Self Harming: 8 ವರ್ಷದಿಂದ ಪ್ರೀತಿಸಿ, ಕೈಕೊಟ್ಟ ವಿವಾಹಿತ ಶಿಕ್ಷಕಿ; ಮನನೊಂದು ಶಿಕ್ಷಕ ಆತ್ಮಹತ್ಯೆ
Self Harming: ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾಕಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ವಿವಾಹಿತ ಶಿಕ್ಷಕಿ ವಿರುದ್ಧ ಮೃತ ಶಿಕ್ಷಕನ ಕುಟುಂಬಸ್ಥರು ದೂರು ನೀಡಿದ್ದು, ಶಿಕ್ಷಕಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


ಬೆಂಗಳೂರು: ವಿವಾಹಿತ ಶಿಕ್ಷಕಿಯೊಬ್ಬರು ಸಂಬಂಧ ಬೆಳೆಸಿ ಮೋಸ ಮಾಡಿದ ಹಿನ್ನೆಲೆಯಲ್ಲಿ ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ (Self Harming) ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾಕಳಿ ಗ್ರಾಮದಲ್ಲಿ ನಡೆದಿದೆ. ಮಾಕಳಿಯಲ್ಲಿ ಟ್ಯೂಷನ್ ಸೆಂಟರ್ ನಡೆಸುತ್ತಿದ್ದ ಆನಂದ (35) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ. ವಿವಾಹಿತ ಶಿಕ್ಷಕಿ ಹೇಮಲತಾ ವಿರುದ್ಧ ಮೃತ ಶಿಕ್ಷಕನ ಕುಟುಂಬಸ್ಥರು ದೂರು ನೀಡಿದ್ದು, ಶಿಕ್ಷಕಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ 8 ವರ್ಷದಿಂದ ಪ್ರೀತಿಸುತ್ತಿದ್ದ ಶಿಕ್ಷಕ ಆನಂದ ಮತ್ತು ಹೆಮಲತಾ ಅನೈತಿಕ ಸಂಬಂಧ ಹೊಂದಿದ್ದರು. ಇಬ್ಬರೂ ಸೇರಿ ಮಾಕಳಿಯಲ್ಲಿ ಟ್ಯೂಷನ್ ಸೆಂಟರ್ ಆರಂಭಿಸಿದ್ದರು. ಆದರೆ, ಇತ್ತೀಚೆಗೆ ಹೇಮಲತಾ ಮತ್ತೊಬ್ಬನ ಜತೆಗೆ ಹೆಚ್ಚಿನ ಒಡನಾಟ ಹೊಂದಿದ್ದರಿಂದ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಆನಂದ ಟ್ಯೂಷನ್ ಸೆಂಟರ್ ಹಣದ ಜತೆಗೆ ತನ್ನ ಮನೆಯಿಂದಲೂ ಸುಮಾರು 5 ಲಕ್ಷ ರೂ. ನೀಡಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಶುರುವಾಗಿದ್ದು, ಹೇಮಲತಾ ತನ್ನ ಪತಿ ತಿಮ್ಮಯ್ಯಗೆ ವಿಷಯ ತಿಳಿಸಿ ಬೆದರಿಕೆ ಹಾಕಿದ್ದರು. ಇದರಿಂದಾಗಿ ಆನಂದ ಟ್ಯೂಷನ್ ಸೆಂಟರ್‌ನಲ್ಲಿಯೇ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಆನಂದ ಆತ್ಮಹತ್ಯೆಗೂ ಮೊದಲು ಬರೆದ ಡೆತ್ ನೋಟ್, ವಾಟ್ಸ್ ಆ್ಯಪ್ ಸ್ಟೇಟಸ್‌ನಲ್ಲಿ ಹೇಮಲತಾ ಕಿರುಕುಳದ ಬಗ್ಗೆ ಮಾಹಿತಿ ಹಾಕಿದ್ದಾನೆ. ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಈ ಘಟನೆ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 108ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | Murder Case: ಕೌಟುಂಬಿಕ ಕಲಹ; ಪತ್ನಿಯ ತಲೆಯನ್ನೇ ಕಡಿದು ಪೊಲೀಸ್ ಠಾಣೆಗೆ ಬಂದ ವ್ಯಕ್ತಿ
ಬೆಂಗಳೂರಲ್ಲಿ ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್ ಬರ್ಬರ ಹತ್ಯೆ
ಬೆಂಗಳೂರು: ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರ ಬರ್ಬರ ಹತ್ಯೆಯಾಗಿದೆ. ನಗರದ ಎಚ್ಎಸ್ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ (Om Prakash Murder Case) ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ. ಮನೆಯಲ್ಲೇ ಮೃತದೇಹ ಪತ್ತೆಯಾಗಿದ್ದರಿಂದ ಹೆಂಡತಿಯೇ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಓಂ ಪ್ರಕಾಶ್ ಅವರ ಹೆಂಡತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರಿಗೆ 68 ವರ್ಷ ವಯಸ್ಸಾಗಿತ್ತು. 1981ನೇ ಬ್ಯಾಚ್ನ ಐಪಿಎಸ್ ಅಧಿಕಾರಿ ಓಂ ಪ್ರಕಾಶ್ ಅವರು ರಾಜ್ಯದ 38ನೇ ಡಿಜಿ ಮತ್ತು ಐಜಿಪಿಯಾಗಿದ್ದರು. 2015ರ ಅವಧಿಯಲ್ಲಿ ಡಿಜಿ ಮತ್ತು ಐಜಿಪಿಯಾಗಿದ್ದ ಓಂ ಪ್ರಕಾಶ್ ಅವರು ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿ ವಾಸವಿದ್ದರು. ಎಚ್ಎಸ್ಆರ್ ಲೇಔಟ್‌ನ ಮನೆಯಲ್ಲಿ ಓಂ ಪ್ರಕಾಶ್ ಅವರ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ.
ಈ ಸುದ್ದಿಯನ್ನೂ ಓದಿ | Murder Case: ಬೆಳ್ಳಂಬೆಳಿಗ್ಗೆ ನಡುರಸ್ತೆಯಲ್ಲೇ ನಡೀತು ನಗರಸಭೆ ಮಾಜಿ ಸದಸ್ಯನ ಬರ್ಬರ ಹತ್ಯೆ
ಓಂ ಪ್ರಕಾಶ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಸದ್ಯ ಅವರು ತಮ್ಮ ಪತ್ನಿ ಪಲ್ಲವಿ ಜತೆ ವಾಸಿಸುತ್ತಿದ್ದರು. ಕೆಲವು ದಿನಗಳಿಂದ ಗಂಡ ಹೆಂಡತಿಯ ನಡುವೆ ಮನಸ್ತಾಪವಿತ್ತು ಎನ್ನಲಾಗಿದೆ. ವೈಯಕ್ತಿಕ ವಿಚಾರಗಳಲ್ಲಿ ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಇದೇ ಕಾರಣಕ್ಕೆ ಚಾಕುವಿನಿಂದ ಇರಿದು ಪತ್ನಿಯೇ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಓಂ ಪ್ರಕಾಶ್ ಅವರ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.