ಹೊಸಪೇಟೆ: ಜಿಲ್ಲೆಯ ಹೊಸಪೇಟೆ ನಗರದ ಸಮಾಜ ಸೇವಕ ಎಂ. ಧರ್ಮನಗೌಡ ಅವರು ಕರುನಾಡ ಬುಕ್ ಆಫ್ ರೆಕಾರ್ಡ್ಸ್" ವಿಶ್ವದಾಖಲೆ ಗೌರವ ಪಾತ್ರವಾಗಿದ್ದಾರೆ.
ಸುಮಾರು ಎರಡು ದಶಕಗಳಿಂದ ಆರೋಗ್ಯ ಇಲಾಖೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ, ಕುಷ್ಠರೋಗ ನಿವಾರಣೆ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಉನ್ನತ ಸೇವೆ ಮಾಡುತ್ತಾ ಬಂದಿದ್ದಾರೆ.
ಜನ ಸೇವೆಯೇ ಜನಾರ್ದನ ಸೇವೆ ಎಂಬ ಧೈಯದೊಂದಿಗೆ 2004ರಲ್ಲಿ ಕಿರಿಯ ಆರೋಗ್ಯ ಸಹಾಯಕ ರಾಗಿ ಸೇವೆ ಆರಂಭಿಸಿದ ಧರ್ಮನಗೌಡ ಅವರು, ಪ್ರಸ್ತುತ ವಿಜಯನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕುಷ್ಠರೋಗಿಗಳಿಗೆ ಚಿಕಿತ್ಸೆ ನೀಡುವುದರ ಜೊತೆಗೆ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕೃಷಿ ಹಾಗೂ ತರಕಾರಿ ಬೆಳೆಯಲು ಪ್ರೋತ್ಸಾಹ ನೀಡಿದ್ದಾರೆ.
ಇದನ್ನೂ ಓದಿ: Hospet News: ವಿಶೇಷ ಚೇತನರೊಂದಿಗೆ ಯುವ ಮುಖಂಡ ಹಫೀಜ್ ಶೇಖ್ ರವರ ಹುಟ್ಟುಹಬ್ಬ ಆಚರಣೆ
ರೋಗಮುಕ್ತರಾದ 45ಕ್ಕೂ ಹೆಚ್ಚು ಜನರಿಗೆ ಮನೆ ಹಾಗೂ ಸರ್ಕಾರಿ ಪಿಂಚಣಿ ಸೌಲಭ್ಯವನ್ನು ಒದಗಿಸಿಕೊಟ್ಟಿದ್ದಾರೆ. ಕೋವಿಡ್ ಸಮಯದಲ್ಲಿ ಮನೆ-ಮನೆಗೆ ಹೋಗಿ ಜನರ ತಪಾಸಣೆ ನಡೆಸಿ, ಸ್ವಂತ ಖರ್ಚಿನಲ್ಲಿ ರೋಗಿಗಳಿಗೆ ಆಹಾರ ಧಾನ್ಯ ಹಾಗೂ ಅತ್ಯಗತ್ಯ ವಸ್ತುಗಳನ್ನು ಒದಗಿಸಿದ್ದಾರೆ. ಅಲ್ಲದೆ ಪೋಲಿಯೋ, ಕ್ಷಯ, ಎಚ್.ಐ.ವಿ. ಹಾಗೂ ತಾಯಿ-ಮಕ್ಕಳ ಆರೋಗ್ಯ ರಕ್ಷಣಾ ಕಾರ್ಯ ಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸೇವೆ ಸಲ್ಲಿಸಿದ್ದಾರೆ.
ಅವರ ಗಣನೀಯ ಸಮಾಜ ಸೇವೆಗೆ ರಂಗಭೂಮಿ ಯೋಧ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ವೈದ್ಯಸೇವಾ ರತ್ನ ಪ್ರಶಸ್ತಿ ಮತ್ತು ಗೌರವ ಡಾಕ್ಟರೇಟ್ ದೊರಕಿದ್ದು ಹಲವು ಸಂಘಟನೆಗಳಿಂದ ಜಿಲ್ಲಾ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳು ಲಭಿಸಿವೆ.
ಎಂ. ಧರ್ಮನಗೌಡ ಅವರ ಈ ಅತ್ಯಂತ ಗಣನೀಯ ಸೇವೆಗೆ “ಕರುನಾಡ ಬುಕ್ ಆಫ್ ರೆಕಾರ್ಡ್ಸ್" ವಿಶ್ವದಾಖಲೆ ಗೌರವ ಪಾತ್ರವಾಗಿದೆ. ಇವರ ಸೇವೆಗೆ ಸ್ನೇಹಿತರು, ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಎಂದು ವಿದ್ಯಾರ್ಥಿ ಘಟಕದ ಕರ್ನಾಟಕ ರಾಜ್ಯ ಅಧ್ಯಕ್ಷ ಕುಮಾರ್ ಸಾಗರ್ ಆರ್. ಕಲಾದಗಿ ತಿಳಿಸಿದ್ದಾರೆ.