ಯಾದಗಿರಿ: ರಾಜ್ಯಾದ್ಯಂತ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ) ಭಾನುವಾರ ನಡೆದಿದೆ. ಈ ಹಿಂದೆ ಹಲವು ಪರೀಕ್ಷಾ ಅಕ್ರಮಗಳು ನಡೆದಿರುವ ಹಿನ್ನೆಲೆಯಲ್ಲಿ ಕಠಿಣ ನಿಯಮಾವಳಿಯೊಂದಿಗೆ ಪರೀಕ್ಷೆ ನಡೆಸಲಾಗಿದೆ. ಇನ್ನು ಟಿಇಟಿ ಪರೀಕ್ಷೆ (Karnataka TET 2025) ವೇಳೆ ಮಹಿಳಾ ಅಭ್ಯರ್ಥಿಗಳ ಕಿವಿ ಓಲೆ, ಕಾಲುಂಗುರ, ಕಾಲ್ಗೆಜ್ಜೆ, ಬಳೆ ತೆಗೆಸಿರುವುದು ಕಂಡುಬಂದಿದ್ದು, ಇದಕ್ಕೆ ಪರೀಕ್ಷಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ಯಾದಗಿರಿ ನಗರದ ನಿವೇದಿತಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಟಿಇಟಿ ಪರೀಕ್ಷೆಗೆ ಬಂದ ಮಹಿಳಾ ಪರೀಕ್ಷಾರ್ಥಿಗಳ ಕಿವಿ ಓಲೆ, ಕಾಲುಂಗುರ, ಬಳೆ, ಮೂಗುತಿ, ಕಾಲ್ಗೆಜ್ಜೆಗಳನ್ನು ಸಿಬ್ಬಂದಿ ತೆಗೆಸಿದ್ದಾರೆ. ಪರೀಕ್ಷಾರ್ಥಿಗಳು ತಾವು ಧರಿಸಿದ್ದ ಆಭರಣಗಳನ್ನು ತೆಗೆದ ನಂತರವೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಕಟ್ಟುನಿಟ್ಟಿನ ನಿಯಮಗಳ ಬಗ್ಗೆ ಅನೇಕ ಪರೀಕ್ಷಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರೀಕ್ಷೆಗಳಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಮಂಗಳಸೂತ್ರ ಮತ್ತು ಕಾಲುಂಗುರ ಧರಿಸಲು ವಿನಾಯಿತಿ ಇದೆ. ಆದರೆ, ಕಾಲುಂಗುರಗಳನ್ನೂ ತೆಗೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಎಲ್ಲಾ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳಿಗೆ ವಸ್ತ್ರಸಂಹಿತೆ ಇರುತ್ತದೆ. ತುಂಬು ತೋಳಿನ ವಸ್ತ್ರಗಳು, ಶೂ ಧರಿಸಬಾರದು ಎಂಬುವುದು ಸೇರಿ ವಿವಿಧ ನಿರ್ಬಂಧಗಳಿವೆ. ಈ ನಿಯಮಗಳನ್ನು ಪರೀಕ್ಷಾರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕಾಗಿರುತ್ತದೆ. ಮಹಿಳಾ ಅಭ್ಯರ್ಥಿಗಳಿಗೆ ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಯಾವುದೇ ಲೋಹದ ಆಭರಣಗಳನ್ನು ಧರಿಸಲು ಅನುಮತಿ ಇರುವುದಿಲ್ಲ.
ಎಸ್ಸೆಸ್ಸೆಲ್ಸಿ- ದ್ವಿತೀಯ ಪಿಯುಸಿಗೆ ಇನ್ನು ಎರಡೇ ಬಾರಿ ಪರೀಕ್ಷೆ, 3ನೇ ಪರೀಕ್ಷೆಗೆ ಬೈ
ಈ ಹಿಂದೆ ಕೆಲ ಪರೀಕ್ಷೆಗಳಲ್ಲಿ ಮಂಗಳಸೂತ್ರ ಮತ್ತು ಕಾಲುಂಗುರ ತೆಗೆಸಿದ್ದರಿಂದ ರಾಜ್ಯ ಸರ್ಕಾರದ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ನಂತರ ಮಂಗಳಸೂತ್ರ ಮತ್ತು ಕಾಲುಂಗುರಕ್ಕೆ ವಿನಾಯಿತಿ ನೀಡಲಾಗಿತ್ತು. ಇದಕ್ಕೆ ಸಂಬಂಧಿಸಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಕೆಪಿಎಸ್‌ಸಿ, ಕೆಇಎ ಈಗಾಗಲೇ ವಸ್ತ್ರ ಸಂಹಿತೆ ಕುರಿತು ಸುತ್ತೋಲೆ ಹೊರಡಿಸಿವೆ.