ಯಾದಗಿರಿ: ರಾಜ್ಯ ಬಜೆಟ್ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗುವುದು ನಿಶ್ಚಿತ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ. ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಾರ್ಚ್ 6 ರಂದು ಬಜೆಟ್ ಮಂಡನೆ ಇದೆ. ಆ ಸಂದರ್ಭದಲ್ಲಿ ಶಾಸಕರ ಖರೀದಿ ಬಗ್ಗೆ ಕುದುರೆ ವ್ಯಾಪಾರ ಆಗಲಿದೆ ಎಂದು ತಿಳಿಸಿದ್ದಾರೆ.
ಬಜೆಟ್ ಅಧಿವೇಶನದಲ್ಲಿ ಎಲ್ಲಾ ಶಾಸಕರು ಒಂದೆಡೆ ಕುಳಿತುಕೊಳ್ಳುತ್ತಾರೆ. ಆವಾಗ ಕುದುರೆ ವ್ಯಾಪಾರ ಶುರುವಾಗುತ್ತದೆ. 25, 50 ಕೋಟಿ ಕೊಡುತ್ತೇವೆ, ಬೆಂಗಳೂರಿನಲ್ಲಿ ಮೂರು ಬೇಡ್ ರೂಮ್‌ನ ಮನೆ ಕೊಡುತ್ತೇವೆ, ಒಳ್ಳೆಯ ಕಾರು ಕೊಡುತ್ತೇವೆ ಎಂದು ವ್ಯಾಪಾರ ಶುರುವಾಗುತ್ತದೆ. ಈ ಮೂಲಕ ಸರ್ಕಾರ ಪತನವಾಗುತ್ತೆ. ಆದರೆ, ಸಿದ್ದರಾಮಯ್ಯ ಅವರು ಪೂರ್ಣಾವಧಿ ಅಧಿಕಾರ ಪೂರೈಸಬೇಕೆಂದು ನಾನು ಹೇಳುತ್ತೇನೆ. ಸಿಎಂ ಆಗಿ ಸಿದ್ದರಾಮಯ್ಯ ಅಥವಾ ಡಿಕೆಶಿ ಯಾರೇ ಇರಲಿ ನಮಗೆ ಸಂಬಂಧವಿಲ್ಲ, ಅವರ ಸರ್ಕಾರ ಐದು ವರ್ಷ ಇರಲಿ ಎಂದು ಹೇಳಿದ್ದಾರೆ.
2028ಕ್ಕೆ ಚುನಾವಣೆ ಬರಬೇಕೆಂದು ನನ್ನ ಅಭಿಪ್ರಾಯ. ಯಾರು ಸಿಎಂ ಆಗಬೇಕು ಎಂಬುವುದು ಜನರಿಗೆ ಬಿಟ್ಟದ್ದು. ಅಪ್ಪ, ಮಕ್ಕಳು ಕೂಡಿ ದೆಹಲಿಯಲ್ಲಿ ಹೋಗಿ, ನನ್ನ ಮಗನಿಗೆ ಸಿಎಂ ಮಾಡಿ ಅಂದರೆ ಕೇಳುವುದಿಲ್ಲ. ಮೋದಿ ಅವರನ್ನು ಪಿಎಂ ಮಾಡಿದ್ದು ಜನ, ಮುಂದೆ ಕರ್ನಾಟಕ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದೂ ರಾಜ್ಯದ ಜನರೇ, ಯಾರೋ ಅಪ್ಪ, ಮಕ್ಕಳು ಅಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪ-ವಿಜಯೇಂದ್ರ ವಿರುದ್ಧ ಹರಿಹಾಯ್ದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರೇ ತಮಗೆ ಒಳಸಂಚು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರಿಗೆ ಒಳಸಂಚು ಯಾರು ಮಾಡುತ್ತಾರೆ? ಬಿಜೆಪಿಯವರು ಮಾಡುತ್ತಿದ್ದಾರಾ?, ಅಪ್ಪ-ಮಕ್ಕಳದ್ದು ರಗಡ ಆಗಿದೆ, ಎಚ್‌ಡಿಕೆ ಅವರ ಗದ್ದಲದಲ್ಲಿ ಅವರು ಇದ್ದಾರೆ. ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಾರ್ಟಿಯಲ್ಲಿಯೇ ಒಳ ಸಂಚು ಮಾಡುತ್ತಿದ್ದಾರೆ. ಡಿಕೆಶಿ ಅವರು ಎರಡೂವರೆ ವರ್ಷ ಸಿಎಂ ಆಗಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲ್ಲ, ರಾಜ್ಯದಲ್ಲಿ ಸಿದ್ದರಾಮಯ್ಯ ಅವರದೇ ಕೊನೇ ಸರ್ಕಾರ. ಮುಂದೆ ಎಂದೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಶಾಸಕರನ್ನು ವಿದೇಶಕ್ಕೆ ಕಳುಹಿಸಿದ್ದಾರೆ, ಅವರಿಗೆ ಕೆಲಸವಿಲ್ಲ. ಶಾಸಕರಿಗೆ ಅನುದಾನ ಕೊಡುತ್ತಿಲ್ಲ. ಹೀಗಿದ್ದರೆ ಅವರು ಏನು ಮಾಡಬೇಕು ಎಂದು ವ್ಯಂಗ್ಯವಾಡಿದ್ದಾರೆ.
ನಾವು ಜೆಡಿಎಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ
ಬಂಡಾಯ ಶಾಸಕರಿಗೆ ಜೆಡಿಎಸ್‌ನಿಂದ ಟಿಕೆಟ್ ಆಫರ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾವು ಜೆಡಿಎಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ. ಕುಮಾರಸ್ವಾಮಿ ಅವರಿಗೆ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ಮಾಡಬೇಕಂತಿದೆ. ನಾವು ಯಾವ ಕಾಲಕ್ಕೂ ಜೆಡಿಎಸ್‌ಗೆ ಹೋಗೋದಿಲ್ಲ, ಇದು ನನ್ನ ವೈಯಕ್ತಿಕ ಹೇಳಿಕೆ ಎಂದು ತಿಳಿಸಿದ್ದಾರೆ.
ನಾನಾಗಲೀ, ರಮೇಶ್ ಜಾರಕಿಹೊಳಿ ಆಗಲಿ ಜೆಡಿಎಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ, ನಮಗೆ ಬಿಜೆಪಿ ರಿಪೇರಿ ಮಾಡಬೇಕೆನ್ನುವ ಉದ್ದೇಶ ಇದೆ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಇದೆ, ಈ ಮೈತ್ರಿ ಮುಂದುವರಿಯಬೇಕು ಅನ್ನೋರು ನಾವು.
ಕುಮಾರಸ್ವಾಮಿ ಹಾಗೂ ದೇವೇಗೌಡರು ಒಂದು ಶಕ್ತಿ, ಬಿಜೆಪಿ ಒಂದು ಶಕ್ತಿ. ಕುಮಾರಸ್ವಾಮಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಕ್ಕೆ ನಮಗೆ ತುಮಕೂರು ಗೆಲ್ಲೋಕೆ ಆಗಿದೆ. ಮೈಸೂರು, ಕೋಲಾರ ಬೆಂಗಳೂರು ಗ್ರಾಮಾಂತರ ಹಾಗೂ ಚಿತ್ರದುರ್ಗ ಗೆಲ್ಲೋಕೆ ಆಗಿದೆ. ಇದಕ್ಕೆ ನೇರವಾಗಿ ಕುಮಾರಸ್ವಾಮಿ ಹಾಗೂ ದೇವಗೌಡರ ಸಹಕಾರವಿದೆ. ಪೂಜ್ಯ ತಂದೆ ಯಡಿಯೂರಪ್ಪ ಅವರಿಗೆ ಜೆಡಿಎಸ್‌ನ ದೂರ ಸರಿಸಬೇಕು ಎಂಬ ಆಸೆಯಿದೆ, ಆದ್ರೆ ಮೋದಿ, ಅಮಿತ್ ಶಾ ಇದಕ್ಕೆ ಒಪ್ಪೋದಿಲ್ಲ. ಈ ರಾಜ್ಯದಲ್ಲಿ ಜೆಡಿಎಸ್- ಬಿಜೆಪಿ ಸರ್ಕಾರ ಆಗುತ್ತೆ, ಇಲ್ಲವೆಂದರೆ ಜೆಡಿಎಸ್-ಜೆಸಿಬಿ ಸರ್ಕಾರ ಆಗುತ್ತೆ ಎಂದ ಯತ್ನಾಳ ಎಂದು ತಿಳಿಸಿದ್ದಾರೆ.