ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yadgir News: ಯಾದಗಿರಿಯಲ್ಲಿ ಜಲ ಜೀವನ್ ಮಿಷನ್ ಹೆಸರಲ್ಲಿ ಕೋಟ್ಯಂತರ ರೂ. ಅಕ್ರಮ; ಐವರ ವಿರುದ್ಧ ಎಫ್‌ಐಆರ್‌

Jal Jeevan Mission scam: ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಜೆಜೆಎಂ ಅವ್ಯವಹಾರ ನಡೆದಿದೆ. ನೀರಿನ ದಾಹ ನಿಗಿಸಬೇಕಾದ ಅಧಿಕಾರಿಗಳಿಂದಲೇ ಹಣ ಗುಳುಂ ಆಗಿದೆ. ಹೀಗಾಗಿ ಆರ್‌ಡಬ್ಲ್ಯುಎಸ್‌ ಇಇ ಸೇರಿ ಐವರ ವಿರುದ್ಧ ಯಾದಗಿರಿ ನಗರ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ.

ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಜಲ‌ ಜೀವನ್ ಮಿಷನ್ ಸ್ಕೀಮ್ ಹೆಸರಲ್ಲಿ ಕೋಟ್ಯಂತರ ರೂ.ಗಳ ಅಕ್ರಮ (Jal Jeevan Mission scam) ನಡೆದಿರುವುದು ಜಿಲ್ಲೆಯಲ್ಲಿ (Yadgir News) ಬೆಳಕಿಗೆ ಬಂದಿದೆ. ಕಾಮಗಾರಿ ಪೂರ್ಣಗೊಳ್ಳದೆಯೇ ಕೋಟಿ ಕೋಟಿ ಲೂಟಿ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಎಂಜಿನಿಯರ್‌, ಕಾಂಟ್ರ್ಯಾಕ್ಟರ್ ಸೇರಿ ಐವರ ವಿರುದ್ಧ ಯಾದಗಿರಿ ನಗರ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಜೆಜೆಎಂ ಅವ್ಯವಹಾರ ನಡೆದಿದೆ. ನೀರಿನ ದಾಹ ನಿಗಿಸಬೇಕಾದ ಅಧಿಕಾರಿಗಳಿಂದಲೇ ಹಣ ಗುಳುಂ ಆಗಿದೆ. ಹೀಗಾಗಿ ಆರ್‌ಡಬ್ಲ್ಯುಎಸ್‌ ಇಇ ಆನಂದ್‌, ಎಇ ಶ್ರೀನಿವಾಸ್, ಎಇಇ ಬನ್ನಪ್ಪ, ಗುತ್ತಿಗೆದಾರ ವೆಂಕಟರೆಡ್ಡಿ ಗುರುಸುಣಗಿ ಸೇರಿ ಐವರ ವಿರುದ್ಧ ಕೇಸ್ ದಾಖಲಾಗಿದೆ.



ಯಾದಗಿರಿ ಗ್ರಾಮೀಣ ಮತ್ತು ಕುಡಿಯುವ ನೀರು ನೈರ್ಮಲ್ಯ ಇಲಾಖೆಯಿಂದ ಮಹಾ ಲೂಟಿ ನಡೆದಿದೆ. ಗ್ರಾಮೀಣ ಭಾಗದಲ್ಲಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವುದು ಜಲ ಜೀವನ್‌ ಮಿಷನ್ ಯೋಜನೆ (ಜೆಜೆಎಂ) ಉದ್ದೇಶವಾಗಿದೆ. 2022-23ನೇ ಸಾಲಿನಲ್ಲಿ 4.11 ಕೋಟಿ ರೂ. ವೆಚ್ಚದ ಜೆಜೆಎಂ ಕಾಮಗಾರಿ ಆರಂಭಗೊಂಡಿತ್ತು. ನಾಯ್ಕಲ್ ಗ್ರಾಮದಲ್ಲಿ 1500 ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ. ಆದರೆ, ನಕಲಿ ದಾಖಲೆ ಸಲ್ಲಿಸಿ ಕೋಟ್ಯಂತರ ರೂ. ಪಂಗನಾಮ ಹಾಕಲಾಗಿದೆ.

ದಾಖಲೆಗಳಲ್ಲಿ 1,259 ಮನೆಗಳಿಗೆ ನಲ್ಲಿ ಸಂಪರ್ಕ ಎಂದು ವರದಿ ಸಲ್ಲಿಸಲಾಗಿದೆ. ಆದರೆ ವಾಸ್ತವದಲ್ಲಿ ಕೇವಲ 529 ಮನೆಗಳಿಗೆ ಮಾತ್ರನಲ್ಲಿ ನೀರಿನ ಸಂಪರ್ಕ ನೀಡಲಾಗಿದೆ. ಅಂದರೆ ಶೇ.35 ರಷ್ಟು ಮಾತ್ರ ಜೆಜೆಎಂ ಕಾಮಗಾರಿ ಮಾಡಲಾಗಿದೆ. ಇದಲ್ಲದೇ ಕಾಮಗಾರಿ ಮಾಡದೇ ಹೆಚ್ಚುವರಿ 1.90 ಕೋಟಿ ರೂ. ವಂಚನೆ ಎಸಗಲಾಗಿದೆ. ಎಲ್ಲಾ ಸೇರಿ 3.30 ಕೋಟಿ ರೂ. ಬಿಲ್ ಅನ್ನು ಪಾವತಿಸಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ | Irrigation Projects: ರಾಜ್ಯದ ನೀರಾವರಿ ಯೋಜನೆಗಳು, ಅನುದಾನಗಳ ಬಗ್ಗೆ ಬಿಜೆಪಿ ಸಂಸದರು ಬಾಯಿ ಬಿಡಬೇಕು: ಡಿಕೆಶಿ ಆಗ್ರಹ

ಇನ್ನು ಗ್ರಾಮದ ಹಲವು ಏರಿಯಾಗಳಲ್ಲಿ ಅರ್ಧಂಬರ್ಧ ಕಾಮಗಾರಿ ಮಾಡಲಾಗಿದ್ದು, ಕೆಲವು ಬಡಾವಣೆಗಳಲ್ಲಿ ಕಾಮಗಾರಿಯನ್ನೇ ಆರಂಭಿಸಿಲ್ಲ. ಇರುವ ಪರಿಸ್ಥಿತಿಯಲ್ಲೇ ಬಿಲ್ ಪಾವತಿಸಿಕೊಂಡು ಅಧಿಕಾರಿಗಳು, ಕಾಂಟ್ರಾಕ್ಟರ್ ವಂಚನೆ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸುಳ್ಳು ದೃಢೀಕರಣ ಪತ್ರ, ನಕಲಿ ವರದಿಗಳ ಆಧಾರದಲ್ಲಿ ಬಿಲ್ ಅನುಮೋದನೆಗೊಂಡಿದೆ. ಹೀಗಾಗಿ ಐವರ ವಿರುದ್ಧ ಕೇಸ್ ದಾಖಲಾಗಿದೆ.