Word power is world power: ಡಿಸಿಎಂ ಡಿಕೆ ಶಿವಕುಮಾರ್ ಮಾರ್ಮಿಕ ಎಕ್ಸ್ ಸಂದೇಶ
ʼಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ ಎಂದು ಡಿಕೆ ಶಿವಕುಮಾರ್ ಬರೆದುಕೊಂಡಿದ್ದಾರೆ. ವರ್ಡ್ ಪವರ್ ಈಸ್ ವರ್ಲ್ಡ್ ಪವರ್. ಅದು ನ್ಯಾಯಾಧೀಶರಾಗಿರಲಿ, ಅಧ್ಯಕ್ಷರಾಗಿರಲಿ ಅಥವಾ ನಾನೂ ಸೇರಿದಂತೆ ಯಾರೇ ಆಗಿರಲಿ, ಆಡಿದ ಮಾತಿನಂತೆ ನಡೆದುಕೊಳ್ಳಬೇಕುʼ ಎಂದು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ತಮ್ಮ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಎಕ್ಸ್ ಪೋಸ್ಟ್ -
ಬೆಂಗಳೂರು, ನ.27: ಕರ್ನಾಟಕ ಕಾಂಗ್ರೆಸ್‌ನಲ್ಲಿ (Karnataka Congress) ಅಧಿಕಾರ ಹಂಚಿಕೆ ಚರ್ಚೆ (Karnataka politics) ತೀವ್ರಗೊಂಡಿರುವ ಸಂದರ್ಭದಲ್ಲಿಯೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಾಕಿರುವ ಮಾರ್ಮಿಕ ಸಂದೇಶ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿಯೂ ಅವರು ಇದೇ ಸಂದೇಶವನ್ನು ನೀಡಿದ್ದರು.
ʼWord power is world powerʼ ಎಂದು ಬರೆಯಲಾದ ತಮ್ಮ ಫೋಟೋ ಹಾಕಿಕೊಂಡಿರುವ ಡಿಕೆಶಿ, ʼಎಕ್ಸ್ʼನಲ್ಲಿ ಹೀಗೆ ಬರೆದುಕೊಂಡಿದ್ದಾರೆ- ʼಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ ಎಂದು ಡಿಕೆ ಶಿವಕುಮಾರ್ ಬರೆದುಕೊಂಡಿದ್ದಾರೆ. ವರ್ಡ್ ಪವರ್ ಈಸ್ ವರ್ಲ್ಡ್ ಪವರ್. ಅದು ನ್ಯಾಯಾಧೀಶರಾಗಿರಲಿ, ಅಧ್ಯಕ್ಷರಾಗಿರಲಿ ಅಥವಾ ನಾನೂ ಸೇರಿದಂತೆ ಯಾರೇ ಆಗಿರಲಿ, ಆಡಿದ ಮಾತಿನಂತೆ ನಡೆದುಕೊಳ್ಳಬೇಕುʼ ಎಂದು ಅವರು ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ! pic.twitter.com/klregNRUtv
— DK Shivakumar (@DKShivakumar) November 27, 2025
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದಾಗಲೂ, ʼವರ್ಡ್ ಪವರ್ ಈಸ್ ವರ್ಲ್ಡ್ ಪವರ್ (ಮಾತಿನ ಶಕ್ತಿಯೇ ವಿಶ್ವದ ಶಕ್ತಿ). ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿʼ ಎಂದು ಹೇಳಿದ್ದರು.
ಇಂದು ಕಾಂಗ್ರೆಸ್ ಹೈಕಮಾಂಡ್ ಮಹತ್ವದ ಮೀಟಿಂಗ್
ಬುಧವಾರವಷ್ಟೇ ಡಿಕೆ ಶಿವಕುಮಾರ್ಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ‘ಪ್ಲೀಸ್ ವೈಟ್’ ಎಂಬ ಸಂದೇಶ ಕಳುಹಿಸಿದ್ದರು. ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ನಂತರದಲ್ಲಿ ಕರ್ನಾಟಕ ಕಾಂಗ್ರೆಸ್‌ನಲ್ಲಿ ಹಲವು ಕ್ಷಿಪ್ರ ಬೆಳವಣಿಗೆಗಳು ನಡೆದಿದ್ದವು. ಅದರ ಬೆನ್ನಲ್ಲೇ ಡಿಕೆ ಶಿವಕುಮಾರ್ ಮಾರ್ಮಿಕವಾಗಿ ಸಂದೇಶ ಪ್ರಕಟಿಸಿದ್ದಾರೆ.
ಈ ನಡುವೆ, ರಾಹುಲ್ ಗಾಂಧಿ ಜತೆ ಸಹ ಡಿಕೆ ಶಿವಕುಮಾರ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಆ ಮಾತುಕತೆ ಗುಟ್ಟನ್ನು ಬಿಟ್ಟುಕೊಡ ಡಿಕೆ ಶಿವಕುಮಾರ್, ‘ರಾಹುಲ್ ಗಾಂಧಿಯವರು ನನ್ನೊಂದಿಗೆ ಏನು ಸಂವಹನ ಮಾಡಿದ್ದಾರೆ ಎಂಬುದು ಮಾಧ್ಯಮದಲ್ಲಿ ಮಾತನಾಡುವ ವಿಚಾರವಲ್ಲ, ಹೇಳುವ ಅವಶ್ಯಕತೆಯೂ ಇಲ್ಲ’ ಎಂದಿದ್ದಾರೆ. ಆದರೆ, ತಮ್ಮ ಗುರಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ 28 ಸೀಟು ಪಡೆಯುವುದು ಮತ್ತು ದೇಶದಲ್ಲಿ ರಾಹುಲ್ ಗಾಂಧಿಯವರನ್ನು ಪ್ರಧಾನ ಮಂತ್ರಿ ಮಾಡುವುದಾಗಿದೆ ಎಂದು ಹೇಳಿದ್ದಾರೆ.
ʼ50:50' ಒಪ್ಪಂದ ಆಗಿಲ್ಲ ಎಂದ ಕೆಜೆ ಜಾರ್ಜ್
ಎರಡು ದಿನ ಹಿಂದಷ್ಟೇ ಬೆಂಗಳೂರಿಗೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ನಾಯಕರ ಜೊತೆ ಮಾತುಕತೆ ನಡೆಸಿ ದೆಹಲಿಗೆ ತೆರಳಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಮತ್ತೆ ಬೆಂಗಳೂರಿಗೆ ಮರಳಿದ್ದಾರೆ. ಈ ಮಧ್ಯೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಂದೇಶ ಕಳುಹಿಸಿರುವುದು ಕೂಡ ಕುತೂಹಲಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಅವರೊಂದಿಗೆ ಸುಮಾರು 25 ನಿಮಿಷ ಕಾಲ ಮಲ್ಲಿಕಾರ್ಜುನ ಖರ್ಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.