ಯಾದಗಿರಿ ಡಿಸಿ ಕಚೇರಿ ಎದುರು ಪ್ರತಿಭಟನೆ; ಖೇಲೋ ಇಂಡಿಯಾ ಕ್ರೀಡಾಪಟು ಲೋಕೇಶ್ ರಾಠೋಡ ಸೇರಿ ಇಬ್ಬರ ಮೇಲೆ ಬಿತ್ತು ಕೇಸ್
Yadgir Protest: ಯಾದಗಿರಿಯಲ್ಲಿ ಶಾಂತವಾಗಿ ಪ್ರತಿಭಟನೆ ನಡೆಸುವಂತೆ ಪೊಲೀಸರು ಸೂಚಿಸಿದರೂ, ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ, ಬಲವಂತವಾಗಿ ಗೇಟ್ ತೆರೆಯಿಸಿ ಕಚೇರಿಯ ಮುಖ್ಯ ದ್ವಾರಕ್ಕೆ ನುಗ್ಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪುನೀತ್ ರಾಜ್ ಕಾಮತಗಿ ಹಾಗೂ ಕ್ರೀಡಾಪಟು ಲೋಕೇಶ್ ರಾಠೋಡ್ ಇನ್ನಿತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಲೋಕೇಶ್ ರಾಠೋಡ್ ಮತ್ತು ಪುನೀತ್ ರಾಜ್ ಕಾಮತಗಿ. -
ಯಾದಗಿರಿ: ನಗರದ ಸುಭಾಷ್ ಚೌಕದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಡೆಸಿದ ಪ್ರತಿಭಟನಾ ಮೆರವಣಿಗೆ (Yadgir Protest) ವೇಳೆ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡಿ, ಕರ್ತವ್ಯ ನಿರತ ಸರ್ಕಾರಿ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ಪುನೀತ್ ರಾಜ್ ಕಾಮತಗಿ ಹಾಗೂ ಕ್ರೀಡಾಪಟು ಲೋಕೇಶ್ ರಾಠೋಡ್ ಇನ್ನಿತರರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲ್ಯಾಣ ಕರ್ನಾಟಕ ಯೂತ್ ಅಸೋಸಿಯೇಷನ್ ಸಂಘಟನೆ ವತಿಯಿಂದ ಪುನೀತ್ ರಾಜ್ ಕಾಮತಗಿ ಅವರ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ 10 ಗಂಟೆಯಿಂದ 18–20 ಮಂದಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿ ಗೇಟ್ ಬಳಿ ಆಗಮಿಸಿದರು. ಶಾಂತವಾಗಿ ಪ್ರತಿಭಟನೆ ನಡೆಸುವಂತೆ ಪೊಲೀಸರು ಸೂಚಿಸಿದರೂ, ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ, ಬಲವಂತವಾಗಿ ಗೇಟ್ ತೆರೆಯಿಸಿ ಕಚೇರಿಯ ಮುಖ್ಯ ದ್ವಾರಕ್ಕೆ ನುಗ್ಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರಿಂದ ಸಾರ್ವಜನಿಕರು ಹಾಗೂ ಸರಕಾರಿ ನೌಕರರಿಗೆ ಕಚೇರಿಗೆ ತೆರಳಲು ಅಡಚಣೆ ಉಂಟಾಯಿತು ಎನ್ನಲಾಗಿದೆ.
ಮಧ್ಯಾಹ್ನ 1.20ರ ಸುಮಾರಿಗೆ ಜಿಲ್ಲಾಧಿಕಾರಿಗಳು ಪ್ರತಿಭಟನಾಕಾರರ ಮನವಿ ಸ್ವೀಕರಿಸಲು ಮುಂದಾದಾಗ, ಅವರಿಗೆ ವಿರೋಧವಾಗಿ ಮಾತನಾಡಿ ಮನವಿ ನೀಡದೇ ಪ್ರತಿಭಟನೆ ಮುಂದುವರಿಸಲಾಗಿದೆ. ಈ ವೇಳೆ ಪುನೀತ್ ರಾಜ್ ಕಾಮತಗಿ ಅವರು ಒಬ್ಬ ಯುವಕನಿಗೆ ಹಣ ನೀಡಿ ಪೆಟ್ರೋಲ್ ತರಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಜಿಲ್ಲಾಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ ಹಾಗೂ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ ಎಂಬ ಆರೋಪವೂ ಮಾಡಲಾಗಿದೆ.
ಪ್ರತಿಭಟನೆಯ ಸಂದರ್ಭದಲ್ಲಿ ಆರೋಪಿಗಳು ಇತರರನ್ನು ಪ್ರಚೋದಿಸಿ, ಕರ್ತವ್ಯ ನಿರತ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡಿದ್ದಾರೆ ಎಂದು ಡಿಸಿ ಕಚೇರಿ ಸೆಕ್ಯುರಿಟಿ ಗಾರ್ಡ್ ಸುರೇಶ್ ಅವರು ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ನಗರ ಠಾಣೆಯಲ್ಲಿ ಗುನ್ನೆ ನಂ. 06/2026 ಅಡಿಯಲ್ಲಿ ಬಿಎನ್‌ಎಸ್–2023ರ ಕಲಂ 132, 226, 353(1)(ಬಿ) ಹಾಗೂ 190ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಲ್ಮೀಕಿ ಬ್ಯಾನರ್ ಕಿತ್ತುಹಾಕಿದ್ದೇ ಬಳ್ಳಾರಿ ದುರ್ಘಟನೆಗೆ ಕಾರಣ: ಕಾಂಗ್ರೆಸ್ ಸತ್ಯಶೋಧನಾ ಸಮಿತಿ ವರದಿ
ಪ್ರತಿಭಟನಾಗಾರರು ಸ್ಥಳಕ್ಕೆ ಜಿಲ್ಲಾಧಿಕಾರಿಯೇ ಬರಬೇಕೆಂದು ಹಠ ಹಿಡಿದು ನಿರಂತರವಾಗಿ ಅವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿದ ನಂತರವೂ ಸಮಾಧಾನಗೊಳ್ಳದ ಇವರು ಜಿಲ್ಲಾಧಿಕಾರಿಗಳನ್ನು ಕೆರಳಿಸುವಂತೆ ಮಾಡಿದ್ದರು ಎನ್ನಲಾಗಿದೆ ಹೀಗಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.