ವಿಜಯಪುರ: ಜಮೀನು ವಿಚಾರಕ್ಕೆ 6 ಮಂದಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚಡಚಣದ ಗೋವಿಂದಪುರದಲ್ಲಿ ನಡೆದಿದೆ. ಗೊಳಗಿ ಮತ್ತು ನಿರಾಳೆ ಕುಟುಂಬಗಳ ನಡುವಿನ ಜಮೀನು ವಿವಾದಕ್ಕೆ ಆರು ಮಂದಿ ಬಲಿಯಾಗಿದ್ದು, ಗುಂಡಿಕ್ಕಿ, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಚಂದು ನಿರಾಳೆ(56), ದುಂಡಪ್ಪ ನಿರಾಳೆ(65), ಶಿವಪುತ್ರ ನಿರಾಳೆ(60), ರಾಹುಲ್ ನಿರಾಳೆ(35), ಸಮರ್ಥ ನಿರಾಳೆ(24), ಶಬ್ಬಿರ್ ನದಾಫ್ (50) ಕೊಲೆಯಾದವರು ಎಂದು ತಿಳಿದು ಬಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಹೊಲದಲ್ಲಿ ಕೆಲಸ ಮಾಡುತ್ತಿದ್ದ ನಿರಾಳೆ ಕುಟುಂಬದವರ ಮೇಲೆ ದುಷ್ಕರ್ಮಿಗಳ ಗುಂಪು ಏಕಾಏಕಿ ದಾಳಿ ನಡೆಸಿ, ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಬರ್ಬರವಾಗಿ ಕೊಲೆ ಮಾಡಿದೆ.
ಚಡಚಣ ಪಟ್ಟಣದ ನಿರಾಳೆ ಕುಟುಂಬದವರು ಗೋವಿಂದಪುರ ಗ್ರಾಮದ ವ್ಯಕ್ತಿಯೊಬ್ಬರಿಗೆ ಸೇರಿದ 24 ಎಕರೆ ವಿವಾದಿತ ಜಮೀನನ್ನು ಆರು ತಿಂಗಳ ಹಿಂದೆ ಖರೀದಿ ಮಾಡಲು ಮುಂದಾಗಿತ್ತು. ಈ ವೇಳೆ ಗ್ರಾಮಸ್ಥರು ವಿವಾದಿತ ಜಮೀನು ಖರೀದಿಸದಂತೆ ಎಚ್ಚರಿಕೆ ನೀಡಿದ್ದರು ಎಂದು ತಿಳಿದು ಬಂದಿದೆ. ವಿರೋಧದ ನಡುವೆಯೂ ನಿರಾಳೆ ಕುಟುಂಬದವರು ಜಮೀನು ಖರೀದಿ ಮಾಡಿದ್ದರು. ಅಲ್ಲದೇ, ಇದೀಗ ಟ್ರ್ಯಾಕ್ಟರ್, ಜೆಸಿಬಿ ಮೂಲಕ ಹೊಲವನ್ನು ಸ್ವಚ್ಛಗೊಳಿಸಿ, ಕೃಷಿಗೆ ಸಜ್ಜುಗೊಳಿಸುತ್ತಿದ್ದ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿ, ಆರು ಮಂದಿಯ ಕೊಲೆ ಮಾಡಿದ್ದಾರೆ. ಶವಗಳನ್ನು ಚಡಚಣ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ.
ಕೊಲೆಗಾರರು ಯಾರು ಎಂಬ ಮಾಹಿತಿ ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ತನಿಖೆ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ಗೋವಿಂದಪುರದ ಬಿಜೆಪಿ ಮುಖಂಡ ಅಪ್ಪುಗೌಡ ಪಾಟೀಲ (ಗೊಳಗಿ) ಮತ್ತು ಆತನ ಸಹಚರರು ಕೊಲೆ ಮಾಡಿಸಿದ್ದಾರೆ ಎಂದು ನಿರಾಳೆ ಕುಟುಂಬದವರು ಆರೋಪಿಸಿದ್ದಾರೆ.