ಬ್ರೆಜಿಲ್: ಬ್ರೆಜಿಲ್‌ನ (Brazil) ದಕ್ಷಿಣದ ಸಾಂತಾ ಕತಾರಿನಾ ಪ್ರದೇಶದಲ್ಲಿ ಶನಿವಾರ 21 ಜನರನ್ನು ಹೊತ್ತೊಯ್ಯುತ್ತಿದ್ದ ಹಾಟ್ ಏರ್ ಬಲೂನ್ ಗೆ (Hot Air Balloon) ಬೆಂಕಿ (Fire) ತಗುಲಿ ಕನಿಷ್ಠ 8 ಮಂದಿ ಮೃತಪಟ್ಟಿದ್ದು, 13 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಾಂತಾ ಕತಾರಿನಾದ ಮಿಲಿಟರಿ ಫೈರ್ ಬ್ರಿಗೇಡ್ ತಿಳಿಸಿದ್ದಾರೆ. “ಪ್ರಿಯಾ ಗ್ರಾಂಡೆಯಲ್ಲಿ ಶನಿವಾರ ಬೆಳಿಗ್ಗೆ ನಡೆದ ಬಲೂನ್ ದುರಂತದಿಂದ ನಾವೆಲ್ಲರೂ ಆಘಾತಕ್ಕೊಳಗಾಗಿದ್ದೇವೆ. ನಮ್ಮ ರಕ್ಷಣಾ ತಂಡ ಸ್ಥಳದಲ್ಲಿದೆ. ಇದುವರೆಗೆ 8 ಮಂದಿಯ ಸಾವು ಮತ್ತು 2 ಜನರ ಜೀವ ಉಳಿಸಿದ ಸುದ್ದಿ ದೃಢಪಟ್ಟಿದೆ” ಎಂದು ಸ್ಥಳೀಯ ಗವರ್ನರ್ ಜೊರ್ಗಿನ್ಹೊ ಮೆಲ್ಲೊ ಎಕ್ಸ್‌ನಲ್ಲಿ ಹೇಳಿದ್ದಾರೆ.
ವೈರಲಾಗ್ತಿರುವ ವಿಡಿಯೊ ಇಲ್ಲಿದೆ
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವೊಂದರಲ್ಲಿ, ಬಲೂನ್ ಆಕಾಶದಲ್ಲಿ ಬೆಂಕಿಗೆ ತುತ್ತಾಗುವ ದೃಶ್ಯ ಕಂಡುಬಂದಿದೆ. ಬೆಂಕಿಯಿಂದ ಬಲೂನ್ ಕರಗತೊಡಗಿ ನಂತರ ನೆಲಕ್ಕೆ ಬಿದ್ದ ದೃಶ್ಯವೂ ದಾಖಲಾಗಿದೆ. ಬಲೂನ್‌ನಿಂದ ಹೊಗೆಯಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ.
ವರದಿಯ ಪ್ರಕಾರ, ಕಳೆದ ಭಾನುವಾರ ಸಾವೊ ಪಾಲೊ ರಾಜ್ಯದಲ್ಲಿ ಇದೇ ರೀತಿಯ ದುರಂತವೊಂದು ಸಂಭವಿಸಿತ್ತು. ಆಗ ಬಲೂನ್ ಪತನಗೊಂಡು 27 ವರ್ಷದ ಮಹಿಳೆ ಮೃತಪಟ್ಟಿದ್ದು, 11 ಜನರು ಗಾಯಗೊಂಡಿದ್ದರು. ಈ ಘಟನೆಯಿಂದ ಸ್ಥಳೀಯ ಜನತೆಯಲ್ಲಿ ಆತಂಕ ಮನೆಮಾಡಿದ್ದು, ಬಲೂನ್ ಸವಾರಿಯ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ. ಅಧಿಕಾರಿಗಳು ತನಿಖೆ ಆರಂಭಿಸಿದ್ದು, ದುರಂತದ ಕಾರಣಗಳನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿದ್ದಾರೆ.