BCCI Awards: ಜಸ್‌ಪ್ರೀತ್ ಬುಮ್ರಾ ಅತ್ಯುತ್ತಮ ಕ್ರಿಕೆಟಿಗ, ಮಹಿಳಾ ವಿಭಾಗದಲ್ಲಿ ಮಂಧಾನಾ!
BCCI Awards: 2023-24ರ ಸಾಲಿನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದ ಭಾರತ ತಂಡದ ವೇಗಿ ಜಸ್‌ಪ್ರೀತ್ ಬುಮ್ರಾ ಅವರು ಬಿಸಿಸಿಐನ ಪಾಲಿ ಉಮ್ರಿಗರ್ ಪ್ರಶಸ್ತಿಯಾದ ಅತ್ಯುತ್ತಮ ಇಂಟರ್‌ನ್ಯಾಷನಲ್ ಕ್ರಿಕೆಟಿಗ ಗೌರವಕ್ಕೆ ಭಾಜನರಾಗಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಸ್ಮೃತಿ ಮಂಧಾನಾ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

Jasprit Bumrah, Smriti Mandhana

ನವದೆಹಲಿ: ಪುರುಷರ ವಿಭಾಗದಲ್ಲಿ ಭಾರತದ ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ಅವರಿಗೆ ಬಿಸಿಸಿಐನ ಪಾಲಿ ಉಮ್ರಿಗರ್ ಪ್ರಶಸ್ತಿಯನ್ನು ಪುರುಷರ ವಿಭಾಗದಲ್ಲಿ (2023–24) ನೀಡಿ ಗೌರವಿಸಲಾಗಿದೆ ಹಾಗೂ ಮಹಿಳೆಯರ ವಿಭಾಗದಲ್ಲಿ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನಾ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದಕ್ಕೂ ಮುನ್ನ ಜಸ್‌ಪ್ರೀತ್ ಬುಮ್ರಾ ಅವರು ಐಸಿಸಿ ನೀಡುವ 2024ರ ವರ್ಷದ ಟೆಸ್ಟ್ ಕ್ರಿಕೆಟಿಗ ಹಾಗೂ ಒಟ್ಟಾರೆಯಾಗಿ 2024ರ ವರ್ಷ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದರು. ಇವರು ಕಳೆದ ವರ್ಷ ತಮ್ಮ ಅಸಾಧಾರಣ ಬೌಲಿಂಗ್ ಕೌಶಲ ಹಾಗೂ ತಮ್ಮ ಸ್ಥಿರ ಪ್ರದರ್ಶನದ ಸಹಾಯದಿಂದ ಅತಿ ಹೆಚ್ಚಿನ ವಿಕೆಟ್‌ಗಳನ್ನು ಕಬಳಿಸಿದ್ದರು. ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ದ ಭಾರತ ತಂಡ ಟೆಸ್ಟ್ ಸರಣಿಗಳ ಗೆಲುವಿನಲ್ಲಿ ಬುಮ್ರಾ ಮಹತ್ವದ ಪಾತ್ರವನ್ನು ವಹಿಸಿದ್ದರು.
2024ರ ವರ್ಷದ ಐಸಿಸಿ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಗೆದ್ದ ಜಸ್‌ಪ್ರೀತ್ ಬುಮ್ರಾ!
2024ರಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಐಸಿಸಿ ಪುರುಷರ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗುವ ಮೂಲಕ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾದಿಯನ್ನು ಹಿಂಬಾಲಿಸಿದ್ದರು.ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಪ್ರಶಸ್ತಿ ಪಡೆದ ಭಾರತದ ಮೊದಲ ವೇಗದ ಬೌಲರ್ ಎಂಬ ದಾಖಲೆಯನ್ನು ಜಸ್‌ಪ್ರೀತ್ ಬುಮ್ರಾ ಬರೆದಿದ್ದರು. ಭಾರತ ತಂಡ 2024ರ ಐಸಿಸಿ ಟಿ20ಐ ವಿಶ್ವಕಪ್ ಗೆಲುವಿನಲ್ಲಿ ಜಸ್‌ಪ್ರೀತ್ ಬುಮ್ರಾ ಮಹತ್ತರ ಪಾತ್ರವನ್ನು ವಹಿಸಿದ್ದರು.
ICC Test Rankings: ಜಸ್‌ಪ್ರೀತ್ ಬುಮ್ರಾ ಜೀವನಶ್ರೇಷ್ಠ ಸಾಧನೆ
ಆಸ್ಟ್ರೇಲಿಯಾ ತಂಡದ ಟ್ರಾವಿಸ್ ಹೆಡ್ ಹಾಗೂ ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ ಅವರನ್ನು ಹಿಂದಿಕ್ಕಿ ಜಸ್‌ಪ್ರೀತ್ ಬುಮ್ರಾ ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು. ರಾಹುಲ್ ದ್ರಾವಿಡ್ (2004), ಸಚಿನ್ ತೆಂಡೂಲ್ಕರ್ (2010), ರವಿಚಂದ್ರನ್ ಅಶ್ವಿನ್ (2016) ಹಾಗೂ ವಿರಾಟ್ ಕೊಹ್ಲಿ (2017, 2018) ಬಳಿಕ ಈ ಪ್ರಶಸ್ತಿ ಪಡೆದ ಭಾರತದ ಐದನೇ ಆಟಗಾರ ಜಸ್‌ಪ್ರೀತ್ ಬುಮ್ರಾ. ಇದರ ಜೊತೆಗೆ 2024ರ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೂ ಕೂಡ ಬುಮ್ರಾ ಭಾಜನರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಬುಮ್ರಾ 32 ವಿಕೆಟ್‌ಗಳನ್ನು ಕಬಳಿಸಿದ್ದರು.
ಮಹಿಳೆಯರ ವಿಭಾಗದಲ್ಲಿ ಸ್ಮೃತಿ ಮಂಧಾನಾ
ಭಾರತ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಾ ಅವರು ಮಹಿಳೆಯರ ವಿಭಾಗದಲ್ಲಿ ಪಾಲಿ ಉಮ್ರಿಗರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು 2024ರ ಕ್ಯಾಲೆಂಡರ್ ವರ್ಷದಲ್ಲಿ 743 ರನ್‌ಗಳನ್ನು ಸಿಡಿಸಿದ್ದಾರೆ. ಅವರು ಇದರಲ್ಲಿ ನಾಲ್ಕು ಶತಕಗಳನ್ನು ಸಿಡಿಸಿದ್ದರು. ಇದರಲ್ಲಿ ಅವರು 57.86ರ ಸರಾಸರಿ ಮತ್ತು 95.15ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದರು.