ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Delhi Election 2025: ಅರವಿಂದ್‌ ಕೇಜ್ರಿವಾಲ್‌ ಕಾರಿನ ಮೇಲೆ ಬಿಜೆಪಿಯಿಂದ ದಾಳಿ; ಆಪ್‌ ಆರೋಪಕ್ಕೆ ಕೇಸರಿ ಪಡೆ ತಿರುಗೇಟು

Delhi Election 2025: ದಿಲ್ಲಿಯ ಚುನಾವಣಾ ಕಣ ರಂಗೇರಿದೆ. ಶನಿವಾರ ಚುನಾವಣಾ ಪ್ರಚಾರ ನಡೆಸುತ್ತಿದ್ದ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ವಾಹನದ ಮೇಲೆ ಬಿಜೆಪಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆಪ್‌ ದೂರಿದೆ. ಇತ್ತ ಕೇಸರಿ ಪಡೆ ಈ ಆರೋಪವನ್ನು ನಿರಾಕರಿಸಿದ್ದು, ಬದಲಾಗಿ ಕೇಜ್ರಿವಾಲ್‌ ಅವರಿದ್ದ ವಾಹನ ತಮ್ಮ ಕಾರ್ಯಕರ್ತರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿಸಿದೆ.

ಅರವಿಂದ್‌ ಕೇಜ್ರಿವಾಲ್‌ ಕಾರಿನ ಮೇಲೆ ಬಿಜೆಪಿಯಿಂದ ದಾಳಿ; ಆಪ್‌ ಆರೋಪಕ್ಕೆ ಕೇಸರಿ ಪಡೆ ತಿರುಗೇಟು

ಅರವಿಂದ್‌ ಕೇಜ್ರಿವಾಲ್‌ ಅವರ ಕಾರಿನ ಮೇಲೆ ನಡೆದಿದೆ ಎನ್ನಲಾದ ದಾಳಿಯ ದೃಶ್ಯ.

Profile Ramesh B Jan 18, 2025 7:17 PM

ನವದೆಹಲಿ: ರಾಷ್ಟ್ರ ರಾಜಧಾನಿ ದಿಲ್ಲಿಯ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ (Delhi Election 2025). ವಿವಿಧ ಪಕ್ಷಗಳು ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರ ವಾಹನದ ವೇಳೆ ಶನಿವಾರ (ಜ. 18) ಕಲ್ಲು ತೂರಾಟ ನಡೆದಿದ್ದು, ಇದರ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಆಮ್‌ ಆದ್ಮಿ ಪಾರ್ಟಿ ಆರೋಪಿಸಿದೆ. ದಿಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರು ಪ್ರಚಾರ ಅಭಿಯಾನ ನಡೆಸುತ್ತಿದ್ದಾಗ ಅವರ ಕಾರಿನತ್ತ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು ಎನ್ನಲಾಗಿದೆ. ಇತ್ತ ಈ ಆರೋಪವನ್ನು ಬಿಜೆಪಿ ನಿರಾಕರಿಸಿದ್ದು, ಕೇಜ್ರಿವಾಲ್‌ ಅವರಿದ್ದ ಕಾರು ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಹರಿದಿದೆ ಎಂದು ಪ್ರತ್ಯಾರೋಪ ಮಾಡಿದೆ.

ದಿಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಆಪ್‌ ಅಭ್ಯರ್ಥಿ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಬಿಜೆಪಿಯಿಂದ ಪರ್ವೇಶ್‌ ವರ್ಮಾ (Parvesh Verma) ಸ್ಪರ್ಧಿಸುತ್ತಿದ್ದಾರೆ.



ಮಾತಿನ ಚಕಮಕಿ

ಪರ್ವೇಶ್‌ ವರ್ಮಾ ಅವರ ಬೆಂಬಲಿಗರು ಅರವಿಂದ್‌ ಕೇಜ್ರಿವಾಲ್‌ ಅವರು ಸಂಚರಿಸುತ್ತಿದ್ದ ಕಾರಿನ ಮೇಲೆ ಇಟ್ಟಿಗೆ, ಕಲ್ಲು ತೂರಿದ್ದಾರೆ ಎಂದು ಆಪ್‌ ದೂರಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದೆ.

ʼʼಸೋಲುವ ಭೀತಿಯಲ್ಲಿರುವ ಬಿಜೆಪಿಯು ಆಪ್‌ ವಿರುದ್ಧ ಅಕ್ರಮಕ್ಕೆ ಇಳಿದಿದೆ. ಹೀಗಾಗಿ ಬಿಜೆಪಿಯ ಗೂಂಡಾಗಳು ಕೇಜ್ರಿವಾಲ್‌ ವಾಹನ ಮೇಲೆ ದಾಳಿ ನಡೆಸಿದ್ದಾರೆ. ಕಮಲ ಪಕ್ಷದ ಸ್ಪರ್ಧಿ ಪರ್ವೇಶ್‌ ವರ್ಮಾ ಅವರ ಬೆಂಬಲಿಗರು ಅರವಿಂದ್‌ ಕೇಜ್ರಿವಾಲ್‌ ಕಾರಿನತ್ತ ಕಲ್ಲು, ಇಟ್ಟಿಗೆ ಎಸೆದಿದ್ದಾರೆ. ಅವರು ಪ್ರಚಾರದಲ್ಲಿ ಭಾಗಿಯಾಗುವುದನ್ನು ತಡೆಯಲು ಬಿಜೆಪಿ ಯತ್ನಿಸುತ್ತಿದೆ. ಯಾವುದೇ ಕಾರಣಕ್ಕೂ ಕೇಜ್ರಿವಾಲ್‌ ಹೆದರಬೇಕಾಗಿಲ್ಲ. ದಿಲ್ಲಿಯ ಜನರು ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆʼʼ ಎಂದು ತಿಳಿಸಿದೆ.



ಬಿಜೆಪಿಯಿಂದ ತಿರುಗೇಟು

ಇತ್ತ ಪರ್ವೇಶ್‌ ವರ್ಮಾ ಈ ಆರೋಪವನ್ನು ನಿರಾಕರಿಸಿದ್ದಾರೆ. ಬದಲಾಗಿ ಅರವಿಂದ್‌ ಕೇಜ್ರಿವಾಲ್‌ ಸಂಚರಿಸುತ್ತಿದ್ದ ಕಾರು ತಮ್ಮ ಬೆಂಬಲಿಗರಿಗೆ ಡಿಕ್ಕಿ ಹೊಡೆದಿದೆ ಎಂದು ತಿರುಗೇಟು ನೀಡಿದ್ದಾರೆ. ʼʼಅರವಿಂದ್‌ ಕೇಜ್ರಿವಾಲ್‌ ಅವರ ಕಾರು ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಡಿಕ್ಕಿ ಹೊಡೆದಿದೆ. ಇಬ್ಬರನ್ನೂ ದಿಲ್ಲಿಯ ಲೇಡಿ ಹಾರ್ಡಿಂಗ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಜನರ ಜೀವಕ್ಕೆ ಕೇಜ್ರಿವಾಲ್‌ ಬೆಲೆಯನ್ನೇ ಕೊಡುತ್ತಿಲ್ಲ ಎನ್ನುವುದಕ್ಕೆ ಈ ಘಟನೆಯೇ ನಿದರ್ಶನ. ಆಸ್ಪತ್ರೆಗೆ ತೆರಳಿ ಗಾಯಗೊಂಡವರ ಆರೋಗ್ಯ ವಿಚಾರಣೆ ನಡೆಸಿದ್ದೇನೆʼʼ ಎಂದು ಅವರು ತಿಳಿಸಿದ್ದಾರೆ.

ʼʼಆಪ್‌ ಮಾಡಿದ ಆರೋಪಗಳೆಲ್ಲ ನಿರಾಧಾರ. ಅರವಿಂದ್‌ ಕೇಜ್ರಿವಾಲ್‌ ಸೋಲುವ ಭೀತಿಯಿಂದ ಇದನ್ನೆಲ್ಲ ಮಾಡುತ್ತಿದ್ದಾರೆʼʼ ಎಂದೂ ಅವರು ತಿಳಿಸಿದ್ದಾರೆ. ಉದ್ಯೋಗ ಒದಗಿಸುವಂತೆ ಮನವಿ ಸಲ್ಲಿಸಿದ ಸ್ಥಳೀಯರ ಮೇಲೆ ಕೇಜ್ರಿವಾಲ್‌ ಕಾರು ಹರಿಸಿದ್ದಾರೆ ಎಂದು ದೂರಿದ್ದಾರೆ.

ಈ ಸುದ್ದಿಯನ್ನೂ ಓದಿ: Narendra Modi : ಪ್ರಧಾನಿ ನರೇಂದ್ರ ಮೋದಿ ಯೂಟ್ಯೂಬ್‌ನಿಂದ ಪ್ರತೀ ತಿಂಗಳು ಗಳಿಸುವ ಆದಾಯವೆಷ್ಟು? ಕೇಳಿದ್ರೆ ಶಾಕ್‌ ಆಗ್ತೀರಾ!

ಇತ್ತ ಆಪ್‌ ವಿಡಿಯೊವೊಂದನ್ನು ರಿಲೀಸ್‌ ಮಾಡಿದ್ದು, ಅದರಲ್ಲಿ ಕೇಜ್ರಿವಾಲ್‌ ಅವರ ಬೆಂಗಾವಲು ಪಡೆಗೆ ಮುತ್ತಿಗೆ ಹಾಕಿದ ಜನರ ಗುಂಪು ಕಪ್ಪು ಬಾವುಟ ಪ್ರದರ್ಶಿಸುತ್ತಿರುವುದು ಕಂಡು ಬಂದಿದೆ. ದಿಲ್ಲಿ ವಿಧಾನಸಭೆಯ ಚುನಾವಣೆ ಫೆ. 5ರಂದು ನಡೆದು 8ರಂದು ಫಲಿತಾಂಶ ಪ್ರಕಟವಾಗಲಿದೆ.