ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

2024ರ ವರ್ಷದ ಐಸಿಸಿ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಗೆದ್ದ ಜಸ್‌ಪ್ರೀತ್ ಬುಮ್ರಾ!

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ ) ನೀಡುವ 2024ರ ವಾರ್ಷಿಕ ಟೆಸ್ಟ್ ಕ್ರಿಕೆಟ್ ಪ್ರಶಸ್ತಿಗೆ ಟೀಮ್ ಇಂಡಿಯಾ ವೇಗಿ ಜಸ್‌ಪ್ರೀತ್ ಬುಮ್ರಾ ಭಾಜನರಾಗಿದ್ದಾರೆ. 2024ರಲ್ಲಿ ಆಡಿದ 13 ಟೆಸ್ಟ್ ಪಂದ್ಯಗಳಿಂದ ಬುಮ್ರಾ 71 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್‌ನ ಗಸ್ ಅಟ್ಕಿನ್ಸನ್‌ 11 ಟೆಸ್ಟ್ ಪಂದ್ಯಗಳಿಂದ 52 ವಿಕೆಟ್ ಪಡೆದಿದ್ದು ಇವರನ್ನು ಟೀಮ್‌ ಇಂಡಿಯಾ ವೇಗಿ ಹಿಂದಿಕ್ಕಿದ್ದಾರೆ.

ಟೀಮ್‌ ಇಂಡಿಯಾದ ಜಸ್‌ಪ್ರೀತ್‌ ಬುಮ್ರಾಗೆ 2024ರ ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿ!

Jasprit Bumrah

Profile Ramesh Kote Jan 27, 2025 5:10 PM

ನವದೆಹಲಿ: ಕಳೆದ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪ್ರತಿಮ ಸಾಧನೆ ತೋರಿ 71 ವಿಕೆಟ್ ಪಡೆದಿದ್ದ ಟೀಮ್ ಇಂಡಿಯಾ ವೇಗಿ ಜಸ್‌ಪ್ರೀತ್ ಬುಮ್ರಾ (Jasprit Bumrah) ಐಸಿಸಿ (International Cricket Council) 2024ರ ವರ್ಷದ ಟೆಸ್ಟ್ ಕ್ರಿಕೆಟಿಗ (ICC Test Cricketer of the Year) ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಭಾರತದ ಮಹಾಗೋಡೆ ರಾಹುಲ್ ದ್ರಾವಿಡ್ (2004), ಗೌತಮ್ ಗಂಭೀರ್ (2009), ವೀರೇಂದ್ರ ಸೆಹ್ವಾಗ್ (2010), ರವಿಚಂದ್ರನ್ ಅಶ್ವಿನ್ (2016) ಹಾಗೂ ವಿರಾಟ್ ಕೊಹ್ಲಿ(2018) ಈ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಇದೀಗ ಜಸ್‌ಪ್ರೀತ್‌ ಬುಮ್ರಾ ಭಾರತದ 6ನೇ ಆಟಗಾರರಾಗಿದ್ದಾರೆ.

ಆಸ್ಟ್ರೇಲಿಯಾದೊಂದಿಗೆ ಅತಿ ಹೆಚ್ಚು ಬಾರಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಪಡೆದ ತಂಡ ಎಂಬ ಜಂಟಿ ದಾಖಲೆಯನ್ನು ಭಾರತ ಬರೆದಿದೆ. ಆಸೀಸ್‌ನ ಮಾಜಿ ನಾಯಕ ಸ್ಟೀವನ್ ಸ್ಮಿತ್ (2015 ಮತ್ತು 2017) ಎರಡು ಬಾರಿ ಈ ಪ್ರಶಸ್ತಿ ಗೆದ್ದ ವಿಶ್ವದ ಏಕೈಕ ಆಟಗಾರರಾಗಿದ್ದಾರೆ. 2024ರಲ್ಲಿ ಉತ್ತಮ ಫಾರ್ಮ್ ಪ್ರದರ್ಶಿಸಿದ್ದ ಬುಮ್ರಾ 71 ವಿಕೆಟ್ ಪಡೆದು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್‌ನ ಗಸ್ ಅಟ್ಕಿಸನ್ (52 ವಿಕೆಟ್ ) ನಂತರದ ಸ್ಥಾನದಲ್ಲಿದ್ದಾರೆ.

IND vs AUS: ವಿಶೇಷ ದಾಖಲೆಯ ಸನಿಹದಲ್ಲಿ ಜಸ್‌ಪ್ರೀತ್‌ ಬುಮ್ರಾ, ರವೀಂದ್ರ ಜಡೇಜಾ!

ಭಾರತ ಗೆಲುವಲ್ಲಿ ಪ್ರಮುಖ ಪಾತ್ರ

ಬೆನ್ನು ನೋವಿನ ಸಮಸ್ಯೆಯಿಂದ 2023ರಲ್ಲಿ ಸುದೀರ್ಘ ಕಾಲ ಕ್ರಿಕೆಟ್ ಅಂಗಳದಿಂದ ದೂರವೇ ಉಳಿದಿದ್ದ ಬುಮ್ರಾ, 2024ರಲ್ಲಿ ಕಮ್‌ಬ್ಯಾಕ್ ಮಾಡಿದ ನಂತರ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನವನ್ನು ತೋರಿದ್ದರು. ತವರು ಅಂಗಣದಲ್ಲಿ ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿ ಗೆಲ್ಲುವಲ್ಲಿ ಭಾರತ ತಂಡದ ನೆರವು ನೀಡಿದ್ದಲ್ಲದೆ, ದಕ್ಷಿಣ ಆಫ್ರಿಕಾ ಸರಣಿಯಲ್ಲೂ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದರು.

357 ಓವರ್‌ಗೂ ಹೆಚ್ಚು ಬೌಲಿಂಗ್

2024ರಲ್ಲಿ ಟೀಮ್ ಇಂಡಿಯಾ ವೇಗಿ ಜಸ್‌ಪ್ರೀತ್ ಬುಮ್ರಾ, ಟೆಸ್ಟ್ ಕ್ರಿಕೆಟ್‌ನಲ್ಲಿ 357 ಕ್ಕೂ ಹೆಚ್ಚು ಓವರ್ ಬೌಲ್‌ ಮಾಡಿದ್ದು, 2.96ರ ಸರಾಸರಿಯಲ್ಲಿ 71 ವಿಕೆಟ್ ಪಡೆದಿದ್ದಾರೆ.



ವರ್ಷದಲ್ಲಿ 70 ವಿಕೆಟ್ ಸಾಧನೆ

ಕಳೆದ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ 71 ವಿಕೆಟ್ ಪಡೆಯುವ ಮೂಲಕ ಏಕೈಕ ಕ್ಯಾಲೆಂಡರ್ ವರ್ಷದಲ್ಲಿ 70 ಕ್ಕೂ ಹೆಚ್ಚು ವಿಕೆಟ್ ಪಡೆದ ಭಾರತದ 4ನೇ ಬೌಲರ್ ಆಗಿ ಜಸ್‌ಪ್ರೀತ್ ಬುಮ್ರಾ ಗುರುತಿಸಿಕೊಂಡಿದ್ದರು. ಇದಕ್ಕೂ ಮುನ್ನ ಕಪಿಲ್ ದೇವ್, ಅನಿಲ್ ಕುಂಬ್ಳೆ ಹಾಗೂ ರವಿಚಂದ್ರನ್ ಅಶ್ವಿನ್ ಈ ದಾಖಲೆ ಬರೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 1-3 ಅಂತರದಿಂದ ಸೋಲು ಕಂಡರೂ ತಮ್ಮ ಉತ್ತಮ ಬೌಲಿಂಗ್ ದಾಳಿಯಿಂದಾಗಿ ಬೂಮ್ರಾ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು. ಅಲ್ಲದೆ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಬುಮ್ರಾ, ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 295 ರನ್‌ಗಳ ಗೆಲುವು ಸಾಧಿಸಲು ನೆರವು ನೀಡಿದ್ದರು.