ಯಾದಗಿರಿ: ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಜನ ಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ಕೃಷ್ಣಾ ನದಿಯಲ್ಲಿ 200ಕ್ಕೂ ಅಧಿಕ ಕುರಿಗಳು ಕೊಚ್ಚಿ ಹೋದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮೇಲಿನಗಡ್ಡಿ ಬಳಿ ನಡೆದಿದೆ. ನೆನ್ನೆ ಕುರಿ ಮೇಯಿಸಲು ನದಿಯ ನಡುಗಡ್ಡೆಗೆ ಕುರಿಗಾಹಿಗಳು ಹೋಗಿದ್ದರು. ಈ ವೇಳೆ ಬಸವಸಾಗರ ಡ್ಯಾಂನಿಂದ ನೀರು ಬಿಟ್ಟಿದ್ದರಿಂದ ನಡುಗಡ್ಡೆಯಲ್ಲಿದ್ದ ಕುರಿಗಳು ಕೊಚ್ಚಿ ಹೋಗಿವೆ.
ಮೇಲಿಮಗಡ್ಡಿ ಹಾಗೂ ಜಂಗಿನಗಡ್ಡಿ ಗ್ರಾಮದ ಆರು ಕುರಿಗಾಹಿಗಳು ಕುರಿಗಳನ್ನು ಮೇಯಿಸಲು ಬಂದಿದ್ದರು. ನಾಗಪ್ಪ, ಮಾಳಪ್ಪ, ಶಾವಮ್ಮ, ಚಂದನಗೌಡ, ಗದ್ದೆಪ್ಪ ಹಾಗೂ ಶಿವಯ್ಯ ಎಂಬುವವರ ಕುರಿಗಳು ಕೊಚ್ಚಿ ಹೋಗಿವೆ. ಸ್ಥಳಕ್ಕೆ ಕಂದಾಯ ಹಾಗೂ ಪಶು ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕುರಿಗಳನ್ನು ಕಳೆದುಕೊಂಡು ಕುರಿಗಾಹಿಗಳು ಕಂಗಾಲಾಗಿದ್ದಾರೆ.
ಧಾರಾಕಾರ ಮಳೆಗೆ ಯರಗೋಳ ಸೇತುವೆ ಜಲಾವೃತ; ಜನರ ಪರದಾಟ
ಯಾದಗಿರಿ: ಜಿಲ್ಲಾದ್ಯಂತ ಗುರುವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಸತತ ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದ್ದು, ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಇನ್ನು ಯಾದಗಿರಿ ತಾಲೂಕಿನ ಯರಗೋಳ ಗ್ರಾಮದಲ್ಲಿ ಕೆರೆತುಂಬಿ ಸೇತುವೆ ಜಲಾವೃತವಾಗಿ ಜನ, ಜಾನುವಾರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪ್ರತಿವರ್ಷ ಯರಗೋಳ ಗ್ರಾಮದ ದೊಡ್ಡ ಕೆರೆಯ ಕೆಳಭಾಗದಲ್ಲಿ ಮಳೆ ಬಂದರೆ ಸಾಕು ಸೇತುವೆ ಜಲಾವೃತವಾಗಿ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು. ಹೀಗಾಗಿ ಶೀಘ್ರ ಸೇತುವೆ ದುರಸ್ತಿ ಮಾಡಿ, ಹಳ್ಳ ಕೊಳ್ಳಗಳ ಹೂಳೆತ್ತಿ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ ಮದ್ನಾಳ್ ಆಗ್ರಹಿಸಿದ್ದಾರೆ.