ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನ ಬಸವನಗರ ಗ್ರಾಮದ ಕ್ವಾರಿಯಲ್ಲಿ ಬಿದ್ದು ಇಬ್ಬರು ಬಾಲಕಿಯರು ಹಾಗೂ ಮಹಿಳೆಯೊಬ್ಬರು ಮೃತಪಟ್ಟಿರುವ ದುರ್ಘಟನೆ (Yadgir News) ಭಾನುವಾರ ಸಂಜೆ ನಡೆದಿದೆ. ವಡಗೇರಾ ತಾಲೂಕಿನ ಬಸವನಗರ ಗ್ರಾಮದ ಸಮೀಪದ ಮರಮ್ ಕ್ವಾರಿ ಪ್ರದೇಶದಲ್ಲಿ ದುರ್ಘಟನೆ ಸಂಭವಿಸಿದ್ದು, ಗುಂಡಮ್ಮ (35), ಸುಜಾತ (9) ಹಾಗೂ ಶಿವಲೀಲಾ (10) ಮೃತರು.
ಬಾಲಕಿಯರು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಭಾನುವಾರ ರಜೆ ಇದ್ದ ಕಾರಣ ಬಾಲಕಿಯರು ಬಟ್ಟೆ ತೊಳೆಯಲು ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
ಘಟನೆ ನಡೆದಿದ್ದು ಹೇಗೆ?
ಗ್ರಾಮದಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಬಟ್ಟೆ ತೊಳೆಯಲು ಮೂವರು ಮರಮ್ ಕ್ವಾರಿ ಬಳಿ ತೆರಳಿದ್ದರು. ಈ ವೇಳೆ ಬಾಲಕಿಯರಾದ ಸುಜಾತ ಮತ್ತು ಶಿವಲೀಲಾ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಗುಂಡಮ್ಮ ನೀರಿಗೆ ಧುಮುಕಿದರೂ, ಮೂವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮರಮ್ ಕ್ವಾರಿ ಆಳವಾಗಿದ್ದು, ನೀರಿನಲ್ಲಿ ಕಾಲು ಜಾರಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಗ್ರಾಮದಲ್ಲಿ ಸಮರ್ಪಕ ಕುಡಿಯುವ ಹಾಗೂ ಬಳಕೆಯ ನೀರಿನ ವ್ಯವಸ್ಥೆ ಇಲ್ಲದಿರುವುದು ಕೂಡ ಪರೋಕ್ಷವಾಗಿ ಈ ದುರಂತಕ್ಕೆ ಕಾರಣ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಂದೇ ಗ್ರಾಮದ ಮೂವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಬಸವನಗರ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬಳ್ಳಾರಿಯಲ್ಲಿ ಪಾರ್ಟಿಗೆ ಹೋಗಿದ್ದ ಮಹಿಳೆ ಅನುಮಾನಾಸ್ಪದ ಸಾವು
ಬಳ್ಳಾರಿ: ಸ್ನೇಹಿತರು ಮತ್ತು ಸಹೋದ್ಯೋಗಿಗಳ ಜತೆ ಪಾರ್ಟಿಗೆ ಹೋಗಿದ್ದ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಬಳ್ಳಾರಿಯ ಹಂದ್ರಾಳ್ ಹಳ್ಳದಲ್ಲಿ ಮೃತದೇಹ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಬಳ್ಳಾರಿಯ ಕೌಲ್ ಬಜಾರ್ ನಿವಾಸಿ ಅನಿಷಾ ಫಾತೀಮಾ (38) ಎಂದು ಗುರುತಿಸಲಾಗಿದೆ. ಈಕೆ ಪ್ರಗತಿ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದರು.
ಶನಿವಾರ (ಜೂ.6) ರಾತ್ರಿ ಬ್ಯಾಂಕ್ ಸಿಬ್ಬಂದಿಯೊಂದಿಗೆ ಪಾರ್ಟಿಗೆ ಹೋಗಿದ್ದರು. ಬಳಿಕ ರಾತ್ರಿ 11 ಗಂಟೆಗೆ ತಮ್ಮ ಪತಿಗೆ ಕರೆ ಮಾಡಿದ್ದಾರೆ. ನಂತರ ಅನಿಷಾ ಫಾತೀಮಾ ಸಂಪರ್ಕಕ್ಕೆ ಸಿಕ್ಕಿಲ್ಲ. ಬೆಳಗ್ಗೆ ಹಳ್ಳದ ಪಕ್ಕದ ಜಾಲಿ ಬೇಲಿಯಲ್ಲಿ ಬೆತ್ತೆಲೆ ಸ್ಥಿತಿಯಲ್ಲಿ ಮಹಿಳೆಯ ಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಎಪಿಎಂಸಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಅಂದ್ರಾಳ ಹಳ್ಳ ತುಂಬಿ ಹರಿಯುತ್ತಿತ್ತು. ಹೀಗಾಗಿ ನೀರಿನ ರಭಸಕ್ಕೆ ಸ್ಕೂಟಿ ಸಮೇತ ಮಹಿಳೆ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಸ್ಕೂಟಿ ಒಂದು ಕಡೆ ಮತ್ತು ಮೃತದೇಹ ಮತ್ತೊಂದು ಕಡೆ ಪತ್ತೆಯಾಗಿದೆ. ನಮ್ಮ ಮನೆ ಹೆಣ್ಣು ಮಗಳಿಗೆ ಆದ ತೊಂದರೆ ಇನ್ನೊಬ್ಬರಿಗೆ ಆಗಬಾರದು. ಘಟನೆಯ ಬಗ್ಗೆ ತನಿಖೆ ಮಾಡಬೇಕೆಂದು ಮೃತ ಮಹಿಳೆಯ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.