ಏರ್ಪೋರ್ಟ್ಗೆ ಹೆಬ್ಬಾಳ ಮಾದರಿಯಲ್ಲಿ ಹೊಸ ಫ್ಲೈಓವರ್ ಚಿಂತನೆ: ಸಿಎಂ ಡಿ.ಕೆ. ಶಿವಕುಮಾರ್
CM DK Shivakumar: ಫ್ಲೈಓವರ್ ಅನ್ನು ಯಾವ ಮಾದರಿಯಲ್ಲಿ ನಿರ್ಮಿಸಬೇಕು ಅಥವಾ ಬೇರೆ ರೀತಿಯ ವ್ಯವಸ್ಥೆ ಮಾಡಬೇಕೇ ಎಂಬುದನ್ನು ತಾಂತ್ರಿಕವಾಗಿ ಪರಿಶೀಲಿಸಬೇಕಿದೆ. ಈ ಕುರಿತು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಅಧಿಕಾರಿಗಳು, ಸಚಿವರು ಹಾಗೂ ಶಾಸಕರೊಂದಿಗೆ ಚರ್ಚಿಸಿದ್ದು, ಯಾವ ಮಾರ್ಗದಲ್ಲಿ ಕಾಮಗಾರಿ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
-
ಬೆಂಗಳೂರು, ನ.18: ಬೆಂಗಳೂರಿನ ಉತ್ತರ ಭಾಗದಿಂದ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನ ಸವಾರರ ಸಂಚಾರ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಹೆಬ್ಬಾಳ ಮಾದರಿಯಲ್ಲಿ ಹೊಸ ಫ್ಲೈಓವರ್ ನಿರ್ಮಿಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಜಕ್ಕೂರು ವಿಮಾನ ನಿಲ್ದಾಣದ ಎದುರೇ ನೂತನ ಪಾಲಿಕೆ ಕಚೇರಿ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ತಿಳಿಸಿದರು. 522.23 ಕೋಟಿ ವೆಚ್ಚದಲ್ಲಿ ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ಹಮ್ಮಿಕೊಂಡಿದ್ದ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮಗಳನ್ನು ಬುಧವಾರ ನೆರವೇರಿಸಿ, ಅವರು ಮಾತನಾಡಿದರು.
ಮೊದಲಿಗೆ ಬ್ಯಾಟರಾಯನಪುರದ ಜಕ್ಕೂರು ರೈಲ್ವೆ ಮೇಲ್ಸೇತುವೆಯನ್ನು ಉದ್ಘಾಟಿಸಿದರು. ನಂತರ ಕೆ.ಆರ್. ಪುರಂನ ಗೆದ್ದಲಹಳ್ಳಿ ರೈಲ್ವೆ ಹಳಿಗೆ ಅಡ್ಡಲಾಗಿ ನಿರ್ಮಿಸಿರುವ ಮಳೆನೀರು ಕಾಲುವೆ ಉದ್ಘಾಟಿಸಿದರು. ಇದಾದ ಬಳಿಕ ಮಾರುತಿ ಸೇವಾನಗರ ಮುಖ್ಯರಸ್ತೆ ಐಒಸಿ ಜಂಕ್ಷನ್ ಬಳಿ ರೋಟರಿ ಮೇಲ್ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದರು ಹಾಗೂ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.
ʼಏರ್ಪೋರ್ಟ್ ಕಡೆಗೆ ಹೋಗುವವರು ಹಾಗೂ ಉತ್ತರ ಬೆಂಗಳೂರಿನಿಂದ ನಗರದೊಳಗೆ ಬರುವವರು ಪ್ರತಿನಿತ್ಯ ಸಂಚಾರ ದಟ್ಟಣೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಸುಮಾರು 20 ಕಿ.ಮೀ. ವ್ಯಾಪ್ತಿಯಲ್ಲಿ ಈ ಸಮಸ್ಯೆ ಇದೆ. ವಿಮಾನ ನಿಲ್ದಾಣಕ್ಕೆ ತೆರಳಲು ಈಗಿರುವ ಮಾರ್ಗವನ್ನೇ ಎಲ್ಲರೂ ಅವಲಂಬಿಸಬೇಕಾಗಿದೆ. ಹೀಗಾಗಿ ಇಲ್ಲಿ ಹೊಸ ಫ್ಲೈಓವರ್ ನಿರ್ಮಿಸುವ ಅಗತ್ಯವಿದೆ ಎಂದು ತೀರ್ಮಾನಿಸಿದ್ದೇವೆʼ ಎಂದರು.
ಫ್ಲೈಓವರ್ ಅನ್ನು ಯಾವ ಮಾದರಿಯಲ್ಲಿ ನಿರ್ಮಿಸಬೇಕು ಅಥವಾ ಬೇರೆ ರೀತಿಯ ವ್ಯವಸ್ಥೆ ಮಾಡಬೇಕೇ ಎಂಬುದನ್ನು ತಾಂತ್ರಿಕವಾಗಿ ಪರಿಶೀಲಿಸಬೇಕಿದೆ. ಈ ಕುರಿತು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಅಧಿಕಾರಿಗಳು, ಸಚಿವರು ಹಾಗೂ ಶಾಸಕರೊಂದಿಗೆ ಚರ್ಚಿಸಿದ್ದು, ಯಾವ ಮಾರ್ಗದಲ್ಲಿ ಕಾಮಗಾರಿ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಜಕ್ಕೂರು ವಿಮಾನ ನಿಲ್ದಾಣದ ಎದುರು ಪಾಲಿಕೆ ಕಚೇರಿ ನಿರ್ಮಾಣಕ್ಕೆ ಸಿದ್ಧತೆ
ಜಕ್ಕೂರು ವಿಮಾನ ನಿಲ್ದಾಣದ ಎದುರು ಪಾಲಿಕೆ ಕಚೇರಿ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕ್ಷೇತ್ರದ ಜನ ಬೆಂಗಳೂರು ಪಾಲಿಕೆಗೆ ಹೋಗಬೇಕಿಲ್ಲ. ನಿಮ್ಮದೇ ಪಾಲಿಕೆ ಕಚೇರಿ ನಿರ್ಮಾಣವಾಗಲಿದೆ. ಬೆಳೆಯುತ್ತಿರುವ ಬೆಂಗಳೂರಿನ ಅಗತ್ಯಗಳಿಗೆ ತಕ್ಕಂತೆ ವ್ಯವಸ್ಥೆಗಳನ್ನು ಕೈಗೊಳ್ಳಲಾಗುವುದು. ವಿಮಾನ ನಿಲ್ದಾಣ ನಿರ್ಮಾಣವಾದ ನಂತರ ಈ ಕ್ಷೇತ್ರದ ಆಸ್ತಿ ಬೆಲೆಯೂ ಹೆಚ್ಚಳವಾಗಿದೆ. ಹೊರ ರಾಜ್ಯಗಳ ಜನರೂ ಇಲ್ಲಿ ನೆಲೆಸಿದ್ದು ಅನೇಕರಿಗೆ ಅನುಕೂಲವಾಗಿದೆ. ಅದಕ್ಕೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಲು ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ರೋಟರಿ ಮೇಲ್ಸೆತುವೆ ಬೆಂಗಳೂರಿನ ಕಿರೀಟವಾಗಲಿದೆ
ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೆಂಗಳೂರಿನಲ್ಲಿ ಹೆಬ್ಬಾಳ ಫ್ಲೈಓವರ್ ನಿರ್ಮಾಣವಾಯಿತು. ಬಳಿಕ ಇದುವೇ ಅತ್ಯಂತ ಪ್ರಮುಖವಾದ ಮೂಲಸೌಕರ್ಯ ನಿರ್ಮಾಣವಾಗಿದೆ. ಈ ಮೇಲ್ಸೇತುವೆ ಮೂರು ಕ್ಷೇತ್ರಗಳನ್ನು ಜೋಡಿಸುತ್ತದೆ. ಬೆಂಗಳೂರಿನ ನಾಗರಿಕರ ಸಮಯವನ್ನು ಉಳಿಸಬೇಕೆಂಬ ಉದ್ದೇಶದಿಂದ ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಈ ರೋಟರಿ ಮೇಲ್ಸೇತುವೆ ಬೆಂಗಳೂರಿಗೆ ಕಿರೀಟವಾಗಲಿದೆ ಎಂದು ಹೇಳಿದರು.
ಈ ಮೇಲ್ಸೇತುವೆ ಕಾಮಗಾರಿ ತಾಂತ್ರಿಕವಾಗಿ ಕ್ಲಿಷ್ಟಕರವಾಗಿದೆ. ಆರು ಪಥಗಳ ಫ್ಲೈಓವರ್ ಸುಲಭದ ಕೆಲಸವಲ್ಲ. ಆದ್ಯತೆ ಮೇರೆಗೆ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸಂಚಾರಕ್ಕೆ ಹೆಚ್ಚಿನ ತೊಂದರೆಯಾಗದಂತೆ ಕಾಮಗಾರಿಯನ್ನು ಕೈಗೊಳ್ಳಲು ಕ್ರಮ ಕೈಗೊಂಡಿದ್ದೇವೆ. ಜನರ ಸಲಹೆಗಳನ್ನು ಪಡೆದುಕೊಂಡು, ಸಂಚಾರಿ ಪೊಲೀಸರ, ನಾಗರಿಕರ ಸಲಹೆಗಳನ್ನು ಪಡೆದುಕೊಂಡು ಅನುಷ್ಠಾನ ಮಾಡಲಾಗುತ್ತಿದೆ ಎಂದರು.
1.50 ಲಕ್ಷ ಕೋಟಿ ಮೊತ್ತದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಯೋಜನೆ
ಇಡೀ ಬೆಂಗಳೂರು ನಗರದ ಅಭಿವೃದ್ಧಿಗೆ 1.50 ಲಕ್ಷ ಕೋಟಿ ಮೊತ್ತದ ಯೋಜನೆಗಳನ್ನು ರೂಪಿಸಲಾಗಿದೆ. ಮೇಲ್ಸೇತುವೆಗಳು, ಮೆಟ್ರೋ, ಬೆಂಗಳೂರು ಬಿಜಿನೆಸ್ ಕಾರಿಡಾರ್, ಟನಲ್ ರಸ್ತೆ, ಸಬ್ ಅರ್ಬನ್ ರೈಲ್ವೆ, ಕುಡಿಯುವ ನೀರು ಪೂರೈಕೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಇದರಲ್ಲಿ ಸೇರಿಸಲಾಗಿದೆ. ಜನರ ಅಭಿವೃದ್ಧಿಗೆ ಉತ್ತಮ ಆಡಳಿತ ನೀಡಲು ಸರ್ಕಾರ ಬದ್ಧವಾಗಿದೆ. ಟೀಕೆಗಳನ್ನು ಹಾಗೂ ಸಲಹೆಗಳನ್ನು ಸ್ವೀಕರಿಸಲು ನಾವು ಸಿದ್ದ ಎಂದರು.
20 ಅಡಿ ಜಾಗದ ತಾಂತ್ರಿಕ ಸಮಸ್ಯೆಗೆ ಪರಿಹಾರ
ಗೆದ್ದಲಹಳ್ಳಿ ರೈಲ್ವೆ ಹಳಿಗೆ ಅಡ್ಡಲಾಗಿ ಮಳೆನೀರು ಕಾಲುವೆ ನಿರ್ಮಿಸುವುದು ತಾಂತ್ರಿಕವಾಗಿ ಸವಾಲಿನ ಕೆಲಸವಾಗಿತ್ತು. ಈ ಹಿಂದೆ ಮೂರು ಬಾರಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲನೆ ಮಾಡಲಾಗಿತ್ತು. ರೈಲ್ವೆ ಸೇತುವೆ ಹಾಗೂ ಇತರ ನಿರ್ಮಾಣಗಳ ನಡುವೆ ನೀರು ಹರಿಯಲು ಸೂಕ್ತ ವ್ಯವಸ್ಥೆ ಕಲ್ಪಿಸುವುದು ಸುಲಭದ ಕೆಲಸವಾಗಿರಲಿಲ್ಲ ಎಂದರು.
ಇದು ಬಹಳ ತಾಂತ್ರಿಕ ಸಮಸ್ಯೆ ಇದ್ದ ಜಾಗ. ಇಷ್ಟು ಅಗಲವಾದ ಪ್ರದೇಶದಲ್ಲಿ ಕೇವಲ 20 ಅಡಿ ಜಾಗದಲ್ಲಿ ಮಾತ್ರ ನೀರು ಹರಿದುಹೋಗಬೇಕಾದ ಪರಿಸ್ಥಿತಿ ಇತ್ತು. ಮಳೆ ಬಂದಾಗ ಹೆಬ್ಬಾಳ ಕಡೆಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ಈ ಕಾಮಗಾರಿ ಕೈಗೊಳ್ಳಲಾಗಿದೆ. ಅಧಿಕಾರಿಗಳು ಈ ಸಮಸ್ಯೆಯನ್ನು ಪರಿಹರಿಸಿ ಕಾಮಗಾರಿ ಪೂರ್ಣಗೊಳಿಸಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಬೆಂಗಳೂರಿಗೆ ಹೊಸ ರೂಪ
ʼನಾನು ಹಿಂದೆ ನಗರಾಭಿವೃದ್ಧಿ ಸಚಿವನಿದ್ದಾಗ ಜಕ್ಕೂರು ಮತ್ತು ಹೆಬ್ಬಾಳದವರೆಗೆ ಮಾತ್ರ ಕಾರ್ಪೋರೇಷನ್ ವ್ಯಾಪ್ತಿ ಇತ್ತು. ಈ ಭಾಗಕ್ಕೆ ಕಾವೇರಿ ನೀರು ತರವುದೂ ಕಷ್ಟವಿತ್ತು. ನಾನು ಡಿಸಿಎಂ ಆಗಿದ್ದ ವೇಳೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಿಗೆ 5 ಸಾವಿರ ಕೋಟಿ ವೆಚ್ಚ ಮಾಡಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಕಾವೇರಿ ಆರನೇ ಹಂತಕ್ಕೂ ಸಿದ್ಧತೆಗಳು ನಡೆದಿದೆʼ ಎಂದರು.
ಒಂದೇ ದಿನದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ
ಬೆಂಗಳೂರು ನಾಗರಿಕರ ಬದುಕಿನಲ್ಲಿ ಒಂದೇ ದಿನ ಯಾರ ಕೈಯಲ್ಲಿಯೂ ಬದಲಾವಣೆ ಮಾಡಲು ಸಾಧ್ಯವಿಲ್ಲ. ಒಂದು ಯೋಜನೆ ತಯಾರಾಗಬೇಕಾದರೆ ಆರ್ಥಿಕ ವ್ಯವಸ್ಥೆ ಕಲ್ಪಿಸಬೇಕು. ಆಸ್ತಿಗಳಿಗೆ ಖಾತೆ, ತೆರಿಗೆ, ಕಟ್ಟಬೇಕು. ತೆರಿಗೆಯ ಹೊರೆ ಹೆಚ್ಚಾಗದಂತೆ, ಕಾರ್ಪೋರೇಷನ್ಗಳಿಗೆ ಸಹಾಯ ಮಾಡಬೇಕೆಂದು ಕ್ರಮ ಕೈಗೊಳ್ಳಲಾಗಿದೆ ಎಂದರು.
ಸರಿಯಾದ ದಾಖಲೆಗಳಿದ್ದರೆ ಮನೆ ಬಾಗಿಲಿಗೆ ಖಾತೆ
ಬೆಂಗಳೂರಿನ ಜನತೆಗೆ 'ಭೂಮಿ ಗ್ಯಾರಂಟಿ' ನೀಡಲಾಗಿದೆ. ಇನ್ನು ಮುಂದೆ ಸರಿಯಾದ ದಾಖಲೆಗಳಿದ್ದರೆ ಖಾತೆ ಸಿದ್ಧ ಮಾಡಿ ಮನೆ ಬಾಗಿಲಿಗೆ ನೀಡುತ್ತಾರೆ. ಈಗಾಗಲೇ 26 ಲಕ್ಷ ಖಾತೆಗಳನ್ನು ಸಿದ್ಧಮಾಡಲಾಗಿದೆ. ಖಾತೆಯನ್ನು ಆನ್ಲೈನ್ ಮೂಲಕ ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದು. 'ಬಿ' ಖಾತೆ ಹೊಂದಿರುವವರಿಗೆ 'ಎ' ಖಾತೆ ನೀಡುವ ವ್ಯವಸ್ಥೆ ಸಹ ಮಾಡಲಾಗಿದೆ ಎಂದರು.
ನಾಗರಿಕರು ತಮ್ಮ ಆಸ್ತಿ ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕು. ಆಸ್ತಿ ದಾಖಲೆಗಳನ್ನು ಪರಿಶೀಲಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕು. ಇಡೀ ದೇಶದಲ್ಲಿ ಯಾವ ನಗರದಲ್ಲಿಯೂ ಭೂಮಿ ಗ್ಯಾರಂಟಿಯಂತಹ ವ್ಯವಸ್ಥೆ ಇಲ್ಲ. ಸರ್ಕಾರದ ಆರನೇ ಗ್ಯಾರಂಟಿ ಯಾದ ಭೂಮಿ ಗ್ಯಾರಂಟಿಯನ್ನು ನಾಗರಿಕರು ಸದುಪಯೋಗಪಡಿಸಿಕೊಳ್ಳಬೇಕು. ಯಾರಿಗೂ ಲಂಚ ನೀಡದೆ ನೇರವಾಗಿ ಫಲಾನುಭವಿಗಳಿಗೆ ದೊರಕಬೇಕೆಂದು ಈ ವ್ಯವಸ್ಥೆ ಮಾಡಲಾಗಿದೆ ಎಂದರು.
ಬೀದಿ ಬದಿ ವ್ಯಾಪಾರಿಗಳನ್ನು ಹೊರಗೆ ತಳ್ಳುವುದಿಲ್ಲ
ಬೀದಿ ಬದಿ ವ್ಯಾಪಾರಿಗಳನ್ನು ನಾವು ಹೊರಗೆ ತಳ್ಳುವುದಿಲ್ಲ. ಶಿಸ್ತಿನಿಂದ ಒಂದೆಡೆ ವ್ಯಾಪಾರ ಮಾಡಲಿ. ಮುಖ್ಯ ರಸ್ತೆಗಳಲ್ಲಿ ವಾಹನಗಳಿಗೆ ತೊಂದರೆಯಾಗುವುದು ಬೇಡ ಎನ್ನುವುದು ನಮ್ಮ ಭಾವನೆ. ಕೆಲವರು ಅದರ ಮೇಲೆ ರಾಜಕಾರಣ ಮಾಡುತ್ತಿದ್ದಾರೆ ಮಾಡುವವರು ಮಾಡಿಕೊಳ್ಳಲಿ. ಬಿಜೆಪಿಯವರು ಕೂಡ ಒಳ್ಳೆ ಕೆಲಸ ಮಾಡುತ್ತಿದ್ದೀರಿ ಎಂದು ಸಹಕಾರ ನೀಡಿದ್ದಾರೆ ಎಂದರು.
ಎಲ್ಲಾ ರಂಗದಲ್ಲಿಯೂ ಬೆಂಗಳೂರನ್ನು ಅಭಿವೃದ್ಧಿಪಡಿಸಲು ಸೂಕ್ತ ಯೋಜನೆಗಳು
ರಾಜ್ಯದಲ್ಲಿ ಮೂರು ವರ್ಷದಿಂದ ಯಾವ ಗಲಾಟೆ ಇಲ್ಲದೇ ನೆಮ್ಮದಿ ನೆಲೆಸಿದೆ. ಭೂ ಮಾಫಿಯಾಗೆ ಅವಕಾಶವಿಲ್ಲದಂತಾಗಿದೆ. ಆಡಳಿತ ಮನೆ ಬಾಗಿಲಿಗೆ ಹೋಗಬೇಕೆಂಬ ಉದ್ದೇಶದಿಂದ ಐದು ನಗರ ಪಾಲಿಕೆಗಳನ್ನು ರೂಪಿಸಲಾಗಿದೆ. ಟೀಕೆ ಮಾಡುವವರೂ ಕೂಡ ಬೆಂಗಳೂರು ಬೆಳೆಯುತ್ತಿರುವುದನ್ನು ಒಪ್ಪಿದ್ದಾರೆ. ಪ್ರಜಾ ಸೇವೆ ಇಲಾಖೆ ಮೂಲಕ ಜನರ ಸೇವೆಯನ್ನು ಬಗೆಹರಿಸಲು ಯೋಜನೆಯ ರೂಪಿಸಲಾಗಿದೆ. ಎಲ್ಲಾ ರಂಗದಲ್ಲಿಯೂ ಬೆಂಗಳೂರನ್ನು ಅಭಿವೃದ್ಧಿಪಡಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.
ಕೃಷ್ಣ ಬೈರೇಗೌಡರು ತಮ್ಮ ಕ್ಷೇತ್ರದಲ್ಲಿ ಸಂಚಾರ ದಟ್ಟಣೆ ಹೆಚ್ಚಿದೆ ಎಂಬ ದೃಷ್ಟಿಯಿಂದ ಐದಾರು ಹೊಸ ದ್ವಿಪಥ ರಸ್ತೆಗಳನ್ನು ರೂಪಿಸಿದ್ದಾರೆ. ಅವರು ಬೆಂಗಳೂರು ನಗರದ ಜವಾಬ್ದಾರಿ ಹೊತ್ತ ನಂತರ ಬಹಳ ಕ್ಷಿಪ್ರವಾಗಿ ಎಲ್ಲ ಜನರಿಗೆ ಅನುಕೂಲ ಕಲ್ಪಿಸಬೇಕು ಎಂಬ ಉದ್ದೇಶದಿಂದ ನಗರಕ್ಕೆ ಹೊಸ ರೂಪ ನೀಡಲು ಕ್ರಮ ಕೈಗೊಂಡಿದ್ದಾರೆ ಎಂದರು.
ಕೆಂಪೇಗೌಡರು ಕಟ್ಟಿದ ಬೆಂಗಳೂರು ಹತ್ತರಷ್ಟು ಬೆಳೆದಿದೆ. ಜನ ಇಟ್ಟಿರುವ ಗೌರವ, ಸ್ವಾಭಿಮಾನ, ವಿಶ್ವಾಸವನ್ನು ಉಳಿಸುತ್ತೇವೆ. ದೇಶದ ಕಾನೂನಿಗೆ ಗೌರವ ನೀಡಿ ಶಾಂತಿಯುತವಾಗಿ ಬದುಕಬೇಕು. ನಗರಗಳಿಗೆ ವಲಸೆ ತಪ್ಪಿಸಲು ಗ್ರಾಮಾಂತರ ಪ್ರದೇಶದಲ್ಲಿ ರಸ್ತೆ, ಉದ್ಯೋಗ ಮುಂದಾದ ಸೌಕರ್ಯ ಒದಗಿಸಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.
ಜಿಬಿಎ, ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಿದ್ದೇವೆ
ಜಿಬಿಎ ಚುನಾವಣೆಯನ್ನು ಯಾವುದೇ ಕಾರಣಕ್ಕೂ ಮುಂದೂಡುವುದಿಲ್ಲ. ಮತದಾರರ ಪಟ್ಟಿ ಬಗ್ಗೆ ತಕರಾರು ಇದೆ. ಎಲ್ಲಾ ಸ್ಥಳೀಯ ಚುನಾವಣೆಗಳನ್ನು ನಾವು ನಡೆಸಲಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.