ಹೊಸಪೇಟೆ: ರಾಜ್ಯದಲ್ಲಿ ಬರ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಸಂಕಷ್ಟದಲ್ಲಿರುವ ರೈತರ ನೆರವಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಮಂತ್ರಿ ಡಾ.ಜಿ.ಪರಮೇಶ್ವರ್(Dr G Parameshwar) ತಿಳಿಸಿದರು. ಹೊಸಪೇಟೆ ತಾಲೂಕಿನ ಪೋತಲಕಟ್ಟೆ ಗ್ರಾಮದಲ್ಲಿ ಮಳೆಯಿಲ್ಲದೆ ಒಣಗುತ್ತಿರುವ ಮೆಕ್ಕೆಜೋಳ ಬೆಳೆ ಹಾನಿಯನ್ನು ವೀಕ್ಷಿಸಿ, ರೈತರೊಂದಿಗೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ ಒಟ್ಟು ತಾಲೂಕುಗಳ ಪೈಕಿ ಈಗಾಗಲೇ 217 ತಾಲೂಕುಗಳನ್ನು ಬರಪೀಡಿತ(Drought Effected) ಎಂದು ಘೋಷಿಸಲಾಗಿದೆ. ಉಳಿದ 23 ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್(Ground Truthing) ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲೇ ಇನ್ನೂ 10 ರಿಂದ 15 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸುವ ಸಾಧ್ಯತೆಯಿದೆ.
ಬರದಿಂದ ಕಂಗಾಲಾಗಿರುವ ರೈತರ ನೆರವಿಗೆ ಧಾವಿಸಿರುವ ಸರ್ಕಾರ, ಮೊದಲ ಕಂತಿನ ಪರಿಹಾರ ವಾಗಿ 1,250 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ನಿಗದಿತ ಮಾನದಂಡಗಳ ಪ್ರಕಾರ ಪ್ರತಿ ಯೊಬ್ಬ ರೈತನಿಗೆ ಮೊದಲ ಕಂತಾಗಿ 2,500 ಪರಿಹಾರ ಮೊತ್ತವು ಮುಂದಿನ 2-3 ದಿನಗಳಲ್ಲಿ ನೇರವಾಗಿ ಖಾತೆಗೆ ತಲುಪಲಿದೆ.
ಇದನ್ನೂ ಓದಿ: Dr G Parameshwar: ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ಅನುದಾನ ನೀಡಲು ಮನವಿ
ಕುಡಿಯುವ ನೀರು ಮತ್ತು ಮೇವು ನಿರ್ವಹಣೆ: ರಾಜ್ಯದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದಂತೆ 306 ಕೋಟಿ ವೆಚ್ಚ ಮಾಡಲಾಗಿದೆ. ಡಿಸಿಗಳ ಪಿಡಿ ಖಾತೆಯಲ್ಲಿ 329 ಕೋಟಿ ಹಣವನ್ನು ಕಾಯ್ದಿರಿಸಲಾಗಿದ್ದು, ಜಾನುವಾರುಗಳ ಮೇವಿನ ನಿರ್ವಹಣೆಗೆ 25 ಕೋಟಿ ಬಿಡುಗಡೆ ಮಾಡಲಾಗಿದೆ. ಅಗತ್ಯವಿರುವ ಕಡೆ ಗೋಶಾಲೆ ಹಾಗೂ ಮೇವು ಬ್ಯಾಂಕ್ ತೆರೆಯಲು ಜಿಲ್ಲಾಧಿಕಾರಿ ಗಳಿಗೆ ಪೂರ್ಣ ಅಧಿಕಾರ ನೀಡಲಾಗಿದೆ.
ಕೇಂದ್ರದಿಂದ 11 ಸಾವಿರ ಕೋಟಿ ಪರಿಹಾರಕ್ಕೆ ಮನವಿ: ರಾಜ್ಯದಲ್ಲಿ 50 ಸಾವಿರದಿಂದ 60 ಸಾವಿರ ಕೋಟಿಯಷ್ಟು ಬೆಳೆ ಹಾಗೂ ಆಸ್ತಿ ನಷ್ಟ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಎನ್‌ಡಿಆರ್‌ಎಫ್(NDRF) ನಿಯಮಾವಳಿಗಳ ಅನ್ವಯ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಸುಮಾರು 10 ಸಾವಿರದಿಂದ 11 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಕೋರಲಾಗಿದೆ. ಕೇಂದ್ರ ಅಧ್ಯಯನ ತಂಡಗಳು ರಾಜ್ಯದ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶೀಘ್ರದಲ್ಲೇ ವರದಿ ಸಲ್ಲಿಸಲಿವೆ.
ಸರ್ವಪಕ್ಷ ನಿಯೋಗ: ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರ್ವಪಕ್ಷ ನಿಯೋಗದೊಂದಿಗೆ ದೆಹಲಿಗೆ ತೆರಳಿ ಪ್ರಧಾನಮಂತ್ರಿಗಳು, ಕೇಂದ್ರ ಗೃಹ ಸಚಿವರು ಹಾಗೂ ಕೃಷಿ ಸಚಿವರನ್ನು ಖುದ್ದು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿಯ ಮನವರಿಕೆ ಮಾಡಲಾಗುವುದು. ಈ ನಿಯೋಗಕ್ಕೆ ವಿರೋಧ ಪಕ್ಷದ ನಾಯಕರನ್ನೂ ಆಹ್ವಾನಿಸಲಾಗುವುದು.
ಗ್ಯಾರಂಟಿ ಯೋಜನೆಗಳು ಮುಂದುವರಿಕೆ: ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರ ಬದ್ಧವಾಗಿದ್ದು, ಯಾವುದೇ ಕಾರಣಕ್ಕೂ ಇವುಗಳನ್ನು ನಿಲ್ಲಿಸುವುದಿಲ್ಲ. ಮೈಸೂರು ದಸರಾ(Mysore Dasara), ತುಮಕೂರು ದಸರಾ(Tumkur Dasara)ದಂತೆಯೇ ಐತಿಹಾಸಿಕ ಹಂಪಿ ಉತ್ಸವ(Hampi Utsava)ವನ್ನೂ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ(K S Basavantappa), ಶಾಸಕ ಡಾ.ಎನ್.ಟಿ. ಶ್ರೀನಿವಾಸ್(MLA Dr N T Srinivas), ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿ.ಪಂ. ಸಿಇಓ ಗರಿಮಾ ಪನ್ವಾರ್, ಎಸ್.ಪಿ. ಜಾಹ್ನವಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.