ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನನ್ನ ರಾಜಕೀಯ ಜೀವನದಲ್ಲಿ ಇಂಥ ಕೆಟ್ಟ ಆಡಳಿತ ನೋಡಿಲ್ಲ: ರಾಜ್ಯ ಸರ್ಕಾರದ ವಿರುದ್ಧ ಎಚ್‌.ಡಿ. ದೇವೇಗೌಡ ಕಿಡಿ

JDS Silver Jubilee Celebration: ವಿಜಯಪುರ ನಗರದಲ್ಲಿ ಶುಕ್ರವಾರ ನಡೆದ ಜೆಡಿಎಸ್ ಪಕ್ಷದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಮಾತನಾಡಿದ್ದಾರೆ. ಪ್ರಾದೇಶಿಕ ಪಕ್ಷ ಜೆಡಿಎಸ್‌ನ ಬೆಳೆಸಿ, ಉಳಿಸಿ ಎಂದು ರಾಜ್ಯದ ಜನರಿಗೆ ಅವರು ಮನವಿ ಮಾಡಿದ್ದಾರೆ.

ವಿಜಯಪುರ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ.

ವಿಜಯಪುರ: ಜೆಡಿಎಸ್‌ ಒಂದು ಪ್ರಾದೇಶಿಕ ಪಕ್ಷ. ಇವತ್ತು ಪ್ರಾದೇಶಿಕ ಪಕ್ಷವನ್ನು ಬಲಪಡಿಸುವ ಕಾರ್ಯವಾಗಬೇಕು. ಎನ್‌ಡಿಎನಲ್ಲಿ ನಾವು ಕೊಡುವ ಶಕ್ತಿಯನ್ನು ಗಣನೆಗೆ ತೆಗೆದುಕೊಳ್ಳುವ ಪ್ರಬುದ್ಧತೆ ಮೋದಿ ಅವರಿಗೆ ಇದೆ. ಈ ರಾಜ್ಯದಲ್ಲಿ ಯೋಗ್ಯವಾದ ಆಡಳಿತ ಕೊಡುವ ಸನ್ನಿವೇಶ ಬರುತ್ತದೆ. ಅದನ್ನು ಮೋದಿ ಅವರು ಗುರುತಿಸುತ್ತಾರೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ (H.D. Deve Gowda) ತಿಳಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಜೆಡಿಎಸ್ ಪಕ್ಷದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ (JDS Silver Jubilee Celebration) ಮಾಜಿ ಪ್ರಧಾನಿಗಳು ಮಾತನಾಡಿದ ಅವರು, ಇವತ್ತು ನಾನು ಅಧಿಕಾರ ಕೇಳಲು ಇಲ್ಲಿಗೆ ಬಂದಿಲ್ಲ. ಮೊರಾರ್ಜಿ ದೇಸಾಯಿ ಅವರು ಪ್ರಧಾನಿ ಆಗಿದ್ದಾಗ ಪಕ್ಷದ ಜವಾಬ್ದಾರಿ ನನಗೆ ನೀಡಿದರು. ಅದಾದ ನಂತರ ಏನೇನು ಆಯ್ತು ಎಂಬುವುದು ನಿಮಗೆ ಗೊತ್ತು. 1980ರಲ್ಲಿ ಇಂದಿರಾಗಾಂಧಿ ಅವರು ಕಮಲಾಪತಿ ತ್ರಿಪಾಠಿ ಅವರನ್ನು ಕಳುಹಿಸಿ, ದೇವರಾಜು ಅರಸು ಕಾಂಗ್ರೆಸ್‌ನಿಂದ ಹೊರಗೆ ಹೋಗಿದ್ದಾರೆ, ನಿಮ್ಮನ್ನು ಸಿಎಂ ಮಾಡ್ತೀವಿ ಎಂದು ಹೇಳಿದರು. ತ್ರಿಪಾಠಿ ಸಮ್ಮುಖದಲ್ಲಿ ಬಿಎಂ ಪಾಟೀಲರ ಮನೆಯಲ್ಲಿ ಎರಡು ಸಭೆ ನಡೆಯಿತು. ಬಿ.ಡಿ.ಜತ್ತಿ ಅವರು ಫೋನ್‌ ಮಾಡಿ, ದೇವೇಗೌಡರೇ ಚುನಾವಣೆ ನಡೆಸಲು ಸಾಲ ಮಾಡಿದ್ದೀರಿ, ನೀವು ಕಾಂಗ್ರೆಸ್‌ ಸೇರಿ ಎಂದು ಕೇಳಿದ್ದರು. ಆದರೆ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಸೇರಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ಮೊರಾರ್ಜಿ ದೇಸಾಯಿ ಅವರು ಕೊಟ್ಟಿರುವ ಜವಾಬ್ದಾರಿ ನಿರ್ವಹಿಸಿಕೊಂಡು ಬಂದಿದ್ದು, ಇಂದಿಗೆ 25 ವರ್ಷ ಆಗಿದೆ ಎಂದು ತಿಳಿಸಿದರು.



ಲಾಲ್‌ ಬಹುದೂರ್‌ ಶಾಸ್ತ್ರಿ ಅವರನ್ನು ನಿಜಲಿಂಗಪ್ಪ ಅವರು ಕರೆಸಿ ಆಲಮಟ್ಟಿ ಜಲಾಶಯಕ್ಕೆ ಶಿಲಾನ್ಯಾಸ ಮಾಡಿಸಿದರು. ಆದರೆ, ನಾನು ಬರುವವರೆಗೆ ನಿಜಲಿಂಗಪ್ಪ, ಬಿಡಿ ಜತ್ತಿ, ವೀರೇಂದ್ರ ಪಾಟೀಲ್‌ ದೇವರಾಜ ಅರಸು, ಹೆಗ್ಗಡೆಯವರು ಇವರೆಲ್ಲಾ ಸಿಎಂ ಆಗಿದ್ದರು. ಆದರೆ, ಎಷ್ಟು ನೀರು ಸಂಗ್ರಹಿಸಿದರು. ಕೇವಲ ಶೇ.10 ನೀರನ್ನು ಮಾತ್ರ ಸಂಗ್ರಹವಾಗಿತ್ತು. ನಾರಾಯಣಪುರ ಡ್ಯಾಂ ಕಟ್ಟಿ ಕೇವಲ 15 ಲಕ್ಷ ಎಕರೆಗೆ ಕೃಷ್ಣಾನದಿ ನೀರು ನೀಡಬೇಕಾಗಿತ್ತು. ಆದರೆ, ಕೇವಲ 50 ಸಾವಿರ ಎಕರೆಗೆ ನೀರು ಕೊಟ್ಟಿದ್ದರು. ನಾನು ಸಿಎಂ ಆದ ವೇಳೆ ವೀರಪ್ಪ ಮೊಯ್ಲಿ ಅವರು 200 ಕೋಟಿ ಸಾಲ ಮಾಡಿ, ಸರ್ಕಾರಿ ಅಧಿಕಾರಿಗಳ ಸಂಬಳ ಕೊಟ್ಟಿದ್ದರು. ಅಂತಹ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿ ಆದೆ. ಈ ವೇಳೆ ಕೃಷ್ಣಾ ಮೇಲ್ದಂಡೆ ಯೋಜನೆ, ವಿವಿಧ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಿದ ಬಗ್ಗೆ ದೇವೇಗೌಡ ಅವರು ಸ್ಮರಿಸಿದ್ದಾರೆ.

ಆಲಮಟ್ಟಿ ಜಲಾಶಯದ ಎತ್ತರ 524.256 ಮೀಟರ್‌ಗೆ ಏರಿಸಲು ಒತ್ತಾಯಿಸಿ ರೈತರು ಮಾಡುತ್ತಿರುವ ಹೋರಾಟಕ್ಕೆ ನಾನು ಸಹಕಾರ ನೀಡುವೆ ಎಂದಿರುವ ಅವರು, ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳಕ್ಕೆ ಚಂದ್ರಬಾಬು ನಾಯ್ಡು ವಿರೋಧಿಸಿದ್ದರು. ಇವತ್ತು ಜಲಾಶಯವು 519.60 ಮೀಟರ್‌ ಎತ್ತರ ಇರುವುದರಿಂದ ಎರಡೂ ರಾಜ್ಯಗಳ ಜನ ಆನಂದವಾಗಿ ನೀರು ಬಳಸುತ್ತಿದ್ದಾರೆ. ಕುಮಾರಣ್ಣ 25 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿ, ಗ್ರಾಮ ವಾಸ್ತವ್ಯ ಮಾಡಿ, ಓಟು ಕೇಳಿದರೆ ಈಗ ಜನರು ಗ್ಯಾರಂಟಿ, ಗ್ಯಾರಂಟಿ ಎನ್ನುತ್ತಿದ್ದಾರೆ. ಶಾಶ್ವತವಾಗಿ ದುಡಿಯುವ ಕೈಗೆ ಶಕ್ತಿ ತುಂಬುವ ಕೆಲಸ ನಾವು ಮಾಡಿದ್ದೇವೆ. ರೈತನಿಗೆ ನೀರು, ಗೊಬ್ಬರ, ಸಕಾಲದಲ್ಲಿ ಸಾಲದ ವ್ಯವಸ್ಥೆ ಮಾಡಿದರೆ ನಿಮ್ಮನ್ನೇನೂ ಕೇಳಲ್ಲ. ಅಂತಹ ಕೆಲಸವನ್ನು ಮಾಡಲು ನಾನು ಏನೆಲ್ಲಾ ಹೋರಾಟ ಮಾಡಿದೆ ಎಂಬುವುದು ನಿಮಗೆ ತಿಳಿಯಲು ʼನೇಗಿಲ ಗೆರೆಗಳುʼ ಪುಸ್ತಕ ಓದಬೇಕು ಎಂದು ತಿಳಿಸಿದರು.

ನನ್ನ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟ ಆಡಳಿತ ನೀಡಿರುವ ರಾಜ್ಯ ಸರ್ಕಾರ ನೋಡಿಲ್ಲ. ಇವತ್ತು ನಿಮ್ಮ ಮುಂದೆ ಕೈಚಾಚಿ ಕೇಳುವೆ, ಪ್ರಾದೇಶಿಕ ಪಕ್ಷ ಜೆಡಿಎಸ್‌ನ ಬೆಳೆಸಿ, ಉಳಿಸಿ ಎಂದು ಮನವಿ ಮಾಡಿದ್ದಾರೆ.