Indigo Airlines: 83 ವರ್ಷದ ವೃದ್ಧೆಗೂ ಸಿಗದ ವ್ಹೀಲ್‌ಚೇರ್; ಏರ್ ಇಂಡಿಯಾ ಬಳಿಕ ಇಂಡಿಗೋ ಏರ್‌ಲೈನ್ಸ್‌ನಿಂದ ಎಡವಟ್ಟು
Indigo Airlines: 83 ವರ್ಷದ ಮಹಿಳೆಗೆ ವ್ಹೀಲ್‌ಚೇರ್ ನೀಡದೆ ಇಂಡಿಗೋ ಏರ್‌ಲೈನ್ಸ್ ಎಡವಟ್ಟು ಮಾಡಿಕೊಂಡಿರುವ ಘಟನೆ ದಿಲ್ಲಿಯಲ್ಲಿ ನಡೆದಿದೆ. ಮಹಿಳೆಯ ಅಳಿಯ ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಇಂಡಿಗೋ ಟಿಕೆಟ್ ಬುಕ್ಕಿಂಗ್ ವೇಳೆ ವ್ಹೀಲ್‌ಚೇರ್ ಉಲ್ಲೇಖಿಸಿರಲಿಲ್ಲ ಎಂದು ತಿಳಿಸಿದೆ.

ಇಂಡಿಗೋ ಏರ್‌ಲೈನ್.

ಹೊಸದಿಲ್ಲಿ: ಮಾ. 4ರಂದು ಏರ್ ಇಂಡಿಯಾ (Air India) ಸಿಬ್ಬಂದಿಯಿಂದ ವ್ಹೀಲ್‌ಚೇರ್ (Wheelchair) ಸೌಲಭ್ಯ ನಿರಾಕರಿಸಲ್ಪಟ್ಟ ಕಾರಣ 82 ವರ್ಷದ ವೃದ್ಧೆಯೊಬ್ಬರು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ಮರೆಯಾಗುವ ಮುನ್ನ ಅಂತಹದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಈ ಬಾರಿ 83 ವರ್ಷದ ಮಹಿಳೆಗೆ ವ್ಹೀಲ್‌ಚೇರ್ ನೀಡದೆ ಇಂಡಿಗೋ ಏರ್‌ಲೈನ್ಸ್ (Indigo Airlines) ಎಡವಟ್ಟು ಮಾಡಿಕೊಂಡಿದೆ. ದಿಲ್ಲಿ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮಾ. 5ರಂದು 6ಇ 5061 (6E 5061) ವಿಮಾನದಲ್ಲಿ ಭುವನೇಶ್ವರದಿಂದ ದಿಲ್ಲಿಗೆ ತೆರಳಿದ್ದ ಸುಸಾಮಾ ರಥ್ ಎನ್ನುವ ವೃದ್ಧೆಗೆ ಈ ಕಹಿ ಅನುಭವವವಾಗಿದೆ.
ಮಹಿಳೆಯ ಅಳಿಯ ಡಾ.ಬಿಷ್ಣು ಪ್ರಸಾದ್ ಪಾಣಿಗ್ರಹಿ ಎನ್ನುವವರು ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ದಿಲ್ಲಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಏರ್‌ಲೈನ್ಸ್ ತಮ್ಮ ಅತ್ತೆಗೆ ವ್ಹೀಲ್‌ಚೇರ್ ಒದಗಿಸಲು ವಿಫಲವಾಗಿದೆ ಎಂದು ತಿಳಿಸಿದ್ದಾರೆ.
Dr Panigrahi, we'd like to extend our deepest gratitude for allowing us to address this on the call. As discussed, a wheelchair needs to be pre-booked at least 48 hrs prior to the departure, however, no wheelchair was added to the booking. (1/2)
— IndiGo (@IndiGo6E) March 9, 2025
ಟಿಕೆಟ್ ಬುಕ್ಕಿಂಗ್ ಮಾಡುವಾಗ ವ್ಹೀಲ್‌ಚೇರ್‌ಗಾಗಿ ಮನವಿ ಸಲ್ಲಿಸಿದ್ದರೂ, ಇಂಡಿಗೋ ಅದನ್ನು ಒದಗಿಸಲು ವಿಫಲವಾಗಿದೆ. ಇದರಿಂದಾಗಿ ರಥ್ ವಿಮಾನ ನಿಲ್ದಾಣದ ಹೊರಗಿನ ತಮ್ಮ ವಾಹನಕ್ಕೆ ನಡೆದುಕೊಂಡೇ ಹೋಗಬೇಕಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Bengaluru- Ayodhya Flight: ಬೆಂಗಳೂರಿನಿಂದ ಅಯೋಧ್ಯೆಗೆ ನೇರ ಇಂಡಿಗೋ ವಿಮಾನ
ಡಾ.ಬಿಷ್ಣು ಪ್ರಸಾದ್ ಹೇಳಿದ್ದೇನು?
ʼʼನನ್ನ ಅತ್ತೆ, 83 ವರ್ಷದ ಸುಸಾಮಾ ರಥ್ ಮಾ. 5ರಂದು ಭುವನೇಶ್ವರದಿಂದ ದಿಲ್ಲಿಗೆ ಇಂಡಿಗೋ ಏರ್‌ಲೈನ್ಸ್‌ನ 6ಇ 5061 ವಿಮಾನದಲ್ಲಿ ತೆರಳಿದ್ದರು. ಟಿಕೆಟ್ ಬುಕ್ಕಿಂಗ್ ವೇಳೆ ವ್ಹೀಲ್‌ಚೇರ್‌ಗಾಗಿ ಮನವಿ ಸಲ್ಲಿಸಲಾಗಿತ್ತು. ಆದರೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ ವ್ಹೀಲ್‌ಚೇರ್ ಒದಗಿಸಲಿಲ್ಲ. ಕೊನೆಗೆ ಅವರು ನಿಲ್ದಾಣದಿಂದ ಹೊರಗೆ ನಿಂತಿರುವ ಕಾರಿನ ಬಳಿಗೆ ನಡೆದುಕೊಂಡೇ ಹೋಗಬೇಕಾಯಿತು. ಏರ್ ಇಂಡಿಯಾ ಮತ್ತು ಇಂಡಿಗೋ ಈಗ ಏಕಸ್ವಾಮ್ಯತ್ವದಿಂದ ವರ್ತಿಸುತ್ತಿವೆ. ಇವು ಗ್ರಾಹಕಸ್ನೇಹಿಯಾಗಿಲ್ಲ. ಕನಿಷ್ಠ ಹಿರಿಯ ನಾಗರಿಕರಿಗಾದರೂ ಸ್ವಲ್ಪ ಅನುಕಂಪ ತೋರಿ. ಇಂತಹ ಮನಸ್ಥಿತಿಗೆ ನಾಚಿಕೆಯಾಗಬೇಕುʼʼ ಎಂದಿದ್ದಾರೆ.
ಇಂಡಿಗೋ ಹೇಳಿದ್ದೇನು?
ಈ ಪೋಸ್ಟ್‌ಗೆ ಇಂಡಿಗೋ ಏರ್‌ಲೈನ್ಸ್ ಪ್ರತಿಕ್ರಿಯಿಸಿದೆ. ಪ್ರಯಾಣಕ್ಕಿಂತ ಕನಿಷ್ಠ 2 ದಿನಗಳಿಗಿಂತ ಮುಂಚಿತವಾಗಿ ವ್ಹೀಲ್‌ಚೇರ್ ಅನ್ನು ಬುಕ್ ಮಾಡಬೇಕು. ಅದೂ ಅಲ್ಲದೆ ರಥ್ ಅವರ ಬುಕ್ಕಿಂಗ್‌ನಲ್ಲಿ ವ್ಹೀಲ್‌ಚೇರ್ ಉಲ್ಲೇಖಿಸಿರಲಿಲ್ಲ ಎಂದಿದೆ. ಅದಾಗ್ಯೂ ಕ್ಷಮೆ ಕೋರಿರುವ ಇಂಡಿಗೋ ಏರ್‌ಲೈನ್ಸ್ ರಥ್ ಅವರ ಮುಂದಿನ ಪ್ರಯಾಣದ ವೇಳೆ ವ್ಹೀಲ್‌ಚೇರ್ ಒದಗಿಸುವುದಾಗಿ ಭರವಸೆ ನೀಡಿದೆ.
ಏರ್ ಇಂಡಿಯಾದಲ್ಲಿ ಏನಾಗಿತ್ತು?
ಮಾ. 4ರಂದು ಏರ್ ಇಂಡಿಯಾ ಸಿಬ್ಬಂದಿ ವ್ಹೀಲ್‌ಚೇರ್ ಸೌಲಭ್ಯ ನೀಡದ ಕಾರಣ 82 ವರ್ಷದ ವೃದ್ಧೆಯೊಬ್ಬರು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಮಹಿಳೆ ಮೊದಲೇ ವ್ಹೀಲ್‌ಚೇರ್ ಕಾಯ್ದಿರಿಸಿದ್ದರೂ ಸಿಬ್ಬಂದಿ ಈ ಸೌಲಭ್ಯ ಒದಗಿಸಲು ನಿರಾಕರಿಸಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ಸದ್ಯ ವೃದ್ಧೆ ಐಸಿಯುದಲ್ಲಿದ್ದು ಮೆದುಳಲ್ಲಿ ರಕ್ತಸ್ರಾವವಾಗಿದೆ ಎಂದು ತಿಳಿದು ಬಂದಿದೆ. ವ್ಹೀಲ್‌ಚೇರ್‌ಗಾಗಿ ಒಂದು ಗಂಟೆ ಕಾದ ನಿವೃತ್ತ ಲೆಫ್ಟಿನೆಂಟ್ ಜನರಲ್ ಅವರ ಪತ್ನಿ, ವಿಮಾನ ನಿಲ್ದಾಣದಲ್ಲಿ ಕುಟುಂಬ ಸದಸ್ಯರ ನೆರವಿನೊಂದಿಗೆ ನಡೆಯಲು ಆರಂಭಿಸಿದ್ದರು. ಈ ವೇಳೆ ಕಾಲು ಜಾರಿ ಏರ್ ಲೈನ್ ಕೌಂಟರ್ ಎದುರು ಬಿದ್ದಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.