ಮುಂಬಯಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ(Champions Trophy) ಆರಂಭಕ್ಕೂ ಮುನ್ನ ಹೊಸ ವಿವಾದವೊಂದು ಶುರುವಾಗಿದ್ದು, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಧ್ಯೆ(BCCI vs PCB) ಮತ್ತೆ ಕಿತ್ತಾಟ ಆರಂಭಿಸಿದೆ. ಆರಂಭದಲ್ಲಿ ಚಾಂಪಿಯನ್ಸ್ ಟ್ರೋಫಿ ಭಾಗವಹಿಸುವಿಕೆಗಾಗಿ ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸಿ, ಭಾರತದ ಪಂದ್ಯಗಳನ್ನು ದುಬೈನಲ್ಲಿ ನಡೆಯುವಂತೆ ಮಾಡಿತ್ತು.ಇದಾದ ಬಳಿಕ ಭಾರತ ತಂಡದ ಆಟಗಾರರು ಧರಿಸಲಿರುವ ಜೆರ್ಸಿಯಲ್ಲಿ ಆತಿಥೇಯ ರಾಷ್ಟ್ರ ಪಾಕಿಸ್ತಾನದ ಹೆಸರನ್ನು ಮುದ್ರಿಸಲು ಬಿಸಿಸಿಐ ನಿರಾಕರಿಸಿತ್ತು. ಇದೀಗ ಪಾಕ್‌ನಲ್ಲಿ ನಡೆಯುವ ಉದ್ಘಾಟನ ಸಮಾರಂಭದಲ್ಲಿ ಭಾರತದ ನಾಯಕ ರೋಹಿತ್ ಶರ್ಮ(Rohit Sharma) ಪಾಲ್ಗೊಳ್ಳುವುದನ್ನು ನಿರ್ಬಂಧಿಸಿದೆ ಎಂದು ವರದಿಯಾಗಿದೆ.
ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಬಿಸಿಸಿಐ ರೋಹಿತ್ ಪಾಕ್‌ಗೆ ತೆರಳುವುದಿಲ್ಲ, ಒಂದೊಮ್ಮೆ ಫೋಟೋ ಶೂಟ್ ಮತ್ತು ಉದ್ಘಾಟನ ಸಮಾರಂಭವನ್ನು ದುಬೈನಲ್ಲಿ ನಡೆಸುವುದಾದರೆ ಭಾರತ ತಂಡದ ನಾಯಕ ಹಾಜರಾಗುತ್ತಾರೆ ಎಂದು ಬಿಸಿಸಿಐ ಐಸಿಸಿಗೆ ತಿಳಿಸಿರುವುದಾಗಿ ವರದಿಯಾಗಿದೆ. ಈ ವರದಿಯ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಐಸಿಸಿ ಸಂಪ್ರದಾಯದಂತೆ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ 8 ತಂಡಗಳ ನಾಯಕರು ಹಾಜರಿದ್ದು ಫೋಟೋ ಶೂಟ್ ಹಾಗೂ ಪಂದ್ಯಾವಳಿಗೂ ಮೊದಲಿನ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕು. ಪಿಸಿಬಿ ಪ್ರಕಟನೆಯಂತೆ ಫೆ.16 ಅಥವಾ 17ರಂದು ಉದ್ಘಾಟನ ಸಮಾರಂಭ ನಡೆಯಲಿದೆ.
ಹೈವೋಲ್ಟೇಜ್ ಪಂದ್ಯವಾದ ಭಾರತ ಮತ್ತು ಪಾಕಿಸ್ಥಾನ ನಡುವಿನ ಪಂದ್ಯವು ದುಬೈನಲ್ಲಿ ಫೆ. 23 ರಂದು ನಡೆಯಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಫೆ.20ರಂದು ಬಾಂಗ್ಲಾದೇಶ ಎದುರು ಸೆಣಸಾಡಲಿದೆ. ಟೀಂ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.
ಇದನ್ನೂ ಓದಿ Champions Trophy: ಚಾಂಪಿಯನ್ಸ್ ಟ್ರೋಫಿ ಜೆರ್ಸಿಯಲ್ಲಿ ಪಾಕ್ ಹೆಸರು ನಿರಾಕರಿಸಿದ ಬಿಸಿಸಿಐ?
ಮಾ.4 ಮತ್ತು ಮಾ.5ರಂದು ಎರಡು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಎರಡೂ ಸೆಮಿಫೈನಲ್‌ಗಳಿಗೂ ಮೀಸಲು ದಿನ ಹೊಂದಿದ್ದು, ಮಾ.9ರಂದು ಫೈನಲ್ ಪಂದ್ಯ ನಿಗದಿಯಾಗಿದ್ದು, ಮೀಸಲು ದಿನವೂ ಇರಲಿದೆ. ಸೆಮಿಫೈನಲ್‌ಗೆ ಭಾರತ ಅರ್ಹತೆ ಪಡೆದರೆ ಆ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಆದರೆ, ಒಂದೊಮ್ಮೆ ಟೀಂ ಇಂಡಿಯಾ ಫೈನಲ್‌ಗೆ ಅರ್ಹತೆ ಪಡೆಯದಿದ್ದರೆ ಪಾಕಿಸ್ತಾನದ ಲಾಹೋರ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಭಾರತ ತಂಡವು ಫೈನಲ್ ಪ್ರವೇಶಿಸಿದರೆ ದುಬೈಯಲ್ಲಿ ನಡೆಯಲಿದೆ.