20 ವರ್ಷದ ಬಳಿಕ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯಕ್ಕೆ ಮುಂದಾದ ಭಾರತ!
2030 Commonwealth Games: ಕೆಲ ಮೂಲಗಳ ಪ್ರಕಾರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಅಹಮದಾಬಾದ್ ಅಥವಾ ಭುವನೇಶ್ವರದಲ್ಲಿ ಆಯೋಜಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅಲ್ಲದೆ ಸಿಜೆಎಫ್ ಅಧಿಕಾರಿಗಳು ಈ ಎರಡೂ ನಗರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನವದೆಹಲಿ: 20 ವರ್ಷದ ಬಳಿಕ ಭಾರತ ಕಾಮನ್‌ವೆಲ್ತ್ ಗೇಮ್ಸ್(2030 Commonwealth Games) ಆತಿಥ್ಯ ವಹಿಸಲು ಆಸಕ್ತಿ ತೋರಿದೆ ಎಂದು ತಿಳಿದುಬಂದಿದೆ. 2030ರಲ್ಲಿ ನಡೆಯುವ ಈ ಕ್ರೀಡಾಕೂಟದ ಆತಿಥ್ಯ ಕುರಿತು ಭಾರತ ಪ್ರವಾಸದಲ್ಲಿರುವ ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್(ಸಿಜೆಎಫ್) ಅಧಿಕಾರಿಗಳ ಜತೆ ಕೇಂದ್ರ ಸರ್ಕಾರದ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ಹಿಂದೆ 2010ರಲ್ಲಿ ಭಾರತದಲ್ಲಿ ಕೊನೆ ಬಾರಿ ಕಾಮನ್‌ವೆಲ್ತ್ ಗೇಮ್ಸ್ ಆಯೋಜಿಸಲಾಗಿತ್ತು.
ಕೆಲ ಮೂಲಗಳ ಪ್ರಕಾರ ಕ್ರೀಡಾಕೂಟವನ್ನು ಅಹಮದಾಬಾದ್ ಅಥವಾ ಭುವನೇಶ್ವರದಲ್ಲಿ ಆಯೋಜಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅಲ್ಲದೆ ಸಿಜೆಎಫ್ ಅಧಿಕಾರಿಗಳು ಈ ಎರಡೂ ನಗರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೀಘ್ರದಲ್ಲೇ ಭಾರತ ಕ್ರೀಡಾಕೂಟದ ಆತಿಥ್ಯಕ್ಕೆ ಬಿಡ್ ಸಲ್ಲಿಸಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಬಿಡ್ ಸಲ್ಲಿಕೆಗೆ ಮಾ.31 ಕೊನೆ ದಿನಾಂಕವಾಗಿದೆ.
2036ರ ಒಲಿಂಪಿಕ್ಸ್ ಆಯೋಜನೆಗೆ ಭಾರತ ಕಳೆದ ಒಂದು ವರ್ಷದಿಂದ ಉತ್ಸುಕತೆ ತೋರುತ್ತಿದ್ದು, ಆತಿಥೇಯ ದೇಶದ ಆಯ್ಕೆ ಈ ವರ್ಷ ನಡೆಯಲಿದೆ. ಭಾರತದೊಂದಿಗೆ ಸೌದಿ ಅರೇಬಿಯಾ ಮತ್ತು ಟರ್ಕಿ ಕೂಡ ಬಿಡ್ ಸಲ್ಲಿಸಲು ಉತ್ಸುಕವಾಗಿವೆ. ಭಾರತದಲ್ಲಿ ಒಲಿಂಪಿಕ್ಸ್ ಆಯೋಜನೆಯಾದರೆ ಅಹ್ಮದಾಬಾದ್ ಪ್ರಮುಖ ನಗರವಾಗಲಿದೆ.
ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಕೂಡ 2036 ಒಲಿಂಪಿಕ್ಸ್ ಕ್ರೀಡಾಕೂಟವನ್ನು ಭಾರತ ಆಯೋಜಿಸಬಲ್ಲದು ಎಂದು ಹೇಳಿದ್ದರು. ಸಂದರ್ಶನವೊಂದರಲ್ಲಿ ಭಾರತದ ಬಗ್ಗೆ ಮಾತನಾಡಿದ್ದ ಇಮ್ಯಾನ್ಯುಯೆಲ್ ಮ್ಯಾಕ್ರನ್, ಭಾರತದ ಭವಿಷ್ಯದ ಬಗ್ಗೆ ನನಗೆ ಬಲವಾದ ನಂಬಿಕೆಯಿದೆ. ಒಲಿಂಪಿಕ್ಸ್‌ನಂಥ ಜಾಗತಿಕ ಕ್ರೀಡಾಕೂಟವನ್ನು ಆಯೋಜಿಸುವ ಸಾಮರ್ಥ್ಯ ನಿಮ್ಮಲ್ಲಿದೆ ಎಂದು ಹೇಳಿದ್ದರು.
ದೇಶವು ಒಲಿಂಪಿಕ್ಸ್ ಕ್ರೀಡಾ ಕೂಟವನ್ನು ಆಯೋಜಿಸಲು ಸಿದ್ಧತೆ ನಡೆಸುತ್ತಿದೆ. 2036ರಲ್ಲಿ ನಡೆಯಲಿರುವ ಒಲಿಂಪಿಕ್ಸ್ ಭಾರತದ ನೆಲದಲ್ಲಿ ನಡೆಯಬೇಕು ಎಂಬುದು ಭಾರತೀಯರ ಕನಸಾಗಿದೆ. ಅದಕ್ಕಾಗಿ ತಯಾರಿ ಮಾಡಿಕೊಂಡು ಮುಂದೆ ಸಾಗುತ್ತಿದ್ದೇವೆ ಎಂದು ಮೋದಿ 78 ನೇ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಹೇಳಿದ್ದರು.
ಇದನ್ನೂ ಓದಿ IND vs ENG: 4ನೇ ಕ್ರಮಾಂಕದಲ್ಲಿ ಯಾರಿಂದಲೂ ಸಾಧ್ಯವಾಗದ ದಾಖಲೆ ಬರೆದ ಶ್ರೇಯಸ್ ಅಯ್ಯರ್!
ಸರ್ಕಾರಿ ಮೂಲಗಳ ಪ್ರಕಾರ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ 2024 ರ ಅಕ್ಟೋಬರ್ 1 ರಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಔಪಚಾರಿಕವಾಗಿ ಉದ್ದೇಶದ ಪತ್ರವನ್ನ ಕಳುಹಿಸಿದೆ ಎನ್ನುವ ವರದಿಯೊಂದು ಹೊರಬಿದ್ದಿದೆ. ಭಾರತವು 2036 ರಲ್ಲಿ ಒಲಿಂಪಿಕ್ ಕ್ರೀಡಾಕೂಟ ಮತ್ತು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಲು ಬಯಸಿದೆ ಎಂದು ಈ ಪತ್ರದಲ್ಲಿ ಬರೆಯಲಾಗಿತ್ತು.