ಜಪಾನ್, ನ. 24: ಆಶಾ ಕಾರ್ಯಕರ್ತೆಯರ ಬಗ್ಗೆ ನನಗೆ ವಿಶೇಷ ಕಾಳಜಿ ಇದೆ. ನಿಮ್ಮ ಸಮಸ್ಯೆಗೆ ಖಂಡಿತವಾಗಿಯೂ ಪರಿಹಾರ ನೀಡುತ್ತೇವೆ, ಪ್ರತಿಭಟನೆ ಕೈಬಿಡಿ ಎಂದು ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar), ಜಪಾನ್‌ನಿಂದ ಆಶಾ ಕಾರ್ಯಕರ್ತೆಯರಿಗೆ ಮನವಿ ಮಾಡಿದರು. ಜಪಾನ್ ಪ್ರವಾಸದಲ್ಲಿರುವ ಅವರು ರೈಲಿನಲ್ಲಿ ಪ್ರಯಾಣ ಮಾಡುತ್ತಲೇ ವಿಡಿಯೋ ಕರೆ ಮುಖಾಂತರ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆತ್ತಿರುವ ಆಶಾ ಕಾರ್ಯಕರ್ತೆಯರ ಮುಖಂಡರೊಂದಿಗೆ ಮಂಗಳವಾರ ಚರ್ಚೆ ನಡೆಸಿದರು.
ನಿಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತೇವೆ. ನನ್ನ ಮೇಲೆ ವಿಶ್ವಾಸವಿಡಿ ಎಂದು ಭರವಸೆ ನೀಡಿದ್ದು, ನಿಮ್ಮ ಕೋಪ ಬಿಡಿ. ನನ್ನ ಮನವಿ ಒಪ್ಪದೇ ನಿರಶನ ಮುಂದುವರಿಸುತ್ತಿದ್ದೀರಿ. ಇದರಿಂದ ಆಶಾ ಕಾರ್ಯಕರ್ತ ಹೆಣ್ಣುಮಕ್ಕಳಿಗೆ ತೊಂದರೆ ಆಗುತ್ತಿದೆ ಎಂದರು.
ಅತ್ತ ಅಂಗನವಾಡಿ ಕಾರ್ಯಕರ್ತೆಯರು ದೆಹಲಿಗೆ ಹೋಗಲು ತಯಾರಿ ಮಾಡುತ್ತಿದ್ದಾರೆ. ಬೇರೆ ಇಲಾಖೆಗೆ ಸಂಬಂಧಿಸಿದಂತೆ ಬೇರೆ ಬೇರೆ ಬೇಡಿಕೆಗಳಿದ್ದು, ಅಧಿವೇಶನ ಸಂದರ್ಭದಲ್ಲಿ ನಾನು ನಿಮ್ಮ ಬೇಡಿಕೆ ಬಗ್ಗೆ ಆರ್ಥಿಕ ಇಲಾಖೆ ಜತೆ ಚರ್ಚಿಸುವೆ. ನೀವು ಪ್ರತಿಭಟನೆ ಹಿಂಪಡೆಯಿರಿ. ನಿಮ್ಮ ಬೇಡಿಕೆಗಳಿಗೆ ನಾವು ಸ್ಪಂದಿಸುತ್ತೇವೆ. ನೀವು ಶ್ರಮ ಪಡುತ್ತಿದ್ದು, ನಿಮಗೆ ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ನಿಮ್ಮ ಬಗ್ಗೆ ಕಾಳಜಿ ತೋರುತ್ತಿರುವ ರಾಜಕೀಯ ನಾಯಕರು ನಿಮಗೆ ಸಹಾಯ ಮಾಡುವುದಿಲ್ಲ. ಅವರ ರಾಜಕೀಯಕ್ಕೆ ನಿಮ್ಮನ್ನು ಬಳಸಿಕೊಳ್ಳುತ್ತಾರೆ. ನಾನು ಖಂಡಿತವಾಗಿಯೂ ನಿಮ್ಮ ಸಮಸ್ಯೆಗೆ ಪರಿಹಾರ ನೀಡುವ ವಾಗ್ದಾನ ನೀಡುತ್ತಿದ್ದೇವೆ. ನನಗೆ ಅಧಿವೇಶನದವರೆಗೆ ಸಮಯ ಕೊಡಿ. ಪಾಪ ಹೆಣ್ಣುಮಕ್ಕಳಿಗೆ ಹಗಲು ರಾತ್ರಿ, ಬಿಸಿಲು ಚಳಿಯಲ್ಲಿ ಪರದಾಡುವುದು ಬೇಡ ಎಂದು ಮನವಿ ಮಾಡಿದರು.
ಬೆಲೆ ಏರಿಕೆ ಸಂದರ್ಭದಲ್ಲಿ ನಿಮ್ಮ ನೋವು, ಸಮಸ್ಯೆ ಏನು ಎಂದು ನಮಗೆ ಅರ್ಥವಾಗುತ್ತದೆ. ಇದೇ ಕಾರಣಕ್ಕೆ ಗ್ಯಾರಂಟಿ ನೀಡಲು ಮುಂದಾಗಿದ್ದೇವೆ. ಆರಂಭದಲ್ಲಿ ಆಶಾ ಕಾರ್ಯಕರ್ತೆಯರಿಗೆ ಗೃಹಲಕ್ಷ್ಮಿ ಯೋಜನೆ ನೀಡಬಾರದು ಎಂಬ ಚರ್ಚೆಯಾಗಿತ್ತು. ಆದರೆ ನಿಮ್ಮ ಶ್ರಮ ಪರಿಗಣಿಸಿ ನಾವು ಯೋಜನೆ ನೀಡಿದೆವು. ನಾನು ಜಪಾನ್ ಪ್ರವಾಸದಿಂದ ಮರಳಿದ ಬಳಿಕ ನಿಮ್ಮನ್ನು ಭೇಟಿ ಮಾಡುವೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.