಾಗುತ್ತದೆ. ಮಂಗಳಕರವಾದ ಪಯಣವು ಅಂತಿಮವಾಗಿ ಆತ್ಮ ಶುದ್ಧೀಕರಣದ ಕಡೆಗಿನ ಪಯಣವೂ ಆಗಿರುತ್ತದೆ. ಸತ್ಯಧಾಮದ ಜೊತೆಗೆ ನಿರಂತರವಾಗಿ ಅನುಸಂಧಾನ ಮಾಡುವ ವ್ಯಕ್ತಿಯೇ ಸರ್ವಜ್ಞನಾಗುತ್ತಾನೆ— ಸಕಲ ಜ್ಞಾನ ಹಾಗೂ ಬುದ್ಧಿಯು ಅವನಿಗೆ ಪ್ರಾಪ್ತವಾಗುತ್ತದೆ. ಸ್ವಸ್ತಿಕದ ಹನ್ನೆರಡು ಮಂಗಳಕರ ದರ್ಶನಗಳು ನಮ್ಮಲ್ಲಿ ಪಾವಿತ್ರ್ಯ, ಸಾಮರಸ್ಯ ಮತ್ತು ವಿಶ್ವ ಕಲ್ಯಾಣದ ಭಾವನೆಯನ್ನು ಜಾಗೃತಗೊಳಿಸಲಿ. ಇದು ಸ್ವಸ್ತಿಕದ ಆಂತರ್ಯದಲ್ಲಿ ಹುದುಗಿರುವ ಮಂಗಲವೂ ನಮ್ಮ ಭಾರತ ಸ್ವಸ್ತಿಕ ಯಾತ್ರೆಯ ಸಾರವೂ ಆಗಿದೆ” ಎಂಬ ಸಂದೇಶವನ್ನು ಮೊರಾರಿ ಬಾಪು ಅವರು ಸಾರಿದರು.
ಐತಿಹಾಸಿಕ, ಪೌರಾಣಿಕ ಕೊಂಡಿ: ಹಂಪಿಯು ಭಾರತದ ನಾಗರಿಕತೆಯ ಇತಿಹಾಸದಲ್ಲಿ ಒಂದು ಪ್ರಮುಖ ಅಧ್ಯಾಯವಾಗಿದೆ. ಈ ನಗರವು ವಿಜಯ ನಗರ ಸಾಮ್ರಾಜ್ಯದ ರಾಜಧಾನಿ ಯಾಗಿತ್ತು. ದೇವಸ್ಥಾನಗಳ ಸಂಸ್ಕೃತಿ, ಸಾಹಿತ್ಯ, ತತ್ವಶಾಸ್ತ್ರ, ಕಲೆ ಮತ್ತು ವಾಣಿಜ್ಯ ಕೇಂದ್ರವೂ ಆಗಿತ್ತು. ಇಲ್ಲಿನ ವಿರೂಪಾಕ್ಷ ದೇವಸ್ಥಾನವು ಶಿವನ ಪವಿತ್ರ ಸನ್ನಿಧಾನವಾಗಿದೆ, ಸಾಂಪ್ರದಾಯಿಕವಾಗಿ ಪಂಪಾ ಮಾತೆಯ ಜೊತೆಗೆ ಸಂಬಂಧವನ್ನು ಹೊಂದಿದೆ, ಮತ್ತು ಇಂದಿಗೂ ದೇವಾರಾಧನೆಯ ಸಕ್ರಿಯ ಕೇಂದ್ರವಾಗಿ ಉಳಿದಿದೆ, ಈ ಮೂಲಕ ಹಂಪಿಯ ಪವಿತ್ರ ಹೆಗ್ಗುರುತನ್ನು ಪ್ರತಿಬಿಂಬಿಸುತ್ತಿದೆ. ವಿಜಯನಗರದ ದೇವಾಲಯಗಳು ಮತ್ತು ಇತರ ನಿರ್ಮಾಣಗಳು 1986 ರಲ್ಲಿ ಮಾಡಿರುವ ಘೋಷಣೆಯಂತೆ ಯುನೆಸ್ಕೋ (UNESCO) ವಿಶ್ವ ಪಾರಂಪರಿಕ ತಾಣವಾಗಿ ಜಗತ್ಪ್ರಸಿದ್ಧವಾಗಿವೆ.
ಹಂಪಿಯಲ್ಲಿ ಭಾರತ ಸ್ವಸ್ತಿಕ ಯಾತ್ರೆಯು ತಂಗಿರುವುದು ಭಾರತದ ಪರಂಪರೆಯ ಎರಡು ಆಯಾಮಗಳನ್ನು ಒಗ್ಗೂಡಿಸುತ್ತಿದೆ— ರಾಮಾಯಣಕ್ಕೆ ಸಂಬಂಧಿಸಿ ಇಂದಿಗೂ ಜೀವಂತ ವಾಗಿರುವ ಆಧ್ಯಾತ್ಮಿಕ ಸಂಪ್ರದಾಯಗಳು ಮತ್ತು ದಕ್ಷಿಣ ಭಾರತದ ಶ್ರೇಷ್ಠ ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾಗಿ ಹಂಪಿಯನ್ನು ಕಟ್ಟಿ ಬೆಳೆಸಿದ ಐತಿಹಾಸಿಕ ಪರಂಪರೆ.
ಭಾರತ ಸ್ವಸ್ತಿಕ ಯಾತ್ರೆಯನ್ನು ಪೂಜ್ಯ ಮೊರಾರಿ ಬಾಪು ಅವರ ಮಾರ್ಗದರ್ಶನದಲ್ಲಿ ಸಂತಕೃಪಾ ಸನಾತನ ಸಂಸ್ಥಾನವು ಆಯೋಜಿಸುತ್ತಿದ್ದು, ಭಕ್ತರನ್ನು ಮತ್ತು ವಿವಿಧ ಕ್ಷೇತ್ರಗಳ ಜನರನ್ನು ಒಗ್ಗೂಡಿಸುತ್ತಿದೆ.
ಮಿರಜ್ ಗ್ರೂಪ್ನ ಅಧ್ಯಕ್ಷರು ಮತ್ತು ಸಂತಕೃಪಾ ಸನಾತನ ಸಂಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಆಗಿರುವ ಮದನ್ ಪಲಿವಾಲ್ ಮಾತನಾಡಿ, “ನಮ್ಮ ನಾಗರಿಕತೆಯ ಪರಂಪರೆಯು ಸ್ಮಾರಕಗಳು ಅಥವಾ ಇತಿಹಾಸದ ಪುಸ್ತಕಗಳಿಗೆ ಸೀಮಿತವಾಗಿಲ್ಲ ಎಂಬುದನ್ನು ಹಂಪಿ ನಮಗೆ ಜ್ಞಾಪಿಸುತ್ತದೆ. ಕಥೆಗಳು, ಸಂಪ್ರದಾಯಗಳು ಮತ್ತು ರಾಮ, ಹನೂಮಂತ ಮತ್ತು ಕಿಷ್ಕಿಂದೆಯ ಜೊತೆಗೆ ಸಂಬಂಧ ಹೊಂದಿರುವ ನಂಬಿಕೆಗಳ ಮೂಲಕ ಈ ಪವಿತ್ರ ಭೂಮಿಯು ಜೀವಂತಿಕೆಯನ್ನು ಉಳಿಸಿಕೊಂಡಿದೆ.
ಇಲ್ಲಿಗೆ ಭಾರತ ಸ್ವಸ್ತಿಕ ಯಾತ್ರೆಯು ಆಗಮಿಸಿರುವುದು, ಮತ್ತು ಇಲ್ಲಿ ಬಾಪು ಅವರಿಂದ ರಾಮ ಕಥೆಯನ್ನು ಆಲಿಸುವುದು, ಈ ಜೀವಂತ ಪರಂಪರೆಯೊಂದಿಗೆ ಸಂಪರ್ಕ ಸಾಧಿಸಿ, ಅದರ ಮೌಲ್ಯಗಳನ್ನು ಮುಂದಿನ ತಲೆಮಾರುಗಳಿಗೆ ತಲುಪಿಸುವ ಮಹತ್ಕಾರ್ಯವನ್ನು ಸಾಧಿಸಿದೆ” ಎಂದು ನುಡಿದರು.
ದೇಶದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಬೆಸೆಯುವ ಭಾರತ ಸ್ವಸ್ತಿಕ ಯಾತ್ರೆಯ ಪ್ರಯತ್ನದಲ್ಲಿ ಹಂಪಿಯು ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಸ್ವಸ್ತಿಕ ಮತ್ತು ಅದರೊಂದಿಗೆ ಸಂಬಂಧ ಹೊಂದಿರುವ ಸ್ವಸ್ತಿ — ಯೋಗಕ್ಷೇಮ, ಕಲ್ಯಾಣ ಮತ್ತು ಶುಭ ಸಂಗತಿಗಳಿಂದ ಪ್ರೇರಿತವಾದ ಈ ಯಾತ್ರೆಯು ವಿವಿಧ ಪ್ರದೇಶಗಳು ಮತ್ತು ವಿವಿಧ ವರ್ಗಗಳ ಜನರನ್ನು ಒಂದೆಡೆ ಸೇರಿಸುವ ಮೂಲಕ, ಭಾರತದೆಲ್ಲೆಡೆ ಒಂದು ಆಧ್ಯಾತ್ಮಿಕ ಪ್ರಯಾಣವನ್ನು ಅನ್ವೇಷಿಸಲು ಪ್ರಯತ್ನಿಸುತ್ತದೆ.
ಯಾತ್ರೆಯು ನಾಗರಿಕತೆಯ ವಿಶಾಲ ಭೌಗೋಳಿಕ ಪ್ರದೇಶಗಳ ಮೂಲಕ ಸಂಚರಿಸುತ್ತಿದೆ. ಅದರ ಮೊದಲ ಹಂತವು ಅಕ್ಟೋಬರ್ 10ರಂದು ಕನ್ಯಾಕುಮಾರಿಯಲ್ಲಿ ಆರಂಭವಾಗಿದ್ದು, ಅಕ್ಟೋಬರ್ 23ರಂದು ಕೇದಾರನಾಥದಲ್ಲಿ ಸಂಪನ್ನಗೊಳ್ಳಲಿದೆ, ಈ ಮಾರ್ಗದಲ್ಲಿ ಯಾತ್ರೆ ಯು ದಕ್ಷಿಣ, ಮಧ್ಯ ಮತ್ತು ಉತ್ತರ ಭಾರತದ ಹಲವು ಪ್ರಮುಖ ಆಧ್ಯಾತ್ಮಿಕ - ಸಾಂಸ್ಕೃತಿಕ ಕೇಂದ್ರಗಳನ್ನು ಸಂದರ್ಶಿಸಲಿದೆ. ಈ ಪಯಣವು ವಿಭಿನ್ನ ಸಂಪ್ರದಾಯಗಳನ್ನು ಭಾರತದ ಸಮಗ್ರ ವ್ಯಾಖ್ಯಾನದಲ್ಲಿ ಸಂಗಮಗೊಳಿಸಲಿದೆ. ಯಾತ್ರೆಯ ಎರಡನೇ ಹಂತವು ದ್ವಾರಕೆಯಿಂದ ನವೆಂಬರ್ 14ರಂದು ಆರಂಭವಾಗಿ, ಜಗನ್ನಾಥನ ಸನ್ನಿಧಿ ಪುರಿಯಲ್ಲಿ ನವೆಂಬರ್ 22ರಂದು ಸಮಾಪನಗೊಳ್ಳಲಿದೆ.
ಎರಡು ವಿಶೇಷ ರೈಲುಗಳು, 900 ಭಕ್ತರು
ಸುಮಾರು 9000 ಕಿಮೀ ದೂರವನ್ನು ಕ್ರಮಿಸುವ ಈ ಭಾರತ ಸ್ವಸ್ತಿಕ ಯಾತ್ರೆಯಲ್ಲಿ ಪೂಜ್ಯ ಮೊರಾರಿ ಬಾಪು ಅವರೊಂದಿಗೆ ಎರಡು ವಿಶೇಷ ರೈಲುಗಳಲ್ಲಿ ಸುಮಾರು 900 ಭಕ್ತರು ಸಾಗುತ್ತಿದ್ದಾರೆ— ಕೈಲಾಶ್ ಭಾರತ್ ಗೌರವ್ ರೈಲು ಮತ್ತು ಚಿತ್ರಕೂಟ ಭಾರತ್ ಗೌರವ್ ರೈಲುಗಳಲ್ಲಿ ಕ್ರಮವಾಗಿ 22 ಮತ್ತು 16 ಬೋಗಿಗಳಿವೆ. ಭಾರತ ಸ್ವಸ್ತಿಕ ಯಾತ್ರೆಯು ಆಧ್ಯಾ ತ್ಮಿಕ ಮುಖಂಡರು, ಆಚಾರ್ಯರು, ವಿದ್ವಾಂಸರು, ಉದ್ಯಮಿಗಳು, ಸಮಾಜದ ಮುಖಂಡರು ಮತ್ತು ಸಮುದಾಯದ ಪ್ರತಿನಿಧಿಗಳು ಸೇರಿದಂತೆ ಸಮಾಜದ ವಿವಿಧ ರಂಗಗಳ ಜನರನ್ನು ಒಗ್ಗೂಡಿಸುತ್ತಿದೆ.
‘ಭಂಡಾರ’ದ ಆಯೋಜನೆ
ಸತ್ಯ, ಪ್ರೇಮ ಮತ್ತು ಕರುಣೆ (Truth, Love and Compassion) ಸಂದೇಶವನ್ನು ರಾಮ ಕಥಾಗಳ ಮೂಲಕ ನಿರಂತರವಾಗಿ ಸಾರುತ್ತಿರುವ ಮೊರಾರಿ ಬಾಪು ಅವರಿಗೆ ಈ ಯಾತ್ರೆ ಯು ಈ ಮೌಲ್ಯಗಳನ್ನು ಭಾರತದ ಉದ್ದಗಲಕ್ಕೂ ವಿಸ್ತರಿಸುವ ಮಾರ್ಗವಾಗಿದೆ. ಯಾತ್ರೆಯ ಸಂದರ್ಭದಲ್ಲಿ ನಡೆಯುವ ರಾಮ ಕಥಾ ಮತ್ತು ಇತರ ಕಾರ್ಯಕ್ರಮಗಳು ಎಲ್ಲರಿಗೂ ಮುಕ್ತವಾಗಿವೆ, ತಂಗುವ ಪ್ರತಿಯೊಂದು ಸ್ಥಳದಲ್ಲಿಯೂ ಪ್ರಸಾದ ರೂಪದಲ್ಲಿ ‘ಭಂಡಾರ’ದ (ಸಸ್ಯಾಹಾರಿ ಸಾಮೂಹಿಕ ಭೋಜನ) ವ್ಯವಸ್ಥೆ ಮಾಡಲಾಗುವುದು.