B. S. Yediyurappa: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಬಿಗ್ ರಿಲೀಫ್; ಪೋಕ್ಸೊ ಕೇಸ್‌ಗೆ ಮಧ್ಯಂತರ ತಡೆ
B. S. Yediyurappa: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪೋಕ್ಸೊ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಮುಂದಿನ ವಿಚಾರಣೆವರೆಗೆ ವಿಚಾರಣಾಧೀನ ನ್ಯಾಯಾಲಯಕ್ಕೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದೆ. ಇದರಿಂದ ಎರಡನೇ ಸುತ್ತಿನ ದಾವೆಯಲ್ಲಿ ಸದ್ಯಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಿರಾಳರಾದಂತಾಗಿದೆ.


ಬೆಂಗಳೂರು: ಪೋಕ್ಸೊ ಕೇಸ್‌ನಲ್ಲಿ (Pocso Case) ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (B. S. Yediyurappa) ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಇತರೆ ಮೂವರ ವಿರುದ್ಧದ ಪೋಕ್ಸೊ ಪ್ರಕರಣಕ್ಕೆ ಹೈಕೋರ್ಟ್ (Karnataka High court) ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಮುಂದಿನ ವಿಚಾರಣೆವರೆಗೆ ವಿಚಾರಣಾಧೀನ ನ್ಯಾಯಾಲಯಕ್ಕೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದೆ. ಇದರಿಂದ ಎರಡನೇ ಸುತ್ತಿನ ದಾವೆಯಲ್ಲಿ ಸದ್ಯಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಿರಾಳರಾದಂತಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಮಾರ್ಚ್ 15ರಂದು ಖುದ್ದು ವಿಚಾರಣೆ ಹಾಜರಾಗುವಂತೆ ವಿಶೇಷ ನ್ಯಾಯಾಲಯ ಜಾರಿ ಮಾಡಿರುವ ಸಮನ್ಸ್ ರದ್ದತಿ ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವೈ.ಎಂ. ಅರುಣ, ರುದ್ರೇಶ್ ಮರಳುಸಿದ್ದಯ್ಯ ಮತ್ತು ಜಿ ಮರಿಸ್ವಾಮಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಏಕಸದಸ್ಯ ಪೀಠ ನಡೆಸಿದೆ.
ವಾದ ಪ್ರತಿವಾದ ಆಲಿಸಿದ ಪೀಠವು, ಯಡಿಯೂರಪ್ಪ ಮತ್ತು ಇತರರ ವಿರುದ್ಧದ ವಿಶೇಷ ನ್ಯಾಯಾಲಯದಲ್ಲಿ ಬಾಕಿ ಇರುವ ಪೋಕ್ಸೊ ಕಾಯ್ದೆ ಮತ್ತು ಐಪಿಸಿ ಸೆಕ್ಷನ್‌ಗಳಾದ 354A, 204, 214 ಜತೆಗೆ 37ರ ಅಡಿ ಪ್ರಕರಣಕ್ಕೆ ತಡೆ ನೀಡಲಾಗಿದೆ. ಎಲ್ಲಾ ಅರ್ಜಿದಾರರಿಗೂ ವಿಚಾರಣಾಧೀನ ನ್ಯಾಯಾಲಯದಲ್ಲಿ ಖುದ್ದು ಹಾಜರಾತಿಯಿಂದ ಮುಂದಿನ ವಿಚಾರಣೆವರೆಗೆ ವಿನಾಯಿತಿ ಕಲ್ಪಿಸಲಾಗಿದೆ ಎಂದು ಆದೇಶಿಸಿ, ವಿಚಾರಣೆ ಮುಂದೂಡಿದೆ.
ಏನಿದು ಪ್ರಕರಣ?
ಮಾಜಿ ಸಿಎಂ ಯಡಿಯೂರಪ್ಪ ನನ್ನ 17 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ನೀಡಿದ್ದರು. ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ನಂತರ ಈ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿತ್ತು.
ಈ ಸುದ್ದಿಯನ್ನೂ ಓದಿ | Aamir Khan: 60ನೇ ವರ್ಷಕ್ಕೆ ಕಾಲಿಡುತ್ತಿರುವ ಆಮೀರ್ ಖಾನ್ ಕುಟುಂಬಸ್ಥರನ್ನು ಭೇಟಿಯಾಗಿ ಗೌರಿ ಸ್ಪ್ರಾಟ್ ಹೇಳಿದ್ದೇನು?
ಪೋಕ್ಸೊ ಕೇಸ್‌ನಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ಹೈಕೋರ್ಟ್ ಇತ್ತೀಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಅಲ್ಲದೇ ಪ್ರಕರಣದಲ್ಲಿ ಬಂಧಿಸದಂತೆ ಸೂಚನೆ ನೀಡಿತ್ತು. ಬಳಿಕ ವಿಚಾರಣೆಯ ಖುದ್ದು ಹಾಜರಾತಿಗೆ ವಿನಾಯಿತಿ ನೀಡಲಾಗಿತ್ತು.