Basangouda Patil Yatnal: ಯತ್ನಾಳ್ ಉಚ್ಛಾಟನೆ ವಿರೋಧಿಸಿ ಲಿಂಗಾಯತ ಶಾಸಕರು ಬಿಜೆಪಿಯಿಂದ ಹೊರಬರಲು ಮಠಾಧೀಶರ ಕರೆ
ಯತ್ನಾಳ್ ಎಂದಿಗೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಕಾಣದ ಕೈಗಳು ಅವರನ್ನು ಉಚ್ಛಾಟನೆ ಮಾಡುವಂತೆ ಮಾಡಿವೆ. ಬಿಜೆಪಿ ಪಕ್ಷದ ವರಿಷ್ಠರು ಯತ್ನಾಳ್ ಅವರ ಉಚ್ಛಾಟನೆ ಆದೇಶವನ್ನು ವಾಪಸ್ ಪಡೆಯದೇ ಹೋದರೆ ಲಿಂಗಾಯತ ಸಮುದಾಯದ ಎಲ್ಲಾ ಶಾಸಕರು ಬಿಜೆಪಿ ಬಿಟ್ಟು ಹೊರಬರಬೇಕು ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ.

ಬಸವಜಯ ಮೃತ್ಯುಂಜಯ ಸ್ವಾಮೀಜಿ

ಧಾರವಾಡ: ವಿಜಯಪುರ (Vijayapura) ಶಾಸಕ, ಬಿಜೆಪಿ (BJP) ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ (expulsion) ಮಾಡಿದ ಬಿಜೆಪಿ ಹೈಕಮಾಂಡ್‌ನ ನಿರ್ಧಾರದ ವಿರುದ್ಧ ಯತ್ನಾಳ್ ಬೆಂಬಲಿಗರು, ಕೆಲವು ಮಠಾಧೀಶರು ಹಾಗೂ ವಿಜಯಪುರದ ಬಿಜೆಪಿಯ ಬಣಗಳಿಂದ ವಿರೋಧ ವ್ಯಕ್ತವಾಗಿದೆ. ಅನೇಕ ಸಂಘಟನೆ ಹಾಗೂ ಸಮುದಾಯದ ಮುಖಂಡರು ಯತ್ನಾಳ್ ಬೆನ್ನಿಗೆ ನಿಂತಿದ್ದು, ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಛಾಟನೆಯನ್ನು ಹಿಂಪಡೆಯುವಂತೆ ಬಿಜೆಪಿಗೆ ಒತ್ತಾಯಿಸುತ್ತಿದ್ದಾರೆ. ಈ ಉಚ್ಛಾಟನೆ ಹಿಂಪಡೆಯದೇ ಹೋದರೆ ಎಲ್ಲಾ ಲಿಂಗಾಯತ (Lingayatha) ಶಾಸಕರು ಬಿಜೆಪಿ ಬಿಟ್ಟು ಹೊರ ಬನ್ನಿ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ (basavajaya mruthyunjaya swamiji) ಕರೆ ನೀಡಿದ್ದಾರೆ.
ಧಾರವಾಡ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಎಂದಿಗೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಕಾಣದ ಕೈಗಳು ಅವರನ್ನು ಉಚ್ಛಾಟನೆ ಮಾಡುವಂತೆ ಮಾಡಿವೆ. ಬಿಜೆಪಿ ಪಕ್ಷದ ವರಿಷ್ಠರು ಯತ್ನಾಳ್ ಅವರ ಉಚ್ಛಾಟನೆ ಆದೇಶವನ್ನು ವಾಪಸ್ ಪಡೆಯದೇ ಹೋದರೆ ಲಿಂಗಾಯತ ಸಮುದಾಯದ ಎಲ್ಲಾ ಶಾಸಕರು ಬಿಜೆಪಿ ಬಿಟ್ಟು ಹೊರಬರಬೇಕು ಎಂದು ಆಗ್ರಹಿಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಗೊತ್ತಿರದೇ ಇರುವ ಅಂಶಗಳು ಇಲ್ಲಿವೆ. ಇದರಿಂದ ಯಾರೂ ಧೃತಿಗೆಡಬಾರದು. ನಮ್ಮ ಸಮಾಜಕ್ಕೆ ನಾನು ಕರೆ ಕೊಡುತ್ತೇನೆ. ಬೆಳಗಾವಿಯಲ್ಲಿ ಇಂದು ಸಭೆ ಕರೆಯುತ್ತೇನೆ. ಮುಂದೆ ಒಂದು ದಿನ ರಾಜ್ಯದಾದ್ಯಂತ ಪ್ರತಿಭಟನೆ ಮಾಡುತ್ತೇವೆ. ಇದು ಪ್ರಧಾನಿ ವಿರುದ್ಧದ ಹೋರಾಟ ಅಲ್ಲ. ಯಾರು ಅಟ್ಟಹಾಸ ಮೆರೆದಿದ್ದಾರೋ ಅವರ ವಿರುದ್ಧ ಹೋರಾಟ. ಬಿಜೆಪಿ ಹೈಕಮಾಂಡ್ ಕೂಡಲೇ ಈ ಆದೇಶ ವಾಪಸ್ ಪಡೆದು ಆದ ತಪ್ಪನ್ನು ಸರಿಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಬೆಳಗಾವಿಯ ಗಾಂಧಿ ಭವನದಲ್ಲಿ ಗುರುವಾರ ಎಲ್ಲಾ ಪದಾಧಿಕಾರಿಗಳ ಯುವ ಘಟಕ, ರೈತ ಘಟಕದ ಸಭೆ ಕರೆಯುತ್ತೇನೆ. ಯತ್ನಾಳ್ ಉಚ್ಛಾಟನೆ ಹಿಂದೆ ದುಷ್ಟ ಶಕ್ತಿಗಳ ಕೈವಾಡ ಇದೆ. ವೀರೇಂದ್ರ ಪಾಟೀಲ್, ಜೆ.ಎಚ್.ಪಟೇಲ್‌ರಂತೆ ಯತ್ನಾಳ್ ಅವರಿಗೂ ಮಾಡುತ್ತಿದ್ದಾರೆ. ಹೈಕಮಾಂಡ್ ನಮಗೆ ಕುಟುಂಬ ರಾಜಕಾರಣ ಬೇಕು ಎಂಬುದಾಗಿ ನೇರವಾಗಿ ಹೇಳಲಿ ಎಂದ ಸ್ವಾಮೀಜಿ, ಈ ಬಗ್ಗೆ ಎಲ್ಲವನ್ನೂ ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಕುಟುಂಬ ರಾಜಕಾರಣ ಬೇಡ ಎನ್ನುವುದು ತಪ್ಪೇ? ಯತ್ನಾಳ್ ಏನೇ ಮಾತನಾಡಿದರೂ ಅವರು ಉತ್ತರ ಕರ್ನಾಟಕ, ಹಿಂದೂತ್ವದ ಬಗ್ಗೆಯೇ ಮಾತನಾಡಿದ್ದಾರೆ. ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಿ ಬಿಜೆಪಿ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿದ್ದು, ಇದು ಪಕ್ಷಕ್ಕೆ ಹಿನ್ನಡೆ. ಈಗ ಬಿಜೆಪಿ 90 ಸ್ಥಾನ ಬಂದಿದ್ದು, ಮುಂದೆ 30 ಸ್ಥಾನ ಕೂಡ ಬರುವುದಿಲ್ಲ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದರು.
ವಿಜಯನಗರ ಬಿಜೆಪಿ ಉಪಾಧ್ಯಕ್ಷ ರಾಜಿನಾಮೆ
ಶಾಸಕ ಯತ್ನಾಳರನ್ನು ಉಚ್ಚಾಟಿಸಿದ ಬೆನ್ನಲ್ಲೇ ಇದೀಗ ಅವರ ಬೆಂಬಲಿಗರ ರಾಜೀನಾಮೆ ಪರ್ವ ಆರಂಭವಾಗಿದ್ದು, ವಿಜಯಪುರ ಬಿಜೆಪಿ ನಗರ ಮೋರ್ಚಾ ಉಪಾಧ್ಯಕ್ಷ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ನಗರ ಓಬಿಸಿ ಮೋರ್ಚ ಉಪಾಧ್ಯಕ್ಷ ಸ್ಥಾನಕ್ಕೆ ಭೀಮು ಮಾಶಾಳ ಇದೀಗ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ನಗರ ಮಂಡಲ ಅಧ್ಯಕ್ಷ ಹೂಗಾರ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ವಾಟ್ಸಪ್ ಮೂಲಕ ರಾಜೀನಾಮೆ ಪತ್ರ ರವಾನಿಸಿದ್ದು, ಯತ್ನಾಳ್ ಉಚ್ಚಾಟನೆ ಬೆನ್ನಲ್ಲೇ ಬೆಂಬಲಿಗರ ರಾಜೀನಾಮೆ ಪರ್ವ ಆರಂಭವಾಗಿದೆ.
ಇದನ್ನೂ ಓದಿ: Basanagouda Patil Yatnal: ಬಿಜೆಪಿಯಿಂದ ಯತ್ನಾಳ್ ಉಚ್ಚಾಟನೆಗೆ ಇದೇ ಕಾರಣ!