ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್‌ನಲ್ಲಿ ಭಾರಿ ದರೋಡೆ (Bank Robbery) ನಡೆದಿದ್ದು, 58 ಕೆಜಿ 975 ಗ್ರಾಂ ಚಿನ್ನಾಭರಣ, 5.20 ಲಕ್ಷ ನಗದು ಕಳವಾಗಿದೆ. ಮೇ 25 ರಂದು ಬ್ಯಾಂಕ್‌ನಲ್ಲಿ ಅಂದಾಜು 53 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. 6 ರಿಂದ 8 ಕಳ್ಳರು ಕೃತ್ಯ ಎಸಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಇನ್ನೂ ಖದೀಮರ ಸುಳಿವು ಪತ್ತೆಯಾಗಿಲ್ಲ.
ಎರಡು ದಿನಗಳ ಕಾಲ ಹೊಂಚು ಹಾಕಿ ಕಳ್ಳತನ ಮಾಡಲಾಗಿದ್ದು, ಕಳ್ಳರು ಪಕ್ಕಾ ಮಾಸ್ಟರ್ ಪ್ಲ್ಯಾನ್ ಮಾಡಿಯೇ ಕೈಚಳಕ ತೋರಿದ್ದಾರೆ. ಲಾಕರ್ ತೆಗೆಯಲು ನಕಲಿ ಕೀ ಬಳಕೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಪ್ರವೇಶ ದ್ವಾರದ ಬೀಗ ಒಡೆದು ಬ್ಯಾಂಕ್ ಒಳಗೆ ನುಗ್ಗಿ, ಸೈರನ್ ಆಫ್ ಮಾಡಿ ಚಿನ್ನಾಭರಣ ಇಟ್ಟಿದ್ದ ಒಂದು ಲಾಕರ್ ಮಾತ್ರ ಓಪನ್ ಮಾಡಿ ಕದಿಯಲಾಗಿದೆ. ಮತ್ತೊಂದು ಲಾಕರ್‌ನಲ್ಲಿದ್ದ ಚಿನ್ನಾಭರಣಕ್ಕೆ ದುರುಳರು ಕೈ ಹಾಕಿಲ್ಲ.
ಕಳ್ಳತನದ ವೇಳೆ ಕಿಟಕಿ ಸರಳು ಮುರಿದಿದ್ದು, ಕಪ್ಪು ಬಣ್ಣದ ಬೊಂಬೆಗೆ ಪೂಜೆ ಮಾಡಿದ್ದಾರೆ. ತನಿಖೆ ದಾರಿ ತಪ್ಪಿಸಲು ವಾಮಾಚಾರ ಮಾಡಿದ್ದಾರೆಂದು ಬಿಂಬಿಸಲು ಕಳ್ಳರು ಈ ಪ್ಲ್ಯಾನ್ ಮಾಡಿದ್ದಾರೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಪ್ರತಿಕ್ರಿಯಿಸಿ, ಮೇ 25ರಂದು ಬ್ಯಾಂಕ್‌ನಲ್ಲಿ ಕಳ್ಳತನ ಆಗಿದೆ ಎಂದು ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಕಲ್ಮೇಶ ಪೂಜಾರಿ ದೂರು ನೀಡಿದ್ದಾರೆ. ಹೀಗಾಗಿ ಕಳ್ಳರ ಪತ್ತೆಗೆ 8 ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಪ್ರಕರಣದ ತನಿಖಾ ದೃಷ್ಟಿಯಿಂದ ಹೆಚ್ಚಿನ ಮಾಹಿತಿ ನೀಡಲ್ಲ ಎಂದು ತಿಳಿಸಿದ್ದಾರೆ.