ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Yadgir News: ಸಾಲಬಾಧೆಗೆ ಒಂದೇ ದಿನ ಕೆಂಭಾವಿ ವಲಯದಲ್ಲಿ ಇಬ್ಬರು ರೈತರ ಆತ್ಮಹತ್ಯೆ!

ಒಂದೇ ದಿನ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೃಷಿ ವಲಯದಲ್ಲಿ ಆತಂಕ ಮೂಡಿಸಿದೆ. ಕೆಂಭಾವಿ ಪಟ್ಟಣ ಸಮೀಪದ ಚಿಂಚೋಳಿ ಗ್ರಾಮದ ಸಿದ್ದಪ್ಪ ಹಾಗೂ ಚಿಂಚೋಳಿ ಪಕ್ಕದ ಯಕ್ತಾಪುರ ಗ್ರಾಮದ ರೈತ ಮಡಿವಾಳಪ್ಪ ನಾಯ್ಕೋಡಿ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯಾದಗಿರಿ: ಸಾಲದ ಬಾಧೆ ತಾಳಲಾರದೆ ಒಂದೇ ದಿನ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ (Yadgir News) ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ಕೆಂಭಾವಿ ಪಟ್ಟಣ ಸಮೀಪದ ಚಿಂಚೋಳಿ ಗ್ರಾಮದ ಸಿದ್ದಪ್ಪ (52) ಅವರು ಸಾಲಬಾಧೆಯಿಂದ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೈತ ಸಿದ್ದಪ್ಪ ಚಿಂಚೋಳಿ ಗ್ರಾಮದಲ್ಲಿ 2 ಎಕರೆ 5 ಗುಂಟೆ ಜಮೀನಿದ್ದು, ಬ್ಯಾಂಕ್‌ನಲ್ಲಿ 1.5 ಲಕ್ಷ ರೂ. ಹಾಗೂ ಖಾಸಗಿಯಾಗಿ 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಮೃತರಿಗೆ ಇಬ್ಬರು ಮಕ್ಕಳಿದ್ದಾರೆ.

ಇನ್ನೊಂದು ಘಟನೆಯಲ್ಲಿ ಚಿಂಚೋಳಿ ಪಕ್ಕದ ಯಕ್ತಾಪುರ ಗ್ರಾಮದ ರೈತ ಮಡಿವಾಳಪ್ಪ ನಾಯ್ಕೋಡಿ (45) ಅವರು ಸಾಲದ ಬಾಧೆ ತಾಳಲಾರದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಸುಮಾರು 8 ಲಕ್ಷ ರು. ಸಾಲವಿತ್ತು ಎನ್ನಲಾಗಿದ್ದು, ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

ಒಂದೇ ದಿನ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೃಷಿ ವಲಯದಲ್ಲಿ ಆತಂಕ ಮೂಡಿಸಿದೆ. ಬೆಳೆ ನಷ್ಟ, ಸಾಲದ ಹೊರೆ ಹಾಗೂ ಆರ್ಥಿಕ ಸಂಕಷ್ಟದಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿರುವುದು ಮತ್ತೊಮ್ಮೆ ಅನ್ನದಾತನ ಬದುಕಿನಲ್ಲಿ ಬರದ ಹೊಡೆತದ ಪೆಟ್ಟು ಮೇಲೆ ಎಳೆದಂತೆ ಮಾಡಿದೆ. ಈ ಎರಡೂ ಘಟನೆಗಳಿಗೆ ಸಂಬಂಧಿಸಿದಂತೆ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.