ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೃಷ್ಣಾ ತೀರದ ನೀರಾವರಿ ಹೋರಾಟಗಾರ ಬಸವರಾಜ ಕುಂಬಾರ ಇನ್ನಿಲ್ಲ

Basavaraj Kumbar: ನಿಡಗುಂದಿಯ ಬಸವರಾಜ ಕುಂಬಾರ ಅವರು ರೈತರ ಹಕ್ಕು, ಕೃಷ್ಣಾ ನೀರು ಹಾಗೂ ನೀರಾವರಿ ಯೋಜನೆಗಳಿಗಾಗಿ ನಿರಂತರ ಹೋರಾಟ ನಡೆಸಿದ್ದರು. ಕಳೆದ ನಾಲ್ಕು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರೂ ರೈತರ ಸಮಸ್ಯೆಗಳಿಗಾಗಿ ಹೋರಾಟ ಮುಂದುವರಿಸಿದ್ದರು.

ಆಲಮಟ್ಟಿ: ಕೃಷ್ಣಾ ನದಿ ತೀರದ ನೀರಾವರಿ ಹೋರಾಟಗಾರ, ನಿಡಗುಂದಿಯ ಬಸವರಾಜ ಕುಂಬಾರ (64) (Basavaraj Kumbar) ಗುರುವಾರ ನಿಧನರಾದರು. ಅವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. 1995–2000ರ ಅವಧಿಯಲ್ಲಿ ಕೃಷ್ಣಾ ತೀರದ ರೈತರಲ್ಲಿ ನೀರಾವರಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ಸ್ಥಾಪಿಸಿ, ರೈತ ಚಳವಳಿಗೆ ಭದ್ರ ಬುನಾದಿ ಹಾಕಿದ ಪ್ರಮುಖರಲ್ಲಿ ಕುಂಬಾರರು ಒಬ್ಬರಾಗಿದ್ದರು.

ಇವರು ರೈತರ ಹಕ್ಕು, ಕೃಷ್ಣಾ ನೀರು ಹಾಗೂ ನೀರಾವರಿ ಯೋಜನೆಗಳಿಗಾಗಿ ನಿರಂತರ ಹೋರಾಟ ನಡೆಸಿದ್ದರು. ಆಲಮಟ್ಟಿಯಲ್ಲಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸುವ ಪರಂಪರೆಗೆ 2000ರಲ್ಲೇ ರೈತರನ್ನು ಸಂಘಟಿಸಿ ಚಾಲನೆ ನೀಡಿದ್ದ ಇವರು, ಪ್ರತಿವರ್ಷ ಬಾಗಿನದೊಂದಿಗೆ ನೀರಾವರಿ ತಜ್ಞರು, ರೈತ ಮುಖಂಡರು ಹಾಗೂ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಕೃಷ್ಣಾ ನದಿಯ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುತ್ತಿದ್ದರು. ನಂತರ 2002ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಸರ್ಕಾರ ಆಲಮಟ್ಟಿಗೆ ಆಗಮಿಸಿ ಅಧಿಕೃತವಾಗಿ ಬಾಗಿನ ಅರ್ಪಿಸುವ ಪರಂಪರೆಗೆ ಚಾಲನೆ ನೀಡಿತು.

ಜಲಾಶಯ ಪೂರ್ಣಗೊಳಿಸುವುದು, ಕಾಲುವೆಗಳಿಗೆ ನೀರು ಹರಿಸುವುದು, ಸವಳು–ಜವಳು ಸಮಸ್ಯೆ, ನೀರು ಬಳಕೆದಾರರ ಸಂಘಗಳ ಸ್ಥಾಪನೆ ಸೇರಿದಂತೆ ಹಲವು ನೀರಾವರಿ ವಿಚಾರಗಳಲ್ಲಿ ಹೋರಾಟ ನಡೆಸಿದ್ದರು. 2005ರ ಅವಳಿ ಜಿಲ್ಲೆಗಳ ಸಮಗ್ರ ಹೋರಾಟದಲ್ಲಿ ಭಾಗವಹಿಸಿ ಲಾಠಿ ಪ್ರಹಾರಕ್ಕೊಳಗಾಗಿ ಬಂಧನಕ್ಕೂ ಒಳಗಾಗಿದ್ದರು.

ನಿಡಗುಂದಿ ತಾಲೂಕು ರಚನೆ, ವಿಶೇಷ ತಹಶೀಲ್ದಾರ್ ನೇಮಕ ಹಾಗೂ ಸಕ್ಕರೆ ಕಾರ್ಖಾನೆಗಳಿಂದ ರೈತರ ಶೋಷಣೆ ವಿರುದ್ಧದ ಹೋರಾಟಗಳಲ್ಲಿಯೂ ಮುಂಚೂಣಿಯಲ್ಲಿದ್ದರು. ಕೃಷ್ಣಾ ಕಾಡಾ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ರೈತಪರ ಸೇವೆಗೆ ರಾಜ್ಯಮಟ್ಟದ ಕೆ.ಎನ್. ನಾಗೇಗೌಡ ಪ್ರಶಸ್ತಿಯೂ ಲಭಿಸಿತ್ತು.

ಕಳೆದ ನಾಲ್ಕು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರೂ ರೈತರ ಸಮಸ್ಯೆಗಳಿಗಾಗಿ ಹೋರಾಟ ಮುಂದುವರಿಸಿದ್ದರು. ಅವರ ನಿಧನ ಕೃಷ್ಣಾ ತೀರದ ರೈತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ.