ವಿಜಯಪುರ: ಕಾಲು ಜಾರಿ ತೆರೆದ ಬಾವಿಗೆ ಬಿದ್ದು ಇಬ್ಬರು ಹೆಣ್ಣು ಮಕ್ಕಳು ಮೃತಪಟ್ಟಿರುವ ಘಟನೆ ವಿಜಯಪುರ (Vijayapura Tragedy) ಜಿಲ್ಲೆ ನಿಡಗುಂದಿ ತಾಲೂಕಿನ ಬಳಬಟ್ಟಿ ಗ್ರಾಮದ ತೋಟದ ಮನೆ ಬಳಿ ಶುಕ್ರವಾರ ಸಂಜೆ ನಡೆದಿದೆ. ಇದೇ ವೇಳೆ ಮಕ್ಕಳನ್ನು ರಕ್ಷಿಸಲು ಹೋದ ತಂದೆಯೂ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ತೋಟದ ಮನೆಯ ಬಳಿ ಇದ್ದ ತೆರೆದ ಬಾವಿಗೆ ಬಿದ್ದು ಸಾಕ್ಷಿ (15), ರಕ್ಷಿತಾ (10) ಮೃತ ಪಟ್ಟಿದ್ದಾರೆ. ಮಕ್ಕಳನ್ನು ರಕ್ಷಿಸಲು ಬಾವಿಗೆ ಜಿಗಿದ ತಂದೆ ಸಾಬಣ್ಣ (40) ಅವರೂ ನಾಪತ್ತೆಯಾಗಿದ್ದಾರೆ. ನಿನ್ನೆ ರಾತ್ರಿಯೇ ಇಬ್ಬರು ಹೆಣ್ಣು ಮಕ್ಕಳ ಮೃತದೇಹ ಪತ್ತೆಯಾಗಿದ್ದವು. ಸಾಬಣ್ಣ ಅವರ ಶವಕ್ಕಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಆಂಧ್ರದಿಂದ ಪ್ರವಾಸಕ್ಕೆ ಬಂದಿದ್ದ ತಾಯಿ-ಮಗಳು ತುಂಗಭದ್ರಾ ನದಿಯಲ್ಲಿ ನಾಪತ್ತೆ!
ವಿಜಯನಗರ: ಪ್ರವಾಸಕ್ಕೆ ಬಂದಿದ್ದ ತಾಯಿ-ಮಗಳು ತುಂಗಭದ್ರಾ ನದಿಯಲ್ಲಿ ನಾಪತ್ತೆಯಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಬಳಿ ನಡೆದಿದೆ. ತಾಯಿ ಶಾಹಿನ್ (38) ಪುತ್ರಿ ಯಾಸ್ಮಿನ್ (13) ನಾಪತ್ತೆಯಾದವರು.
ಇವರು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಸೂಳೆಕೆರೆ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಆಂಧ್ರಪ್ರದೇಶದಿಂದ ಸಂಬಂಧಿಕರೊಂದಿಗೆ ತಾಯಿ-ಮಗಳು ಪ್ರವಾಸಕ್ಕೆ ಬಂದಿದ್ದರು. ನಾಪತ್ತೆಯಾದ ತಾಯಿ ಮತ್ತು ಮಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ತುಂಗಭದ್ರಾ ನದಿಗೆ ಸ್ಥಾನಕ್ಕೆ ತೆರಳಿದ್ದ ವೇಳೆ ದುರಂತ ಸಂಭವಿಸಿದೆ. ಹಂಪಿಯ ಪ್ರವಾಸಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.